ಶಿವಮೊಗ್ಗ : ಪರಿಸರ ವಿನಾಶದ ಶರಾವತಿ ಪಂಪ್ಡ್ ಸ್ಟೋರೇಜ್ ವಿರೋಧಿಸಿ ಪರಿಸರಕ್ಕಾಗಿ ನಾವು, ರಾಷ್ಟ್ರಭಕ್ತರ ಬಳಗ ಹಾಗೂ ವಿವಿಧ ಪರಿಸರ ಸಂಘಟನೆಗಳ ಸಹಯೋಗದಲ್ಲಿ ಏ.೧೬ರಂದು ಶಿವಮೊಗ್ಗ ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಹುವಿವಾದಿತ ಶರಾವತಿ ಪಂಪ್ಡ್ ಸ್ಟೋರೇಜ್ಗೆ ಸಂಬಂಧಿಸಿದಂತೆ ಕೆಪಿಸಿಎಲ್ ಬೇಜವಾಬ್ದಾರಿಯಾಗಿ ನಡೆದುಕೊಳ್ಳುತ್ತಿದೆ. ಇಲ್ಲಿಯವರೆಗೆ ಯೋಜನೆ ಕುರಿತು ವಿವರ ಮಾಹಿತಿ ಕೊಡುವಂತೆ ನಾಲ್ಕೈದು ಭಾರಿ ಡಿಸಿ ಮೂಲಕ ಮನವಿ ಸಲ್ಲಿಸಿದರೂ ಯಾವುದೇ ಮಾಹಿತಿ ನೀಡುತ್ತಿಲ್ಲ. ಜಿಲ್ಲಾಧಿಕಾರಿಗಳು ಕೆಪಿಸಿಎಲ್ಗೆ ವಿವರ ನೀಡುವಂತೆ ಕೇಳಿಕೊಂಡರೂ ಮಾಹಿತಿ ನೀಡುತ್ತಿಲ್ಲ. ಕೆಪಿಸಿಎಲ್ನ ಈ ಬೇಜಾಬ್ದಾರಿಯನ್ನು ಮಾನ್ಯ ಉಚ್ಛ ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದ ಅವರು, ಏ.೭ರ ಒಳಗಾಗಿ ತಮ್ಮ ಪತ್ರದ ಬಗ್ಗೆ ಉತ್ತರ ಕೊಡಿ ಇಲ್ಲವಾದಲ್ಲಿ ಲಿಖಿತ ರೂಪದಲ್ಲಿ ಉತ್ತರ ಕೊಡಿ ಎಂದು ಜಿಲ್ಲಾಧಿಕಾರಿಗಳು ಕೆಪಿಸಿಎಲ್ಗೆ ತಾಕೀತು ಮಾಡಿದ್ದಾರೆ ಎಂದರು.
ಈ ಯೋಜನೆಯಲ್ಲಿ ಯಾವುದೇ ಉನ್ನತ ಸ್ಥರದ ಮಂತ್ರಿಗಳು ಪಾಲುದಾರರಾಗಿ ಲೂಟಿ ಹೊಡೆಯಲು ನಾವು ಬಿಡುವುದಿಲ್ಲ. ಬಂಗಾರಮಕ್ಕಿ ಕ್ಷೇತ್ರದ ಶ್ರೀ ಮಾರುತಿ ಗುರೂಜಿಯವರು ಪ್ರಸ್ತಾವಿತ ಯೋಜನೆಯನ್ನು ಉಗ್ರವಾಗಿ ವಿರೋಧಿಸಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾರವು ಈ ಯೋಜನೆಗೆ ಇನ್ನು ಅನುಮತಿ ನೀಡಿಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ. ಈ ಮಧ್ಯದಲ್ಲಿ ರಾಜ್ಯ ಸರ್ಕಾರ ಯೋಜನೆಯ ಕುರಿತು ಟೆಂಡರ್ ಕರೆದಿದ್ದಾದರೂ ಏಕೆ ಎಂದು ಕಟುವಾಗಿ ಪ್ರಶ್ನಿಸಿದರು.
ಪರಿಸರ ಹೋರಾಟಗಾರ ಡಾ.ಶ್ರೀಪತಿ ಎಲ್.ಕೆ. ಮಾತನಾಡಿ, ೨೦೨೧ರಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಬಲಿತ ಮರ ಕಡಿತಲೆಗೆ ಸಂಬಂಧಿಸಿದಂತೆ ಅದರ ಮೌಲ್ಯ ಅಂದಾಜು ಮಾಡಲು ವಿಶೇಷ ಸಮಿತಿಯೊಂದನ್ನು ರಚಿಸಿತ್ತು. ಆ ಸಮಿತಿ ವರದಿ ಪ್ರಕಾರ ಒಂದು ಬಲಿತ ಮರಕ್ಕೆ ಒಂದು ವರ್ಷಕ್ಕೆ ೭೪,೫೦೦ ರೂ. ಮೌಲ್ಯ ಎಂದು ಅಂದಾಜಿಸಿತ್ತು. ೨೦೨೩ರಲ್ಲಿ ಸಮಿತಿಯು ಮರದ ಮೌಲ್ಯವನ್ನು ಒಂದು ವರ್ಷಕ್ಕೆ ೧ ಕೋಟಿ ರೂಪಾಯಿ ಎಂದು ನಿಗಧಿ ಮಾಡಿತ್ತು. ಒಂದು ಮರ ೧೦೦-೬೦೦ ವರ್ಷಗಳ ವರೆಗೆ ಬದುಕುತ್ತದೆ. ಇದರ ಅನ್ವಯ ಪ್ರಸ್ತುತ ಯೋಜನೆಯಲ್ಲಿ ಧರೆಗುರುಳುವ ಮರವೊಂದಕ್ಕೆ ೧೦೦ ವರ್ಷ ಆಯುಸ್ಸು ಎಂದು ಪರಿಗಣಿಸಿದರೂ ಈ ಯೋಜನೆಯಲ್ಲಿ ಕಡಿತಲೆಯಾಗುವ ೧೬,೦೦೦ ಮರಕ್ಕೆ ೧೧,೯೨೫ ಕೋಟಿ ರೂಪಾಯಿ ಹಾನಿಯಾಗುವುದು ಎಂದು ಅವರು ಪರಿಸರ ವಿನಾಶದ ಗಂಭೀರತೆಯನ್ನು ಬಿಚ್ಚಿಟ್ಟರು.
ಪಶ್ಚಿಮ ಬಂಗಾಳದಲ್ಲಿ ನಿರ್ಮಿತವಾದ ಐದು ಮೇಲ್ಸೇತುವೆ ನಿರ್ಮಾಣಕ್ಕೆ ೩೦೦ ಮರ ಕಡಿತಲೆ ಮಾಡಿದ್ದು ಅದರ ಮೌಲ್ಯ ೨೨೩ ಕೋಟಿ ರೂ. ಎಂದು ನಿಗಧಿಪಡಿಸಲಾಗಿದೆ. ಈ ಹಿನ್ನಲೆಯಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದಾಗುವ ಮರಗಳ ಹಾನಿಯ ಬಗ್ಗೆ ಕೆಪಿಸಿಎಲ್ ಗಮನಿಸಿ, ಕಡಿಮೆ ವೆಚ್ಚದ ಬ್ಯಾಟರಿ ಸ್ಟೋರೇಜ್ ಸ್ಥಾಪನೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಇನ್ನೋರ್ವ ಪರಿಸರ ಹೋರಾಟಗಾರ ಶ್ರೀಕಾಂತ್ ಮಾತನಾಡಿ, ಕೆಪಿಸಿಎಲ್ ತನ್ನ ಬಾಧ್ಯತೆಯನ್ನು ತಪ್ಪಿಸಿಕೊಳ್ಳುತ್ತಿದೆ. ಯೋಜನೆ ಡಿಪಿಆರ್ ಮಾಹಿತಿ ಕೋರಿದರೆ ಕೆಪಿಸಿಎಲ್ ಭದ್ರತೆ ನೆಪವೊಡ್ಡಿ ಕೊಡುತ್ತಿಲ್ಲ. ಇದರಿಂದ ಕೆಪಿಸಿಎಲ್ ಆರ್ಟಿಐ ಕಾಯ್ದೆಯನ್ನು ಉಲ್ಲಂಘಿಸುತ್ತಿದೆ. ಈ ಹಿಂದಿನ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ಆಡಳಿತಾವಧಿಯಲ್ಲಿ ಕಾರ್ಗಲ್ನಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಯೋಜನೆಯ ವಿರುದ್ಧ ಸುಮಾರು ೬೫ ಸಾವಿರಕ್ಕೂ ಹೆಚ್ಚು ದೂರುಗಳು ಸ್ವೀಕೃತವಾದರೂ ಯೋಜನೆಯ ವಿರುದ್ಧ ಯಾವುದೇ ಅರ್ಜಿಗಳು, ದೂರುಗಳು ಬಂದಿಲ್ಲ ಎಂದು ಗುರುದತ್ತ ಹೆಗಡೆ ಸರ್ಕಾರಕ್ಕೆ ವರದಿ ಸಲ್ಲಿಸುವುದರ ಮೂಲಕ ಕರ್ತವ್ಯಲೋಪ ಎಸಗಿದ್ದಾರೆ ಎಂದು ಆರೋಪಿಸಿದರು.
ರಾಷ್ಟ್ರಭಕ್ತ ಬಳಗದ ಮುಖಂಡ ಕೆ.ಈ. ಕಾಂತೇಶ್, ಸೂಳೇಬೈಲಿನಲ್ಲಿ ಅಪ್ರಾಪ್ತ ಬಾಲಕ ಸಂಕೇತ್ ಎಂಬಾತ ಕೊಲೆಗೀಡಾಗಿ ಬಳಿಕ ಆತನಿಗೆ ಸಮಾಧಿ ನಿರ್ಮಿಸಿದರೂ ಅದನ್ನು ಮುಸ್ಲಿಂ ಕಿಡಿಗೇಡುಗಳು ದ್ವಂಸ ಮಾಡಿದ್ದಾರೆ. ಆದರೆ ಎಸ್ಪಿ ನಿಖಿಲ್ ಬಿ. ಅವರ ನೇತೃತ್ವದಲ್ಲಿ ರಾತ್ರೋರಾತ್ರಿ ಸಮಾಧಿಯ ಪುನರ್ ನಿರ್ಮಾಣ ಮಾಡಲಾಗಿದೆ. ಹಿಂದೂ ಬಾಲಕ ಸತ್ತರೂ ಆ ಕುಟುಂಬಕ್ಕೆ ಸಮಾಧಾನದಿಂದ ಇರಲು ಕಿಡಿಗೇಡುಗಳು ಬಿಡುತ್ತಿಲ್ಲ. ಸಮಾಧಿ ದ್ವಂಸ ಪ್ರಕರಣದಲ್ಲಿ ಇಲ್ಲಿಯವರೆಗೂ ಯಾರನ್ನೂ ಬಂಧಿಸಿಲ್ಲ. ಮುಖ್ಯಮಂತ್ರಿಗಳು ಮೃತರ ಕುಟುಂಬದ ಬೇಟಿಗೂ ಬರಲಿಲ್ಲ. ಭಿಕ್ಷೆ ರೂಪದಲ್ಲಿ ೫-೧೦ ಲಕ್ಷ ರೂಪಾಯಿ ಪರಿಹಾರ ಕೊಟ್ಟು ಕೈತೊಳೆದುಕೊಳ್ಳುತ್ತಿದೆ. ಒಂದು ವೇಳೆ ಮುಸ್ಲಿಂ ಕುಟುಂಬದಲ್ಲಿ ಈ ರೀತಿ ಪ್ರಕರಣಗಳು ಸಂಭವಿಸಿದರೆ ಇಡೀ ಸರ್ಕಾರವೇ ಆ ಮನೆಗೆ ದಾವಿಸಿ ಡಿಡಿ ರೂಪದಲ್ಲಿ ಹಣನೀಡಿ, ಅವಲಂಭಿತರಿಗೆ ನೌಕರಿ ಕೊಡುವ ಕೆಲಸ ಮಾಡುತ್ತಿತ್ತು ಎಂದು ಟೀಕಿಸಿದ ಅವರು, ಸಂಕೇತನ ಕುಟುಂಬದವರೊಬ್ಬರಿಗೆ ತಮ್ಮ ನಂದನ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಕೊಡುವುದಾಗಿ ಭರವಸೆ ನೀಡಿದರು. ಅಲ್ಲದೆ ಸಮಾಧಿ ಸ್ಥಳದಲ್ಲಿ ಸಿಸಿ ಟಿವಿ ಅಳವಡಿಸಿ ಈ ಪ್ರಕರಣವನ್ನು ಎನ್.ಐ.ಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರಭಕ್ತರ ಬಳಗದ ಈ.ವಿಶ್ವಾಸ್, ಮೋಹನ್ ಜಾದವ್, ಜನಾರ್ಧನ್ ಪೈ, ಪರಿಸರ ಪ್ರಕಾಶ್, ಹರೀಶ್ ಕಾರ್ಣಿಕ್ ಮೊದಲಾದವರಿದ್ದರು.