ಶಿವಮೊಗ್ಗ : ಶಿವಮೊಗ್ಗದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಕಛೇರಿ ಮತ್ತು ವ್ಯವಸ್ಥಾಪಕರ ಕಛೇರಿ ಹಾಗೂ ಇಬ್ಬರು ಅಧಿಕಾರಿಗಳಿಗೆ ಸೇರಿದ ಹಲವೆಡೆ ಬೆಳಿಗ್ಗೆಯಿಂದಲೇ ಲೋಕಾಯುಕ್ತ ಅಧಿಕಾರಿಗಳ ಐದು ತಂಡ ಏಕ ಕಾಲದಲ್ಲಿ ದಾಳಿಮಾಡಿ ಪರಿಶೀಲನೆ ನಡೆಸುತ್ತಿದೆ.

ಬಿಸಿಎಂ ಇಲಾಖೆಯ ಜಿಲ್ಲಾಧಿಕಾರಿ ಕೆ.ಆರ್.ಶೋಭಾರವರ ಮನೆ ಹಾಗೂ ಅವರಿಗೆ ಸೇರಿದ ಶಿಕಾರಿಪುರ ಮತ್ತು ಸಾಗರದಲ್ಲೂ ದಾಳಿ ನಡೆದಿದೆ. ಶಿಕಾರಿಪುರ ಪಟ್ಟಣದ ಚನ್ನಕೇಶವ ನಗರದಲ್ಲಿನ ಮನೆ ಮತ್ತು ತರಲಘಟ್ಟ ಬಳಿಯ ೪ ಎಕರೆ ತೋಟ ಹಾಗೂ ಫಾರ್ಮ್ಹೌಸ್ ಮತ್ತು ಅವರ ಒಡೆತನದ ಸಾಗರ ತಾಲ್ಲೂಕಿನ ಆಚಾಪುರದ ಬಳಿಯ ಶಾಲೆ, ನವುಲೆ ಬಳಿಯ ಮನೆಯಲ್ಲೂ ಹಾಗೂ ಕೆಇಬಿ ವೃತ್ತದಲ್ಲಿರುವ ಬಿಸಿಎಂ ಜಿಲ್ಲಾ ಕಛೇರಿಯ ಮೇಲೂ ದಾಳಿಮಾಡಿ ಆದಾಯ ಮೀರಿದ ಆಸ್ತಿಯ ಬಗ್ಗೆ ಕಡತ ಪರಿಶೀಲನೆ ಮಾಡುತ್ತಿದ್ದಾರೆ. ಬಿಸಿಎಂ ಇಲಾಖೆಯ ವ್ಯವಸ್ಥಾಪಕ ರಾಘವೇಂದ್ರ ಅವರ ಚಾಲುಕ್ಯ ನಗರದಲ್ಲಿರುವ ಮನೆಯ ಮೇಲೆ ಕೂಡ ದಾಳಿಮಾಡಿ ದಾಖಲೆ ಪರಿಶೀಲಿಸಲಾಗುತ್ತಿದೆ.
ದಾವಣಗೆರೆಯ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಶಿವಮೊಗ್ಗ, ಹಾವೇರಿ, ದಾವಣಗೆರೆ ಲೋಕಾಯುಕ್ತ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ.