
ಹುಡುಕಾಟದ ವರದಿ: ಸ್ವಾಮಿ
ಶಿವಮೊಗ್ಗ, ಮಾ.02:
ಶಿವಮೊಗ್ಗ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುವ ಎಲ್ಲಾ ಕಾಮಗಾರಿಗಳ ಖುದ್ದು ಪರಿಶೀಲನೆ ಅದರ ಸಮಗ್ರ ಮೌಲ್ಯಮಾಪನ ಕಾರ್ಯ ಅಲ್ಲಿನ ಇಂಜಿನಿಯರಿಂಗ್ ವಿಭಾಗದಿಂದ ನಡೆಯುತ್ತಿದ್ದರೂ, ಸಹ ಮೂರನೇ ವ್ಯಕ್ತಿಯಿಂದ ತಪಾಸಣೆ ನಡೆಸುವ ಕಾನೂನು ಜಾರಿಯಲ್ಲಿದೆ. ಇದು ಕಾಮಗಾರಿಗಳ ಗುಣಮಟ್ಟ ಹೆಚ್ಚಿಸಲು ಸಹಾಯಕವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಆದರೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಇದೇ ಮೂರನೇ ವ್ಯಕ್ತಿಯ ಕನ್ಸಲ್ಟೆಂಟ್ ಟೆಂಡರ್ ವಿಷಯದಲ್ಲಿ ಸುಮಾರು ಒಂದು ವರ್ಷ ಎರಡು ತಿಂಗಳು ಕಳೆದಿದ್ದರೂ ಹೊಸಬರಿಗೆ ಅವಕಾಶ ನೀಡದೆ ಹಳಬರಿಗೆ ಮಣೆ ಹಾಕಲಾಗಿದೆ. ಕಳೆದ 2025 ಫೆಬ್ರವರಿಯಲ್ಲೇ ಆ ಟೆಂಡರ್ ಅವಧಿ ಮುಗಿದಿತ್ತು.
ಡಿಸೆಂಬರ್ 2025 ರಲ್ಲಿ ಹೊಸ ಟೆಂಡರ್ ಕರೆದಿದ್ದರೂ ಅದನ್ನು ದೂರ ತಳ್ಳಿ ಹಳೇ ಟೆಂಡರ್ ದಾರವನ್ನೇ ಇಲ್ಲಿಯವರೆಗೂ ಉಳಿಸಿಕೊಂಡಿರುವ ಔಚಿತ್ಯವಾದರೂ ಏನು?
ಇದರಲ್ಲಿ ಕಾರ್ಯಪಾಲಕ ಅಭಿಯಂತರ ಮಂಜುನಾಥ್ ಅವರ ಕೈವಾಡವಾದರೂ ಏನು ಎಂಬುದು ಇಲ್ಲಿ ಗಂಭೀರ ಪ್ರಶ್ನೆ.
ಕಳೆದ ತಿಂಗಳು ಫಲ ಪುಷ್ಪ ಪ್ರದರ್ಶನದ ವೇಳೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರು ಈ ವಿಷಯದ ಬಗ್ಗೆ ಪ್ರಶ್ನಿಸಿದಾಗ, ನಾನು ಈಗಾಗಾಲೇ ಹೊಸಬರಿಗೆ ಕೆಲಸ ನೀಡಲು ಆದೇಶ ನೀಡಿದ್ದೇನೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಅವರು ತಿಳಿಸಿದ್ದರು.

ಅಂದರೆ ಸುಮಾರು ಒಂದೂವರೆ ತಿಂಗಳಿನಿಂದ ಈ ಕಾಮಗಾರಿಯ ಹೊಸ ಟೆಂಡರ್ ಪ್ರಕ್ರಿಯೆ ಇಂದಿನ ಈ ದಿನದವರೆಗೂ ಚಾಲನೆಯಾಗದಿರುವುದು ಯಾಕೆ ಎಂಬ ಪ್ರಶ್ನೆ ಸಹಜವಾಗಿ ಮೂಡಿದೆ. ಹಳಬರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶಿವಮೊಗ್ಗ ಹಾಗೂ ಸಾಗರ ವ್ಯಾಪ್ತಿಯ ಜಿಲ್ಲಾ ಪಂಚಾಯತ್ ಹಾಗೂ ಗ್ರಾಮೀಣಾಭಿವೃದ್ಧಿ ವಿಭಾಗದ ಕಾರ್ಯಪಾಲಕ ಅಭಿಯಂತರ ಮಂಜುನಾಥ ಅವರಿಗೆ ಸಿಇಒ ಆದೇಶ ನೀಡಿದ್ದರೂ ಸಹ ಆ ಆದೇಶವನ್ನು ಇಡೀ ಇಂಜಿನಿಯರಿಂಗ್ ವಿಭಾಗ ಸುಮ್ಮನೆ ಇಟ್ಟುಕೊಂಡಿರುವುದಾದರೂ ಏಕೆ ಎಂಬ ಅನುಮಾನ ಗಂಭೀರವಾಗಿ ಕಾಡಿದೆ.
ಕಾರ್ಯಪಾಲಕ ಅಭಿಯಂತರರಿಗೆ ಹಾಗೂ ಈ ವ್ಯವಸ್ಥೆ ನೋಡಿಕೊಳ್ಳುವ ಇಂಜಿನಿಯರಿಂಗ್ ವಿಭಾಗಕ್ಕೆ ಹಳಬರನ್ನೇ ಉಳಿಸಿಕೊಳ್ಳುವ ವ್ಯವಧಾನವಾದರೂ ಹಾಗೂ ಹಳಬರನ್ನು ತೆಗೆಯದ ಹಿನ್ನೆಲೆಯಾದರೂ ಏನು ಎಂಬ ಪ್ರಶ್ನೆ ನೂರಾರು ಅನುಮಾನಗಳಿಗೆ ಕಾರಣವಾಗಿದೆ.
ಅಂದು ಮಾಧ್ಯಮಗಳ ಮುಂದೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೇಮಂತ್ ಅವರು ಆದೇಶ ನೀಡಿದ್ದೇನೆ ಎಂದು ಹೇಳಿದ್ದ ವಾಕ್ಯ ಸುಳ್ಳೇ ಎಂಬ ಅನುಮಾನ ಮೂಡಿದೆ. ಒಂದು ವೇಳೆ ಸಿಇಓ ಅವರು ಆದೇಶ ನೀಡಿದ್ದರೆ ಅದನ್ನು ಕಾರ್ಯರೂಪಕ್ಕೆ ತರುವ ಇಂಜಿನಿಯರಿಂಗ್ ವಿಭಾಗ ಸುಖಾ ಸುಮ್ಮನೆ ದಿನ ದೂಡುತ್ತಿರುವುದಾದರೂ ಏಕೆ?

ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಹಳೆ ಟೆಂಡರ್ ಪಕ್ರಿಯೆ ನಡೆಯುತ್ತಿದೆ. ಹಾಗಾದರೆ 2025ರ ಡಿಸೆಂಬರ್ ತಿಂಗಳಲ್ಲಿ ಕಾಮಗಾರಿಯನ್ನು ನೋಡಿಕೊಳ್ಳಲು ಹೊಸದಾಗಿ ಟೆಂಡರ್ ಕರೆದ ಉದ್ದೇಶವಾದರೂ ಏನು?
ಈ ಟೆಂಡರ್ ಈಗಾಗಲೇ ಓಪನ್ ಆಗಿದ್ದು, ಹೊಸಬರಿಗೆ ಅವಕಾಶ ನೀಡಬೇಕು. ಆದರೆ ಅದನ್ನು ಮಾಡದೆ ಹಳಬರಿಗೆ ಇಂಜಿನಿಯರಿಂಗ್ ವಿಭಾಗ ಮಣೆ ಹಾಕುತ್ತಿರುವುದು ಏಕೆ? ಈ ಕೂಡಲೇ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಶಿಸ್ತಿನ ಮತ್ತು ದಕ್ಷ ಅಧಿಕಾರಿ ಎಂದೆ ಹೆಸರಾದ ಎನ್. ಹೇಮಂತ್ ಅವರು ಜಾಡಿಸಬೇಕಿದೆ. ನೀವು ನೀಡಿದ ಆದೇಶಕ್ಕೆ ಬೆಲೆ ಇಲ್ಲ ಎಂಬುದಾದರೆ ಈ ವ್ಯವಸ್ಥೆ ಇರುವುದಾದರೂ ಏಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.