ಶಿವಮೊಗ್ಗ : ಶಿವಮೊಗ್ಗ ಸೇರಿದಂತೆ ಜಿಲ್ಲೆಯಾದ್ಯಂತ ಯುಗಾದಿ ಹಬ್ಬದ ಸಂಭ್ರಮ ಕಂಡು ಬರತೊಡಗಿದ್ದು, ಹಬ್ಬಕ್ಕೆ ಸಂಭ್ರಮ ಸಿದ್ಧತೆ ನಡೆದಿದೆ. ಜೊತೆಗೆ ರಂಜಾನ್ ಹಬ್ಬವೂ ಕೂಡ ಯುಗಾದಿ ಜೊತೆ ಜೊತೆಗೆ ಬಂದಿದ್ದು, ಮಾರುಕಟ್ಟೆಯಲ್ಲಿ ಖರೀದಿ ಪ್ರಕ್ರಿಯೆ ಜೋರಾಗಿ ಸಾಗಿದೆ.
ಗಲ್ಫ್ ಯುದ್ಧದ ಪರಿಣಾಮವಾಗಿ ಅಡುಗೆ ಅನಿಲದ ಅಭಾವ ತಲೆದೋರಿದ್ದು, ಯುಗಾದಿ ಹಬ್ಬದ ಮೇಲೂ ಕೂಡ ಇದು ಪರಿಣಾಮ ಬೀರಲಿದೆ. ಈಗಾಗಲೇ ಹಲವು ಹೋಟೆಲ್ಗಳು ಮುಚ್ಚಿ ಹೋಗಿದ್ದು, ಕೆಲವು ಹೋಟೆಲ್ಗಳು ತೆರೆದಿದ್ದರೂ ಕೂಡ ಹೋಳಿಗೆ, ಸಿಹಿತಿಂಡಿ, ಬೇಳೆ, ಬೆಲ್ಲ, ಅಡುಗೆ ಎಣ್ಣೆ ಸೇರಿದಂತೆ ಬೆಲೆಯಲ್ಲಿ ಹೆಚ್ಚಳವಾಗಿದೆ. ದುಬಾರಿಯ ನಡುವೆಯೂ ಹಬ್ಬದ ಸಂಭ್ರಮಕ್ಕೇನೂ ಕೊರತೆಯಾಗಿಲ್ಲ.

ಈ ಹಿನ್ನಲೆಯಲ್ಲಿ ಗಾಂಧಿ ಬಜಾರ್, ಎಪಿಎಂಸಿ ತರಕಾರಿ ಮಾರುಕಟ್ಟೆ ಮತ್ತು ಹೂವಿನ ಮಾರುಕಟ್ಟೆಗಳಲ್ಲಿ ಖರೀದಿ ಜೋರಾಗಿದೆ. ಬೆಲೆ ಏರಿಕೆಯ ನಡುವೆಯೂ ಜನರು ಬಿಸಿಲನ್ನು ಲೆಕ್ಕಿಸದೆ ಹೂವು, ಹಣ್ಣು, ಮಾವಿನ ತೋರಣ, ಬೇವು-ಬೆಲ್ಲ ಮತ್ತು ಹೊಸ ಬಟ್ಟೆಗಳನ್ನು ಖರೀದಿಸುತ್ತಿದ್ದಾರೆ. ಗಾಂಧಿ ಬಜಾರ್, ಬಿ.ಎಚ್. ರಸ್ತೆ, ನೆಹರು ರಸ್ತೆ ದುರ್ಗಿಗುಡಿ, ಸವಳಂಗ ರಸ್ತೆ ಮತ್ತು ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಗರಿಷ್ಠ ಜನದಟ್ಟಣೆ ಕಂಡುಬಂದಿದೆ. ಮಾವಿನ ಸೊಪ್ಪು, ಬೇವಿನ ಸೊಪ್ಪು, ಹೂವು (ಸೇವಂತಿಗೆ, ಮಲ್ಲಿಗೆ), ಹಣ್ಣುಗಳು, ಮತ್ತು ಹೊಸ ಬಟ್ಟೆಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ.
ಬಿಸಿಲ ಧಗೆಯ ನಡುವೆಯೂ ಬಟ್ಟೆ ಅಂಗಡಿಗಳು, ಹೂವಿನ ಮಾರುಕಟ್ಟೆ, ಸಿಹಿ ತಿನಿಸುಗಳ ಮಾರಾಟ ಅಂಗಡಿ ಮತ್ತು ತರಕಾರಿ ಅಂಗಡಿಗಳಲ್ಲಿ ಜನದಟ್ಟಣೆ ಕಂಡುಬಂತು. ಗ್ರಾಮೀಣ ಭಾಗದ ಜನರು ಹಬ್ಬದ ಪದಾರ್ಥಗಳ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ಈ ಬಾರಿ ಯುಗಾದಿ ಹಬ್ಬವನ್ನು ಜನರು ಸಡಗರದಿಂದ ಆಚರಿಸುತ್ತಿದ್ದು, ಬೇಳೆ, ಬೆಲ್ಲ, ಮೈದಾಹಿಟ್ಟು ಸೇರಿ ದಿನಸಿ ವಸ್ತುಗಳ ಜತೆ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಕೂಡ ಏರಿಕೆಯಾಗಿತ್ತು. ಒಂದು ಮಾರು ಸೇವಂತಿಗೆಗೆ ?150 ದರ ಇತ್ತು. ತರಕಾರಿಗಳ ಹಾಗೂ ಹಣ್ಣುಗಳ ಬೆಲೆ ಕೂಡ ಏರಿಕೆಯಾಗಿದೆ.
ಹಬ್ಬಕ್ಕೆ ನಗರ ಪ್ರದೇಶಗಳಲ್ಲಿ ಉದ್ಯೋಗ ಮಾಡುತ್ತಿರುವವರು ತಮ್ಮ ಊರುಗಳಿಗೆ ತೆರಳುತ್ತಿದ್ದು, ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ರಂಜಾನ್ ಹಬ್ಬಕ್ಕೂ ಸಿದ್ಧತೆ ಆರಂಭವಾಗಿದೆ.