ಶಿವಮೊಗ್ಗ : ಶಿವಮೊಗ್ಗ ನಗರದಲ್ಲಿ ಗಾಂಜಾ ಹಾವಳಿ ಹೆಚ್ಚಾಗುತ್ತಿರುವ ನಡುವೆಯೇ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವನನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಪತ್ತೆಯಾದ ಆರೋಪಿ ಅಜರ್ ಯಾನೆ ಫುಕು ಮೇಲೆ ಹಲವು ಪ್ರಕರಣಗಳು ದಾಖಲಾಗಿದ್ದು, ಮಾದಕ ವಸ್ತು ಮಾರಾಟ ಮತ್ತು ಸಾಗಣಿಕೆಯಲ್ಲಿ ಆತನದ್ದು ಪ್ರಮುಖ ಪಾತ್ರ ಇದೆ ಎನ್ನಲಾಗಿದೆ.
ಮಾ.೧ರಂದು ಸಂಜೆ ೫ ಗಂಟೆಗೆ ದೊಡ್ಡಪೇಟೆ ಪೊಲೀಸ್ ಠಾಣಾ ಸರಹದ್ದಿನ ಇಲಿಯಾಜ್ ನಗರ ಫಾತಿಮಾ ರಸ್ತೆ, ಮೌಂಟ್ ಹಿರಾ ಶಾಲೆಯ ಹತ್ತಿರ ತುಂಗಾ ಚಾನಲ್ ಬಳಿ ಇಬ್ಬರು ಆರೋಪಿತರು ಸ್ಕೂಟಿಯನ್ನು ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿರುತ್ತಾರೆಂಬ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ನಾರಾಯಣ ಮಧುಗಿರಿ ಅವರು ಠಾಣಾ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದಾಳಿ ಮಾಡಿದ್ದರು. ಈ ವೇಳೆ ಆರೋಪಿಗಳು ಸಿಕ್ಕಿ ಬಿದ್ದಿದಲ್ಲದೆ, ಅವರಿಂದ ೨ ಕೆಜಿ ೬೬ ಗ್ರಾಂ ತೂಕದ ಒಣ ಗಾಂಜಾ, ಕೆಎ ೧೪ ಇಎಫ್ ೧೬೪೯ ಸ್ಕೂಟಿಯನ್ನು ಅಮಾನತ್ತುಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

ಪ್ರಕರಣದ ಪ್ರಮುಖ ಆರೋಪಿಯಾದ ಮೊಹಮ್ಮದ್ ಅಹಮ್ಮದ್ ಅಜರುದ್ದೀನ್ ಅಲಿಯಾಸ್ ಅಜರ್(೨೮) ಎಂಬಾತ ನಗರದ ಸವಾಯಿಪಾಳ್ಯ ಮುಖ್ಯರಸ್ತೆ ಶಾದಾಬ್ ಶಾದಿ ಮಹಲ್ ಹತ್ತಿರ ನಿವಾಸಿಯಾಗಿದ್ದು, ಈತ ವೃತ್ತಿಯಲ್ಲಿ ಬಟ್ಟೆ ವ್ಯಾಪಾರ ಎನ್ನಲಾಗಿದೆ. ವಾಸ ವಾದಿಹುದಾದ ನಿವಾಸಿ ವಸೀಂ ಅಕ್ರಂ ಅಲಿಯಾಸ್ ಮಹಮ್ಮದ್ ಫಯಾಸ್ (೨೪) ಎಂಬಾತ ತಲೆಮರೆಸಿ ಕೊಂಡಿದ್ದು, ಈತನ ಪತ್ತೆಗಾಗಿ ಸಿಬ್ಬಂದಿಯವರ ತಂಡ ರಚನೆ ಮಾಡಲಾಗಿದೆ.
ಬಂಧಿತ ಆರೋಪಿ ಅಜರ್ ಯಾನೆ ಪುಕು ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ. ೨೦೨೨ರಲ್ಲಿ ಓ.ಟಿ. ರಸ್ತೆಯಲ್ಲಿದ್ದ ಟೀ ಸ್ಟಾಲ್ಗೆ ನುಗ್ಗಿ ದಾಂಧಲೆ ನಡೆಸಿ ಹಿಂದೂ ವಿರೋಧಿ ಘೋಷಣೆಗಳನ್ನ ಕೂಗಿದ್ದ ಪ್ರಕರಣ, ೨೦೨೨ರಲ್ಲಿ ಹಮಾಲಿ ಕೆಲಸ ಮಾಡಿಕೊಂಡಿದ್ದ ಪ್ರಕಾಶ್ ಮೇಲೆ ಹಲ್ಲೆ ಮಾಡಿ ಆರ್ಎಸ್ಎಸ್ ಬಜರಂಗ ದಳದ ಕಾರ್ಯಕರ್ತರೊಬ್ಬರ ಮೇಲೆ ದಾಳಿ ನಡೆಸಿ ಪ್ರಕರಣ, ೨೦೨೫ರಲ್ಲಿ ಗಾಂಜಾ ಹುಡುಕಿಕೊಂಡು ಹೋದ ಯುವಕರ ಮೇಲೆ ಹಲ್ಲೆ ಮತ್ತು ರಾಬರಿ ಪ್ರಕರಣಗಳಲ್ಲಿ ಆರೋಪಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.