ಶಿವಮೊಗ್ಗ : ವ್ಯಾಪಾರ, ವಹಿವಾಟಿನ ಮೂಲಕ ಆರ್ಯವೈಶ್ಯ ಸಮಾಜ ರಾಜ್ಯದ ಪ್ರಗತಿಗೆ ಕೊಡುಗೆ ನೀಡುತ್ತಿದೆ ಎಂದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಭಿಪ್ರಾಯಪಟ್ಟರು.
ಆರ್ಯವೈಶ್ಯ ಸ್ನೇಹಿತರ ಬಳಗ, ವಾಸವಿ ಮಹಿಳಾ ಸಂಘದ ವತಿಯಿಂದ ನಗರದ ಅಲ್ಲಮಪ್ರಭು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ‘ಶೆಟ್ಟರ ಸಂತೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಂಕಲ್ಪದಂತೆ ವಿಕಸಿತ ಭಾರತವಾಗಲು ಆರ್ಯವೈಶ್ಯರ ಸೇವೆ ಗಣನೀಯವಾಗಿದೆ. ಆಗಿನ ಕಾಲದಲ್ಲಿ ಬಳೆಗಾರ ಚನ್ನಯ್ಯ ಅವರು ವ್ಯಾಪಾರದ ಜತೆಗೆ ಸಂಬಂಧಗಳನ್ನು ಬೆಸೆಯುವ ಕೆಲಸ ಮಾಡುತ್ತಿದ್ದರು. ನಂತರ ಅಂಚೆ ಅಣ್ಣ ಬಂದ. ಆದರೆ ಈಗಿನ ಯುಗದಲ್ಲಿ ಪೋಷಕರು ಮತ್ತು ಮಕ್ಕಳ ನಡುವೆ ಸಂಬಂಧದ ಕೊಂಡಿಯೇ ಕಳಚುತ್ತಿದೆ. ಹಿರಿಯರು, ಸಹೋದರರ ನಡುವೆ ಸಂಬಂಧ ಬೆಸೆಯುವ ಅವಶ್ಯಕತೆ ಇದೆ. ಇದಕ್ಕೆ ಶೆಟ್ಟರ ಸಂತೆಯಂತಹ ಕಾರ್ಯಕ್ರಮಗಳು ಪೂರಕ ವಿಕಸಿತ ಭಾರತದ ಸಂಕಲ್ಪ ನನಸಾಗಲು ಆರ್ಯವೈಶ್ಯ ಸಮಾಜದ ಕೊಡುಗೆ ಅಪಾರ ಎಂದರು.
ಆರ್.ಎಸ್.ಎಸ್. ಪ್ರಮುಖ ಪಟ್ಟಾಭಿರಾಂ ಮಾತನಾಡಿ, ಭಾರತದಲ್ಲಿ ಎಷ್ಟೇ ಧರ್ಮ, ಜಾತಿ ಮತ ಪಂಥಗಳಿದ್ದರೂ ಎಲ್ಲದರ ಮೂಲ ಉದ್ದೇಶ ಭಾರತ ಮಾತೆಯ ಹಿತ. ಅದಕ್ಕಾಗಿ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕಿದೆ ಎಂದು ಸಲಹೆ ನೀಡಿದರು. ಶೆಟ್ಟರ ಸಂತೆಯು ಅಹಂಕಾರ ಬೆಳೆಸುವ ಸಾಧನವಲ್ಲ, ಬದಲಿಗೆ ಭಾರತ ಮಾತೆಗೆ ಸಲ್ಲಿಸುವ ಭಾವವಾಗಿದೆ. ಇಲ್ಲಿ ಎಲ್ಲರೂ ಒಗ್ಗೂಡಬೇಕು, ಒಂದಾಗಬೇಕು. ಪ್ರಪಂಚ ನಿರಂತರ ಬದಲಾಗುತ್ತಿದ್ದು, ಕೃತಕ ಬುದ್ದಿಮತ್ತೆ (ಎಐ) ಯುಗದಲ್ಲಿ ನಾವಿದ್ದೇವೆ. ಈಗಿನ ತಂತ್ರಜ್ಞಾನ ಅನೇಕ ಉದ್ಯೋಗಗಳನ್ನು ನುಂಗುತ್ತಿದೆ. ಈ ನಡುವೆ ಶೆಟ್ಟರ ಸಂತೆ ಹೊಸ ಉದ್ಯೋಗಗಳನ್ನು ಸೃಜಿಸಲು ವೇದಿಕೆಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ನಮ್ಮ ದೇಶದಲ್ಲಿ ಋಷಿಮುನಿಗಳ ಉದ್ದೇಶ ವಿಕೇಂದ್ರೀಕರಣವಾಗಿತ್ತು. ಸಾವಿರಾರು ಜಾತಿ, ಪಂಥಗಳು, ಸಂಪ್ರದಾಯಗಳು, ಸಂಸ್ಕಾರ, ಸಂಸ್ಕೃತಿ ವಿಭಿನ್ನವಾಗಿದ್ದರೂ ಸಹ ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜದ ಸಾಮರಸ್ಯ ಮತ್ತು ಸಮನ್ವಯತೆಗೆ ಹಿರಿಯರು ಬುನಾದಿ ಹಾಕಿಕೊಟ್ಟಿದ್ದಾರೆ. ಇಡೀ ಭಾರತೀಯರು ನಮ್ಮ ಸ್ನೇಹಿತರು. ಯಾವತ್ತೂ ಯಾವುದೇ ಆಧುನಿಕ ತಂತ್ರಜ್ಞಾನಗಳು ಕೂಡ ನಮ್ಮ ಕೌಟುಂಬಿಕ ಸಾಮರಸ್ಯ ಮತ್ತು ಸಂಬಂಧಗಳನ್ನು ಕಸಿಯುವಂತ್ತಿರಬಾರದು ಬೆಸೆಯುವಂತ್ತಿರಬೇಕು. ಶೆಟ್ಟರ ಸಂತೆ ಎಲ್ಲರನ್ನು ಬೆಸೆದು ವಾಸವಿ ಮಾತೆಗೆ ಸಲ್ಲಿಸುವ ಸಮರ್ಪಣೆಯ ಸಂತೆಯಾಗಿದೆ. ಈ ರೀತಿಯ ಅಪರೂಪದ ಕಾರ್ಯಕ್ರಮ ಸಮಾಜ ಗಟ್ಟಿಯಾಗಿ ಒಂದಾಗಿರಲು ಸಹಕಾರಿಯಾಗುತ್ತದೆ ಎಂದರು.
ಕುವೆಂಪು ಅವರು ಎಲ್ಲರೂ ಒಂದೆಂಬ ಸಂದೇಶ ಸಾರಿದರು. ಆದರೆ, ಅವರನ್ನೇ ಒಂದು ಜಾತಿಗೆ ಮೀಸಲುಗೊಳಿಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್, ಶೆಟ್ಟರ ಸಂತೆಯನ್ನು ಬ್ಯಾಂಡ್ ಮಾಡಬೇಕೆಂಬ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.
ಯುವಕರನ್ನು ಭಜನೆಯ ಕಡೆಗೆ ಸೆಳೆಯಲು ವಾಸು ದೀಕ್ಷಿತ್ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಎರಡು ವರ್ಷಕ್ಕೊಮ್ಮೆ ಸಂತೆ ಮಾಡುವ ಯೋಚನೆ ಇದೆ. ಅದಕ್ಕೆ ಸಾರ್ವಜನಿಕರು ಸಹಕರಿಸಬೇಕು. ಉದ್ಯಮ ಆರಂಭಿ ಸುವುದು ನಮ್ಮ ಮೂಲ ಉದ್ದೇಶವಾಗಿದ್ದು, ಆಹಾರ ಸೇರಿದಂತೆ ಸ್ವಯಂ ಉದ್ಯೋಗ ಆರಂಭಕ್ಕೆ ಸಾಕಷ್ಟು ಅವಕಾಶಗಳಿವೆ. ಅದಕ್ಕೆ ಶೆಟ್ಟರ ಸಂತೆ ಬಲ ನೀಡಲಿದೆ ಎಂದರು.
ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಸ್ವದೇಶಿ ಜಾಗರಣ ಮಂಚ್ ಪ್ರಮುಖ ಜಗದೀಶ್, ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ಪ್ರತಿಭಾ ಅರುಣ್, ನಾರಾಯಣ್, ಎಸ್.ವಿ. ಭಾರತ್, ಪ್ರಮುಖರಾದ ಟಿ.ಆರ್.ಅಶ್ವತ್ ಭೂಪಾಳಂ ಶಶಿಧರ್, ಡಿ.ಎಲ್. ಮಂಜುನಾಥ್ ಇತರರಿದ್ದರು.
ಚಲನಚಿತ್ರಗಳ ಗಾಯನ ಕಾರ್ಯಕ್ರಮ ಶಿವಮೊಗ್ಗದ ಕಲಾವಿದರು ಹಳೆಯ ನಡೆಸಿಕೊಟ್ಟರು. ಸಂತೆಯಲ್ಲಿ ಹಲವು ಬಗೆಯ ಖಾದ್ಯಗಳ ಮಳಿಗೆಗಳನ್ನು ಹಾಕಲಾಗಿದ್ದು, ಮೊದಲ ದಿನವೇ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಜತೆಗೆ, ಗೃಹಬಳಕೆ ವಸ್ತುಗಳು, ಬಟ್ಟೆ ಸೇರಿದಂತೆ ವಿವಿಧ ಸಾಮಗ್ರಿಗಳ ಮಳಿಗೆಗಳನ್ನು ತೆರೆಯಲಾಗಿದೆ.