ಶಿವಮೊಗ್ಗ, ಮಾ.04: ರೋಟರಿ ಕ್ಲಬ್ ಮಿಡಟೌನ್ ಡೈಬೆಟಿಕ್ ಸೆಲ್ಫ್ ಕೇರ್ ಫೌಂಡೇಶನ್ ವತಿಯಿಂದ ನಿನ್ನೆ ಆಯೋಜಿಸಲಾದ ಮಧುಮೇಹ–ಹೃದ್ರೋಗ ಸಂವಾದ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಭಾಗವಹಿಸಿದ ಖ್ಯಾತ ಹೃದಯ ತಜ್ಞ ಡಾ. ಮಹೇಶ್ ಮೂರ್ತಿ ಅವರು ಮಾತನಾಡುತ್ತಾ, ಇಂದಿನ ದಿನಗಳಲ್ಲಿ ಹೃದಯದ ಕಾವಲಿಗಾಗಿ ಪ್ರತಿಯೊಬ್ಬರೂ ತಮ್ಮ ಮಧುಮೇಹದ ಪರಿಶೀಲನೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳುವುದು ಅಗತ್ಯವೆಂದು ತಿಳಿಸಿದರು.
ಮಧುಮೇಹ ಮತ್ತು ಹೃದ್ರೋಗ ಪರಸ್ಪರ ಸಂಬಂಧ ಹೊಂದಿರುವ ಗಂಭೀರ ಆರೋಗ್ಯ ಸಮಸ್ಯೆಗಳಾಗಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟದ ನಿಯಂತ್ರಣದ ಕೊರತೆ ಹೃದಯಕ್ಕೆ ಅಪಾಯವನ್ನುಂಟುಮಾಡಬಹುದು ಎಂದು ಅವರು ಎಚ್ಚರಿಸಿದರು. ವಿಶೇಷವಾಗಿ ಇಂದಿನ ಯುವಕರಲ್ಲಿ ಒತ್ತಡದ ಜೀವನಶೈಲಿ, ಅಸ್ವಸ್ಥ ಆಹಾರ ಪದ್ಧತಿ ಮತ್ತು ವ್ಯಾಯಾಮದ ಕೊರತೆಯಿಂದ ಹೃದಯ ಸಂಬಂಧಿತ ಕಾಯಿಲೆಗಳು ಸರ್ವೇಸಾಮಾನ್ಯವಾಗುತ್ತಿರುವುದನ್ನು ಉಲ್ಲೇಖಿಸಿದರು.
ಮುಂಜಾಗ್ರತಾ ಕ್ರಮಗಳನ್ನು ದಿನನಿತ್ಯ ಅಳವಡಿಸಿಕೊಳ್ಳುವುದು, ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಬದುಕಿನ ಸಾಧನೆಗೆ ಅತ್ಯುತ್ತಮ ಹಾದಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಡಾ. ಪ್ರವೀಣ್ ಕುಮಾರ್ ದೇವರ ಬಾವಿ ಅವರು ಶಿಬಿರಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಸಲಹೆಗಳನ್ನು ನೀಡಿದರು.

ಕ್ಲಬ್ಬಿನ ಅಧ್ಯಕ್ಷರಾದ ಹರ್ಷ ಭಾಸ್ಕರ್ ಕಾಮತ್ ಅವರು ಸ್ವಾಗತಿಸಿದರು. ಸಭಾಧ್ಯಕ್ಷರಾದ ಡಾ. ಶಿವರಾಮಕೃಷ್ಣ ಅವರು ಅಭಿನಂದನಾ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಶಿಲ್ಪ ರಮೇಶ್, ಮೇನಕಾ ಜಗದೀಶ್, ಸಂತೋಷ್, ಮಂಜುನಾಥ್, ಜಗನ್ನಾಥ್, ಹಾಗೂ ಇತರೆ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವು ಸಾರ್ವಜನಿಕರಲ್ಲಿ ಹೃದಯ–ಮಧುಮೇಹ ಜಾಗೃತಿಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಹಿಸಿತು.