ಶಿವಮೊಗ್ಗ: ಡಿಜಿಟಲ್ ರೂಪದ ಅಧ್ಯಯನಕ್ಕೆ ಪ್ರೇರಣೆ ನೀಡುವತ್ತ ವಿದ್ಯಾಸಂಸ್ಥೆಗಳ ಗ್ರಂಥಾಲಯ ಕಾರ್ಯನಿರ್ವಹಿಸಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ ಅಭಿಪ್ರಾಯಪಟ್ಟರು.
ನಗರದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜು, ಸಿರಿ ಸಾಹಿತ್ಯ ಸಂಘ ಹಾಗೂ ಕನ್ನಡ ಅಧ್ಯಾಪಕರ ವೇದಿಕೆಯ ವತಿಯಿಂದ ಬುಧವಾರ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಏರ್ಪಡಿಸಿದ್ದ ಪುಸ್ತಕ ಪ್ರೀತಿ – ಓದು ಮತ್ತು ವ್ಯಾಖ್ಯಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಅಮೇಜಾನ್ ಸಂಸ್ಥೆಯು ಕಿಂಡಲ್ ಎನ್ನುವ ಒಂದು ಹಗುರವಾದ, ಕಣ್ಣಿಗೆ ಹಿತಕರವಾದ ಇ-ರೀಡರ್ ಸಾಧನ ಅನುಷ್ಟಾನಗೊಳಿಸಿದೆ. ಇದನ್ನು ಗ್ರಂಥಾಲಯಗಳಲ್ಲಿ ಪರಿಚಯಿಸುವ ಮೂಲಕ, ಸಾವಿರಾರು ಇ-ಪುಸ್ತಕಗಳನ್ನು ಸಂಗ್ರಹಿಸಿ ಓದಲು ಸಾಧ್ಯವಾಗಲಿದೆ. ಸಾಮಾಜಿಕ ಜಾಲತಾಣಗಳು ಮತ್ತು ತಂತ್ರಜ್ಞಾನ, ಇಂದಿನ ಸಮಾಜದ ಅಗತ್ಯವಾದ ಅಂಗಗಳಾಗಿವೆ. ಆದರೆ ಅವುಗಳನ್ನು ಜವಾಬ್ದಾರಿಯಿಂದ ಮತ್ತು ವಿವೇಕದಿಂದ ಬಳಸುವ ತಂತ್ರ ತಿಳಿದಿರಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕರ ವೇದಿಕೆಯ ಅಧ್ಯಕ್ಷರಾದ ಪ್ರೊ. ಕುಂಸಿ ಉಮೇಶ್ ಮಾತನಾಡಿ, ಓದುವುದನ್ನು ಇಷ್ಟಪಟ್ಟು ಮಾಡಬೇಕು. ನಾವು ಮಕ್ಕಳಿಗೆ ಕಷ್ಟಪಟ್ಟು ಓದಬೇಕು ಎಂದು ಹೇಳುವುದರ ಮೂಲಕ ಓದನ್ನು ಕಠಿಣ ಕಾರ್ಯವೆಂದು ಬಿಂಬಿಸಿದ್ದೇವೆ. ಆದರೆ ಓದು ಆಸಕ್ತಿಯಿಂದ ಮಾಡಿದಾಗ ಮಾತ್ರ ಫಲಪ್ರದವಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಮಮತಾ ಪಿ.ಆರ್ ಮಾತನಾಡಿ, ಓದುವ ಅಭ್ಯಾಸವು ವ್ಯಕ್ತಿತ್ವ ವಿಕಾಸಕ್ಕೆ ಹಾಗೂ ಉತ್ತಮ ಸಂಸ್ಕಾರಗಳ ಬೆಳೆವಣಿಗೆಗೆ ಸಹಕಾರಿ. ವಿದ್ಯಾರ್ಥಿಗಳು ಪುಸ್ತಕ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಲೇಖಕ ಡಾ.ರತ್ನಾಕರ್ ಮಾತನಾಡಿದರು. ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಕರ್ತವ್ಯಾಧಿಕಾರಿ ಪ್ರೊ.ಆರ್.ಎಂ.ಜಗದೀಶ್, ಐಕ್ಯುಎಸಿ ಸಂಚಾಲಕಿ ಪ್ರೊ. ಆಶಾಲತಾ ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಅನ್ನಪೂರ್ಣ ಎಚ್.ಎಸ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಟಿ.ಎನ್. ಬಸವರಾಜು ನಿರೂಪಿಸಿ, ಸ್ಫೂರ್ತಿ ವಂದಿಸಿದರು.