ಶಿವಮೊಗ್ಗ : ನಗರದಲ್ಲಿ ಗೃಹಬಳಕೆ ಮತ್ತು ವಾಣಿಜ್ಯ ಬಳಕೆ ಅಡುಗೆ ಅನಿಲದ ಅಭಾವ ತಾರಕಕ್ಕೇರಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಡುಗೆ ಅನಿಲ ವಿತರಣೆಯಲ್ಲಿ ನಗರದಲ್ಲಿರುವ ಕೆಲವು ವಿತರಕರು ಕಳ್ಳಾಟವಾಡುತ್ತಿದ್ದಾರೆ. ಗೃಹಬಳಕೆಯ ೧೪ ಕೆ.ಜಿ. ಅನಿಲದ ಸಿಲಿಂಡರ್ನ ಇಂದಿನ ಬೆಲೆ ೯೨೬ ಇದ್ದು, ಅದನ್ನು ಕೆಲ ವಿತರಕರು ಗುಪ್ತವಾಗಿ ಅದನ್ನು ೩೦೦೦ ರೂ.ಗಳಿಗೆ ಮಾರುತ್ತಿದ್ದಾರೆ. ವಾಣಿಜ್ಯ ಬಳಕೆ ೧೯ ಕೆ.ಜಿ. ಸಿಲಿಂಡರ್ನ ಇಂದಿನ ಬೆಲೆ ೨೧೨೨ ರೂ. ಇದ್ದು, ೪೦೦೦ ರೂ.ಗಳಿಗೆ ಮಾರುತ್ತಿದ್ದಾರೆ. ೫ ಕೆ.ಜಿ. ವಾಣಿಜ್ಯ ಬಳಕೆ ಸಿಲಿಂಡರ್ ಬೆಳೆ ೬೧೬ ರೂ.ಗಳಿದ್ದು ಅದನ್ನು ೧೫೦೦ ರೂ.ಗೆ ಮಾರುತ್ತಿದ್ದಾರೆ ಎಂಬುದು ಕೆಲವು ವಾಣಿಜ್ಯ ಗ್ರಾಹಕರ ಆರೋಪವಾಗಿದೆ. ಈಗಾಗಲೇ ಕೆಲವರು ಸೌದೆ ಒಲೆಯನ್ನು ಬಳಸುತ್ತಿದ್ದಾರೆ. ನಗರದ ಪ್ರಮುಖ ಹೋಟೆಲ್ಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಸಿಲಿಂಡರ್ ಕೊರತೆಯ ಪರಿಣಾಮ ವಾಣಿಜ್ಯ ವ್ಯವಹಾರಗಳ ಮೇಲೆ ಆಗಿದ್ದು, ಬಹುತೇಕ ಹೋಟೆಲ್, ಬೇಕರಿ ಮತ್ತು ತಿಂಡಿಗಾಡಿಗಳ ಮಾಲೀಕರ ಪ್ರಕಾರ ಈಗಾಗಲೇ ಶೇ.೫೦ರಷ್ಟು ವ್ಯಾಪಾರ ಕಡಿಮೆಯಾಗಿದೆ. ಗ್ಯಾಸ್ ಆಧಾರಿತ ಬಹುತೇಕ ತಿಂಡಿಗಳನ್ನು ನಿಲ್ಲಿಸಿದ್ದೇವೆ. ಇದರ ಪರಿಣಾಮ ಗ್ರಾಹಕರು ಕಡಿಮೆಯಾಗಿದ್ದಾರೆ. ಮತ್ತು ನಾವು ಬಳಸುವ ಅಡಿಗೆ ಪದಾರ್ಥಗಳು ಮತ್ತು ತರಕಾರಿಗಳನ್ನು ಕೂಡ ಕಡಿಮೆ ಪ್ರಮಾಣದಲ್ಲಿ ಬಳಸುವುದರಿಂದ ಬೇರೆ ವ್ಯಾಪಾರಗಳ ಮೇಲೂ ಪರಿಣಾಮ ಬೀರಿದೆ. ಕಾರ್ಮಿಕರಿಗೆ ಸಂಬಳ ನೀಡಲಾಗುತ್ತಿಲ್ಲ. ಪರಿಣಾಮ ಬಹುತೇಕ ಕಾರ್ಮಿಕರು ಕೆಲಸ ಬಿಟ್ಟು ಹೋಗುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಡುಗೆ ಅನಿಲ ಕೊರತೆಯಿಂದ ಉಂಟಾಗುವ ಗಂಭಿರ ಪರಿಣಾಮಗಳ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಜನರು ಧಂಗೆ ಏಳುವ ಪರಿಸ್ಥಿತಿ ಎಂದು ವಾಣಿಜ್ಯೋದ್ಯಮಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗೃಹಬಳಕೆಯ ಗ್ರಾಹಕರು ಕೂಡ ಸಿಲಿಂಡರ್ ಬುಕ್ಮಾಡಿ, ೧೫-೨೦ ದಿನವಾದರೂ ಬರುತ್ತಿಲ್ಲ. ಪ್ರಭಾವಿಗಳಿಗೆ ಮಾತ್ರ ಲಭಿಸುತ್ತಿದೆ. ಬಡವರಿಗೆ ಗಾಯದ ಮೇಲೆ ಬರೆ ಎಳೆದಂತ್ತಾಗಿದ್ದು, ಸರ್ಕಾರ ಗಂಭೀರವಾಗಿ ಯೋಚಿಸಿ ಗೃಹಬಳಕೆ ಸಿಲಿಂಡರ್ ಬಳಸುತ್ತಿರುವ ವಾಣಿಜ್ಯ ಮಳಿಗೆಗಳ ಮೇಲೆ ಮತ್ತು ಅವರಿಗೆ ಸರಬರಾಜು ಮಾಡುತ್ತಿರುವ ವಿತರಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಬಗ್ಗೆ ಅನಿಲ ವಿತರಕರೊಬ್ಬರು ಪ್ರತಿಕ್ರಿಯಿಸಿ, ಅಡುಗೆ ಅನಿಲ ಸರಬರಾಜು ಮಾಡುವ ಕಂಪನಿಗಳು ಬಹಳಷ್ಟು ಕಠಿಣಕ್ರಮ ಕೈಗೊಂಡಿದೆ.
ಸರ್ಕಾರದ ಆಹಾರ ಇಲಾಖೆ ಹದ್ದಿನ ಕಣ್ಣು ಇಟ್ಟಿದೆ. ನಮಗೆ ವಾಣಿಜ್ಯ ಬಳಕೆ ಸಿಲಿಂಡರ್ಗಳು ಬೇಡಿಕೆಯ ಶೇ.೩೦ರಷ್ಟು ಮಾತ್ರ ಸರಬರಾಜು ಆಗುತ್ತಿದೆ. ಗೃಹಬಳಕೆಯ ಸಿಲಿಂಡರ್ ಬೇಡಿಕೆಯ ಶೇ.೧೫ರಷ್ಟು ಮಾತ್ರ ಪೂರೈಕೆ ಆಗುತ್ತಿದೆ. ಪ್ರತಿನಿತ್ಯ ೪೦೦ ರಿಂದ ೫೦೦ ಗ್ರಾಹಕರು ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ. ನಮಗೆ ತೈಲ ಕಂಪನಿಗಳ ಮಾರ್ಗದರ್ಶನದಂತೆ ನಾವು ಪ್ರಾಮಾಣಿಕವಾಗಿ ಸರಬರಾಜಿಗೆ ಕ್ರಮ ಕೈಗೊಳ್ಳುತ್ತಿದ್ದೇವೆ. ಒಂದು ಸಿಲಿಂಡರ್ ಮಾತ್ರ ಇರುವವರಿಗೆ ಮೊದಲ ಆದ್ಯತೆ ನೀಡಬೇಕೆಂದು ಸರ್ಕಾರ ತಿಳಿಸಿದೆ. ಬೇಡಿಕೆಯ ಪ್ರಮಾಣ ಹೆಚ್ಚಾಗಿದೆ. ಸರಬರಾಜು ಪ್ರಮಾಣ ಒಟ್ಟಾರೆಯಾಗಿ ಶೇ.೨೫ರಷ್ಟು ಇದ್ದು ಅಡುಗೆ ಅನಿಲದ ಕೊರತೆಯಾಗಿದೆ ಎಂಬ ಆತಂಕದಿಂದ ನಾಗರೀಕರು ಪ್ಯಾನಿಕ್ ಆಗಿ ವರ್ತಿಸುವುದು ಬೇಡ. ತಾಳ್ಮೆಯಿಂದ ಸಹಕರಿಸಿದರೆ ಎಲ್ಲರಿಗೂ ಅಡುಗೆ ಅನಿಲ ಸಿಗುತ್ತದೆ. ಅನಿಲ ಸರಬರಾಜು ಕಂಪನಿಗಳು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡಬೇಕು. ಸರ್ಕಾರ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.