
ಶಿವಮೊಗ್ಗ: ಗ್ರಾಮಾಂತರ ಕ್ಷೇತ್ರಕ್ಕೆ ಸೇರಿದ ಆಯನೂರು, ಹೊಳಲೂರು ಹಾಗೂ ಹೊಳೆಹೊನ್ನೂರು ಸಮುದಾಯ ಆರೋಗ್ಯ ಕೇಂದ್ರದಿಂದ ತಜ್ಞ ವೈದ್ಯರನ್ನು ಏಕಾಏಕಿ ಅವೈಜ್ಞಾನಿಕವಾಗಿ ವರ್ಗಾವಣೆ ಮಾಡಿರುವುದನ್ನು ಖಂಡಿಸಿ ಶಾಸಕರಾದ ಶಾರದಾಪೂರ್ಯನಾಯ್ಕ್ ರವರ ನೇತೃತ್ವದಲ್ಲಿ ಏಪ್ರಿಲ್ 4 ರಂದು ಬೆಳಿಗ್ಗೆ 10.30 ಕ್ಕೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವು ವಿಸ್ತೀರ್ಣದಲ್ಲಿ ಅತ್ಯಂತ ದೊಡ್ಡ ಕ್ಷೇತ್ರವಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಆರ್ಥಿಕವಾಗಿ ಕಡುಬಡವರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಸರ್ಕಾರವು ಜನರ ವೈದ್ಯಕೀಯ ಹಿತವನ್ನು ನಿರ್ಲಕ್ಷಿಸಿ ದಿಢೀರನೆ ಮೇಲ್ಕಂಡ ಮೂರೂ ಸಮುದಾಯ ಆರೋಗ್ಯ ಕೇಂದ್ರಗಳಿಂದ ತಜ್ಞ ವೈದ್ಯರನ್ನು ಬೇರೆಡೆಗೆ ವರ್ಗಾವಣೆ ಮಾಡಿರುವುದು ಕ್ಷೇತ್ರದ ಜನತೆಗೆ ಮಾಡಿದ ದ್ರೋಹ.

ಗರ್ಭಿಣಿ ಮಹಿಳೆಯರು ತೀವ್ರ ಅನಾರೋಗ್ಯಕ್ಕೆ ತುತ್ತಾದವರು, ಅಪಘಾತ ನಡೆದ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ಪಡೆಯಲು ಜನರು ಪರದಾಡಬೇಕಾಗಿದೆ. ಚಿಕಿತ್ಸೆಗಾಗಿ ದೂರದ ಶಿವಮೊಗ್ಗ ನಗರದ ಮೆಗ್ಗಾನ್ ಬೋಧನಾ ಆಸ್ಪತ್ರೆಗೆ ಹೋಗಬೇಕಾಗಿದೆ. ಕ್ಷೇತ್ರದ ಜನತೆಯ ಹಿತದೃಷ್ಟಿಯಿಂದ ತಜ್ಞ ವೈದ್ಯರ ವರ್ಗಾವಣೆಯನ್ನು ಕೂಡಲೇ ರದ್ದುಪಡಿಸಿ ಗ್ರಾಮಾಂತರ ಕ್ಷೇತ್ರಕ್ಕೆ ಸೇರಿದ ಆಯನೂರು, ಹೊಳಲೂರು, ಹೊಳೆಹೊನ್ನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಮರು ನಿಯುಕ್ತಿಗೊಳಿಸಿಕೊಡಬೇಕಾಗಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯಲ್ಲಿ ಶಿವಮೊಗ್ಗ ನಗರದ ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್, ಜಿಲ್ಲಾ ಜನತಾದಳದ ಅಧ್ಯಕ್ಷರಾದ ಕೆ.ಎನ್. ರಾಮಕೃಷ್ಣ ಗ್ರಾಮಾಂತರ ಅಧ್ಯಕ್ಷರಾದ ಸತೀಶ್ ಕಸೆಟ್ಟಿ ಹಾಗೂ ಪಕ್ಷದ ಮುಖಂಡರುಗಳು ಭಾಗವಹಿಸಲಿದ್ದಾರೆ. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಶಿವಮೊಗ್ಗ ಗ್ರಾಮಾಂತರ ಜನತಾದಳ ಅಧ್ಯಕ್ಷ ಕಸೆಟ್ಟಿ ಸತೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.