ಶಿವಮೊಗ್ಗ,ಮಾ. 27:
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಗಳವರ ಕೃಪಾಶೀರ್ವಾದಗಳೊಂದಿಗೆ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಮತ್ತು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಗಳವರ ದಿವ್ಯ ಉಪಸ್ಥಿತಿಯಲ್ಲಿ, ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಇಲ್ಲಿನ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದ 27 ನೇ ವಾರ್ಷಿಕೋತ್ಸವ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಶಿವಮೊಗ್ಗ ಶಾಖೆ, ಶರಾವತಿ ನಗರ, ಶಿವಮೊಗ್ಗ ಇಲ್ಲಿ ಕಾರ್ಯಕ್ರಮ ನಡೆಯಲಿದ್ದು, ಆದರ್ಶ ಹಿರಿಯ ದಂಪತಿಗಳಿಗೆ ಸನ್ಮಾನ ಕೂಡ ನಡೆಯುವುದು.1998 ರಂದು ನಿರ್ಮಿಸಿದ ಶ್ರೀ ಆದಿಚುಂಚನಗಿರಿ ಸಮುದಾಯಭವನ ಉದ್ಘಾಟನೆ ದಿನದಿಂದ ಆರಂಭಗೊಂಡ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಇಂದು 27ರ ಸಂಭ್ರಮ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಶಿವಮೊಗ್ಗ ಶಾಖೆಯಲ್ಲಿ ನಡೆಯುವ ಈ ಶುಭ ವಿವಾಹ ಅಂದಿನಿಂದ ಇಂದಿನವರೆಗೆ ಸರಿಸುಮಾರು 750 ಕ್ಕಿಂತ ಹೆಚ್ಚು ದಾಂಪತ್ಯ ಜೀವನಗಳನ್ನು ಕಟ್ಟಿಕೊಟ್ಟಿದೆ.

ಇಂದಿನ ಪ್ರತಿ ವಿವಾಹ ಮಹೋತ್ಸವದ ವಿಶೇಷತೆ ಎಂದರೆ ಮದುವೆಯಾಗುವ ವಧು ವರರಿಗೆ ವಿವಾಹಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಮಠವೇ ನೀಡುತ್ತದೆ. ಹೆಣ್ಣಿಗೆ ತಾಳಿ, ಕಾಲುಂಗುರ, ಬಟ್ಟೆ ನೀಡಿದರೆ, ಗಂಡಿಗೆ ಅಂಗಿ, ಪಂಚೆ, ಕಲ್ಪವೃಕ್ಷ ನೀಡುತ್ತಾರೆ.

ಪೂಜ್ಯಸದ್ಗುರು ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಇಂತಹ ಉಚಿತ ಸಾಮೂಹಿಕ ವಿವಾಹ ಸಮಾರಂಭಗಳನ್ನು ಎಂತಹುದೇ ಸಂದರ್ಭದಲ್ಲಿ ನಿಲ್ಲಿಸದೇ ಕಳೆದ 26 ವರ್ಷಗಳಿಂದ ನಿರಂತರವಾಗಿ, ವೈಭವಯುತವಾಗಿ ನಡೆಸಿಕೊಂಡು ಬರುತ್ತಿರುವ ಶಿವಮೊಗ್ಗದ ಶ್ರೀ ಆದಿಚುಂಚನಗಿರಿ ಶಾಖಾಮಠದ ಪ್ರಯತ್ನ ಶ್ಲಾಘನೀಯ ಹಾಗೂ ಗೌರವಾನ್ವಿತವಾದುದೇ ಹೌದು.

ಈ ಬಾರಿಯ 27ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಏಪ್ರಿಲ್01 ರಂದು ಬೆಳಿಗ್ಗೆ 5:30 ರಿಂದ ಶ್ರೀ ಕಾಲಭೈರವೇಶ್ವರ ದೇವಾಲಯದ ವಾರ್ಷಿಕೋತ್ಸವ ಸಮಾರಂಭದ ನಿಮಿತ್ತ ಸ್ವಾಮಿಗೆ ಹೋಮ ಹವನಾದಿಗಳೊಂದಿಗೆ ಕುಂಭಾಭಿಷೇಕ, ಮಹಾಮಂಗಳಾರತಿ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ನಂತರ ಬೆಳಿಗ್ಗೆ 8 ಗಂಟೆಗೆ ಆದರ್ಶ ಹಿರಿಯ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ಸಹ ಇದೇ ಸ್ಥಳದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸಾನ ಶಾಖಾ ಮಠದ ಪೂಜ್ಯರು ಉಪಸ್ಥಿತರಿರುವರು .ಈ ಎಲ್ಲಾ ಕಾರ್ಯಕ್ರಮದಲ್ಲಿ.ನಗರದ ನಾಗರಿಕರು ಹಾಗೂ ಪೋಷಕ ಬಂಧುಗಳು ಹಾಗೂ ಶ್ರೀ ಮಠದ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಶುಭ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ಕಾರ್ಯಕ್ರಮದ ಆಯೋಜಕರು ಕೋರಿದ್ದಾರೆ.

ಶ್ರೀ ಮಠದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ :
ಏಪ್ರಿಲ್ 01ರಂದು ನಡೆಯುವ ಶ್ರೀ ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದಲ್ಲಿ ಉಚಿತ ಸಾಮೂಹಿಕ ವಿವಾಹದ ಜೊತೆ 50 ವರ್ಷ ಪೂರೈಸಿದ ಹಿರಿಯ ಆದರ್ಶ ದಂಪತಿಗಳನ್ನು ಸನ್ಮಾನಿಸುವ ಅಪರೂಪದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದಕ್ಕೆ ಈಗಾಗಲೇ ಅರ್ಹ ಹಿರಿಯರನ್ನು ಗುರುತಿಸಿ ಅವರನ್ನು ಆಮಂತ್ರಿಸಲಾಗಿದೆ.

27ನೇ ವರ್ಷದ ಸರಳ ಸಾಮೂಹಿಕ ವಿವಾಹ ಸಮಾರಂಭ, ಹಿರಿಯ ಆದರ್ಶ ದಂಪತಿಗಳಿಗೆ ಸನ್ಮಾನ, ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ನಡೆಸಲಾಗುವುದು.ಅಂದು ನಾಡಿನ ಗಣ್ಯರು, ಜನ ಪ್ರತಿನಿಧಿಗಳು, ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಎಂದು ಶ್ರೀ ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ ಪೂಜ್ಯ ಶ್ರೀ ಶ್ರೀ ನಾದಮಯಾನಂದನಾಥ ಸ್ವಾಮೀಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.