ಶಿವಮೊಗ್ಗ : ಮುಂದೆ ಬರಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷದ ಎಲ್ಲಾ ಕಾರ್ಯಕರ್ತರು, ಮುಖಂಡರು ಇಂದಿನಿಂದಲೇ ಸಜ್ಜಾಗಬೇಕು ಎಂದು ಗ್ರಾಮಾಂತರ ಶಾಸಕಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕಿ ಶಾರದಾ ಪೂರ್ಯಾನಾಯ್ಕ್ ಇಂದಿಲ್ಲಿ ಪಕ್ಷದ ಮುಖಂಡರಿಗೆ ಕರೆ ನೀಡಿದರು.

ಅವರು ಇಂದು ಜೆಡಿಎಸ್ ಕಛೇರಿಯಲ್ಲಿ ನಡೆದ ಗ್ರಾಮಾಂತರ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿ, ಇನ್ನೇನು ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆಗಳು ಬರಲಿವೆ. ಬಹುಶಃ ಸೆಪ್ಟಂಬರ್ ನಂತರ ಇದಕ್ಕೆ ಚಾಲನೆ ಸಿಗಬಹುದು. ಮೀಸಲಾತಿಯ ಬಗ್ಗೆ ಏನೇ ಬರಲಿ ಆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಸ್ಥಳೀಯ ಸಂಸ್ಥೆಗಳ ಅಧಿಕಾರ ಹಿಡಿಯುವುದು ನಮಗೆ ಬಹಳ ಮುಖ್ಯವಾಗಿದೆ. ನಮ್ಮಲ್ಲಿರುವ ಯಾವುದೇ ಭಿನ್ನಾಭಿಪ್ರಾಯಗಳನ್ನು ಮರೆತು ಪಕ್ಷಕ್ಕಾಗಿ ದುಡಿಯಬೇಕಾದ ಸಂದರ್ಭ ಇದಾಗಿದೆ ಎಂದರು.


ಕಳೆದ ಬಾರಿಯ ಚುನಾವಣೆಗಳಲ್ಲಿ ನಮ್ಮ ತಪ್ಪಿನಿಂದಲೆಯೇ ಹಲವು ಸ್ಥಾನಗಳನ್ನು ಕಳೆದುಕೊಳ್ಳಬೇಕಾಯಿತು. ಈಗ ಯಾರನ್ನೂ ದೂರಿ ಪ್ರಯೋಜನವಿಲ್ಲ. ಎಲ್ಲರ ಆತ್ಮವಿಮರ್ಶೆ ಮಾಡಿಕೊಳ್ಳಿ. ನಮ್ಮ ನಮ್ಮಲ್ಲಿ ಭಿನ್ನಾಭಿಪ್ರಾಯಗಳು, ಪ್ರತಿಷ್ಠೆಗಳು ಇರುವುದು ಸಹಜವೇ. ಆದರೆ ಅದು ಚುನಾವಣೆಯ ಮೇಲೆ ಪರಿಣಾಮ ಬೀರಬಾರದು. ಪಕ್ಷ ಯಾರಿಗೇ ಟಿಕೇಟ್ ಕೊಟ್ಟರೂ ಅವರ ಗೆಲುವಿಗಾಗಿ ನಾವು ಶ್ರಮಿಸಬೇಕಾಗಿದೆ. ನಮ್ಮ ವೈಯಕ್ತಿಕ ವಿಷಯಗಳನ್ನು ಬದಿಗಿಟ್ಟು ಪಕ್ಷವೇ ದೊಡ್ಡದು ಎಂಬ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕಾಗಿದೆ. ಮುಂದಿನ ಚುನಾವಣೆಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ನಮ್ಮ ವರಿಷ್ಟರಿಗೆ ಬಿಟ್ಟು ವಿಷಯ ಎಂದರು.

ಗ್ರಾಮಾಂತರ ಕ್ಷೇತ್ರದ ಶಾಸಕಿಯಾಗಿ ಗ್ರಾಮಾಂತರ ಭಾಗದ ಅಭಿವೃದ್ಧಿಗಾಗಿ ಹಲವುಭಾರಿ ಸದನದಲ್ಲಿ ಧ್ವನಿ ಎತ್ತಿದ್ದೇನೆ. ಅನುದಾನಗಳ ಬಗ್ಗೆ ಮಾತನಾಡಿದ್ದೇನೆ. ಆದರೂ ಕೂಡ ಅನುದಾನದ ವಿಷಯದಲ್ಲಿ ಆಡಳಿತ ಸರ್ಕಾರ ಮೌನವಾಗಿದೆ. ಇದರಿಂದ ಕ್ಷೇತ್ರದ ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿರಬಹುದು. ಆದರೂ ಕೂಡ ನನ್ನ ಕೈಲಾದ ಮಟ್ಟಿಗೆ ಅಭಿವೃದ್ಧಿ ವಿಷಯದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿರುವೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜಿಲ್ಲಾಧ್ಯಕ್ಷ ರಾಮಕೃಷ್ಣ, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್, ಮುಖಂಡರುಗಳಾದ ಸೋಮಿನಕೊಪ್ಪ ಕಾಂತರಾಜ್, ನರಸಿಂಹ ಗಂಧದಮನೆ, ಕಾಂತ್ರಾಜು, ಹೆಚ್.ಎಂ. ಸಂಗಯ್ಯ, ನಿಖಿಲ್, ಪುಷ್ಪ ಸೇರಿದಂತೆ ಹಲವರು ಇದ್ದರು.