ಬೆಂಗಳೂರು,ಏ.05: ಎಲ್ಲರ ಲೆಕ್ಕಾಚಾರಗಳನ್ನು ಬುಡಮೇಲು ಮಾಡುವ ಹಾಗೂ ಅನೇಕರ ರಾಜಕೀಯ ಭವಿಷ್ಯಕ್ಕೆ ತೊಡರುಗಾಲು ಹಾಕುವ ವಿಧಾನಸಭೆ ಹಾಗೂ ಲೋಕಸಭಾ ಕ್ಷೇತ್ರಗಳ ಕ್ಷೇತ್ರ ಪುನರ್ ವಿಂಗಡಣೆ ನಡೆಯಲಿದ್ದು, ಕರ್ನಾಟಕದ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 336ಕ್ಕೆ ಏರಿಕೆಯಾಗಲಿದೆ.

ಕರ್ನಾಟಕದ ಹಾಲಿ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 224 ಇದ್ದು, ಕ್ಷೇತ್ರ ಪುನರ್ ವಿಂಗಡಣೆ ನಂತರ ಇದರ ಸಂಖ್ಯೆ 336ಕ್ಕೆ ಹೆಚ್ಚಳವಾಗಲಿದೆ. ಇದೇ ರೀತಿ 28 ಲೋಕಸಭಾ ಕ್ಷೇತ್ರಗಳ ಸಂಖ್ಯೆಯಲ್ಲಿ ಭಾರೀ ಬದಲಾವಣೆಯಾಗಲಿದ್ದು, ರಾಜ್ಯದಲ್ಲಿ ಸಂಸದರ ಕ್ಷೇತ್ರಗಳ ಸಂಖ್ಯೆ ಕೂಡ 42ಕ್ಕೆ ಹಿಗ್ಗಲಿದೆ. ಪ್ರತಿ ಒಂದು ಲೋಕಸಭಾ ಕ್ಷೇತ್ರಕ್ಕೆ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಂತೆ ಪುನ ವಿಂಗಡಣೆ ನಡೆಯಲಿದೆ. ಈಗಾಗಲೇ ಸಂಸತ್ತಿನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ – 2023 ( ನಾರಿ ಶಕ್ತಿ ವಂದನಾ ಅಧಿನಿಯಮ್) ಅಂಗೀಕಾರವಾಗಿದೆ.
ಕ್ಷೇತ್ರ ಪುನರ್ ವಿಂಗಡನೆಯಾದ ನಂತರ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 336ಕ್ಕೆ ಏರಿಕೆಯಾದರೆ ಮೊದಲ ಬಾರಿಗೆ ವಿಧಾನಸಭೆಯಲ್ಲಿ 110 ಮಹಿಳಾ ಸದಸ್ಯರಿಗೆ ಅವಕಾಶ ಸಿಗಲಿದೆ. (ಇದರಲ್ಲಿ ಪರಿಶಿಷ್ಟ ಜಾತಿಯವರಿಗೆ ಶೇ. 17 , ಮತ್ತು ಪರಿಶಿಷ್ಟ ವರ್ಗದವರಿಗೆ ಶಶಿವಮೊಗ್ಗ ಸೇರಿದಂತೆ ಶೇ. 24 ರಷ್ಟು ಮೀಸಲಾತಿ ನೀಡಬೇಕು.) ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ಒದಗಿಸುವ ಕಾಯ್ದೆಯು ಕ್ಷೇತ್ರ
ಪುನರ್ ವಿಂಗಡಣೆ ಜೊತೆಗೆ ಅನುಷ್ಠಾನವಾಗಲಿದೆ. ಮೂಲಗಳ ಪ್ರಕಾರ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಮೇ.4 ರಂದು ಪ್ರಕಟಗೊಳ್ಳಲಿದೆ. ಬಳಿಕ ಕೇಂದ್ರದ ಎನ್ಡಿಎ ಸರ್ಕಾರ ಮೇ 2 ಇಲ್ಲವೇ 3ನೇ ವಾರದಲ್ಲಿ ಸಂಸತ್ತಿನ ಉಭಯ ಸದನಗಳ ವಿಶೇಷ ಅಧಿವೇಶನ ಕರೆಯಲಿದೆ ಎಂದು ತಿಳಿದುಬಂದಿದೆ.
ಕ್ಷೇತ್ರ ಪುನರ್ ವಿಂಗಡಣೆ ಮಸೂದೆ ಅಂಗೀಕಾರವಾದ ನಂತರ ಆಯೋಗವು ಆಯಾ ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರಗಳ ಗಡಿಯನ್ನು ಗುರುತಿಸುವ ಪ್ರಕ್ರಿಯೆಯನ್ನು ಆರಂಭಿಸಲಿದೆ.
ಮಲೆನಾಡು ಜಿಲ್ಲೆಗಳಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ 2 ಲಕ್ಷಕಿಂತ ಮೀರಿದ ಮತದಾರರ ಕ್ಷೇತ್ರ ಕಡಿಮೆಯಿದ್ದು, ವಿಧಾನಸಭಾ ಕ್ಷೇತ್ರಗಳು ಹೆಚ್ಚಾಗುವ ಸಂಭವವಿಲ್ಲ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಆದರೆ ಕರಾವಳಿ ಜಿಲ್ಲೆಯ ದಕ್ಷಿಣಕನ್ನಡ ಮತ್ತು ಉಡುಪಿಯಲ್ಲಿ ಹೆಚ್ಚಿನ ಮತದಾರರ ಸಂಖ್ಯೆ ಹೆಚ್ಚಿರುವುದರಿಂದ ಎರಡು ಕ್ಷೇತ್ರಗಳ ಹೆಚ್ಚುವರಿ ಮತದಾರರನ್ನು ಸೇರಿಸಿ ಇನ್ನೊಂದು ಕ್ಷೇತ್ರ ಹುಟ್ಟಿಕೊಳ್ಳುವ ಸಂಭವ ವಿದೆ.
ಹಿಗ್ಗಲಿದೆ ರಾಜಧಾನಿಯ ಕ್ಷೇತ್ರಗಳ ಸಂಖ್ಯೆ
ಕ್ಷೇತ್ರ ಪುನರ್ ವಿಂಗಡಣೆಯಾದರೆ ರಾಜಧಾನಿ ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 48ಕ್ಕೆ ಏರಿಕೆಯಾಗಲಿದೆ. ಬೆಂಗಳೂರಿನಲ್ಲಿ ಪ್ರಸ್ತುತ 28 ವಿಧಾನಸಭಾ ಕ್ಷೇತ್ರಗಳಿದ್ದು, ಹೆಚ್ಚುವರಿಯಾಗಿ 20 ಕ್ಷೇತ್ರಗಳು ಹೊಸದಾಗಿ ಸೇರಲಿವೆ.ಅತಿ ದೊಡ್ಡ ಕ್ಷೇತ್ರಗಳಾಗಿರುವ ರಾಜರಾಜೇಶ್ವರಿನಗರ 3, ಯಶವಂತಪುರ 3, ಬೆಂಗಳೂರು ದಕ್ಷಿಣ 3, ಬೊಮನಹಳ್ಳಿ 2, ಮಹಾದೇವಪುರ 3, ಯಲಹಂಕ 2, ರಾಜಾಜಿನಗರ 2, ಹೆಬ್ಬಾಳ 2, ಶಿವಾಜಿನಗರ 2, ಗಾಂಧಿನಗರ 2, ಕೆ.ಆರ್.ಪುರಂ 3, ಬ್ಯಾಟರಾಯನಪುರ 2 ಸೇರಿದಂತೆ ಒಟ್ಟು 20 ವಿಧಾನಸಭಾ ಕ್ಷೇತ್ರಗಳು ಸೃಜನೆಯಾಗಲಿವೆ. ಬೆಂಗಳೂರು ಹೊರತುಪಡಿಸಿದರೆ 2ನೇ ಅತಿದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಪ್ರಸ್ತುತ 18 ವಿಧಾನಸಭಾ ಕ್ಷೇತ್ರಗಳಿದ್ದು, ಹೆಚ್ಚುವರಿಯಾಗಿ 7ರಿಂದ 10 ಕ್ಷೇತ್ರಗಳು ಸೃಷ್ಟಿಯಾಗಲಿವೆ.
ಶಿವಮೊ ಜಿಲ್ಲೆಯಲ್ಲಿ ಹಾಲಿ ಇರುವ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ ಎರಡಾಗಲಿದೆ . ಶಿವಮೊಗ್ಗ ಉತ್ತರ ಮತ್ತು ಶಿವಮೊಗ್ಗ ದಕ್ಷಿಣ. ಗ್ರಾಮಾಂತರ ಕ್ಷೇತ್ರ ಕೂಡ ಎರಡಾಗಲಿದೆ. ಹೊಳೆಹೊನ್ನೂರು ಮತ್ತು ಆಯನೂರು. ಹೊಸನಗರ ಮರುಸ್ಥಾಪನೆಯಾಗಲಿದೆ. ಶಿರಾಳಕೊಪ್ಪ ಹೊಸದಾಗಿ ವಿಧಾನಸಭಾ ಕ್ಷೇತ್ರವಾಗಲಿದೆ. ಒಟ್ಟೂ 10 ಕ್ಷೇತ್ರ ಆಗಲಿದೆ
ಬೈಂದೂರು ಮತ್ತೆ ಉಡುಪಿಗೆ
ಬೈಂದೂರು ಕ್ಷೇತ್ರ ಮತ್ತೆ ಉಡುಪಿ ಲೋಕಸಭೆ ಕ್ಷೇತ್ರ ಸೇರಲಿದೆ. ಉಡುಪಿ ಸ್ವತಂತ್ರ ಲೋಕಸಭೆ ಸ್ಥಾನ ಪಡೆಯಲಿದೆ. ಬ್ರಹ್ಮಾವರ ಮತ್ತು ಹೆಬ್ರಿ ವಿಧಾನಸಭಾ ಕ್ಷೇತ್ರಗಳಾಗಲಿವೆ.
ಚಿಕ್ಕಮಗಳೂರಿನಲ್ಲಿ ಎನ್ ಆರ್ ಪುರ ಅಜ್ಜಂಪುರ ಮತ್ತು ಬೀರೂರು ಹೊಸ ವಿಧಾನಸಭಾ ಕ್ಷೇತ್ರಗಳಾಗಲಿವೆ. ಚಿಕ್ಕಮಗಳೂರು ಸ್ವತಂತ್ರ ಲೋಕಸಭೆ ಕ್ಷೇತ್ರ ಆಗಲಿದೆ.
ದಾವಣಗೆರೆ ಜಿಲ್ಲೆಯಲ್ಲಿ ನ್ಯಾಮತಿ. ಸಂತೆಬೆನ್ನೂರು ವಿಧಾನಸಭಾ ಕ್ಷೇತ್ರ ರಚನೆ ಆಗಲಿದೆ.