ಶಿವಮೊಗ್ಗ : ರಾಜ್ಯದಲ್ಲಿ ವಚನಭ್ರಷ್ಟ ಸರ್ಕಾರವಿದ್ದು ಸಾವಿರ ದಿನಗಳ ಸಾಧನಾ ಸಮಾವೇಶವನ್ನು ಹಾವೇರಿಯಲ್ಲಿ ಆಚರಣೆ ಮಾಡುತ್ತಿದೆ. ಆದರೆ ಇದು ಸಾಧನಾ ಸಮಾವೇಶವಲ್ಲ, ಯಾತನಾ ಸಮಾವೇಶ. ಸರ್ಕಾರ ಹಣಕಾಸಿನ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಸರ್ಕಾರ ಬಂದ ಮೇಲೆ ರಾಜ್ಯದ ಜನರು ಒಂದಲ್ಲಾ ಒಂದು ರೀತಿಯಲ್ಲಿ ಸಂಕಷ್ಟ ಎದುರಿಸುತ್ತಿದ್ದು, ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಗುತ್ತಿಗೆದಾರರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಯುವನಿಧಿ ಯೋಜನೆಯಡಿ ಶೇ.60ರಷ್ಟು ಯುವಕರಿಗೆ ಸ್ಟೈಫಂಡ್ ದೊರೆಯುತ್ತಿಲ್ಲ. ರೈತರ ಆತ್ಮಹತ್ಯೆ ಜಾಸ್ತಿಯಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕುರ್ಚಿಗಾಗಿ ಕಚ್ಚಾಟ ಮಿತಿಮೀರಿದ್ದು ಹಗರಣಗಳ ಸರಮಾಲೆಯೇ ಇದೆ ಎಂದರು.

ಖಜಾಣೆ ಲೂಟಿ, ವಾಲ್ಮೀಕಿ ಹಗರಣ, ಮೂಡಾ ಹಗರಣ, ಅಬಕಾರಿ ಹಗರಣ, ಓಲೈಕೆ ರಾಜಕಾರಣ ಮಾಡುತ್ತಾ ಬಂದಿದ್ದು, ಗೃಹಲಕ್ಷ್ಮೀ ಯೋಜನೆ ಚಕ್ಕುಲಿಯ ಒಳಸುಳಿ ತಿಂದು ಲೆಕ್ಕಕ್ಕೆ ಮಾತ್ರ ಎನ್ನುವ ರೀತಿ ಆಗಿದೆ. ವಿಧಾನಸಭೆಯಲ್ಲಿ ಕೇಳಿದ ಗೃಹಲಕ್ಷ್ಮೀ ಯೋಜನೆಯ 5,500 ಕೋಟಿ ಹಣಕ್ಕೆ ಇನ್ನೂ ಲೆಕ್ಕ ನೀಡಿಲ್ಲ. ಕ್ಷಮೆಯನ್ನೂ ಕೇಳಿಲ್ಲ. ಶಕ್ತಿ ಯೋಜನೆಯಡಿ ಸಾರಿಗೆ ಸಂಸ್ಥೆಗಳಿಗೆ 4800 ಕೋಟಿ ಬಾಕಿ ಉಳಿಸಿಕೊಂಡಿದೆ. ಗ್ರಾಮೀಣ ಪ್ರದೇಶದ 1200 ಬಸ್ ಮಾರ್ಗಗಳನ್ನು ನಿಲ್ಲಿಸಿದೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಕೊಟ್ಟಹಾಗೆ ಮಾಡಿ ವಾಣಿಜ್ಯ ಮತ್ತು ಕೈಗಾರಿಕೆ ಗ್ರಾಹಕರಿಗೆ ವಿದ್ಯುತ್ ಬೆಲೆಯನ್ನು ಏರಿಕೆ ಮಾಡಿ ಕೈಗಾರಿಕೆಗಳ ಅವಸಾನಕ್ಕೆ ಕಾರಣವಾಗಿದೆ. ಅನ್ನಭಾಗ್ಯ ಯೋಜನೆಯಡಿ ಅಕ್ಕಿಯೂ ಇಲ್ಲ, ಅದರ ಬದಲಿಗೆ ಕೊಡುತ್ತಿದ್ದ 120 ರೂ.ಗಳೂ ಇಲ್ಲ. ಜನವರಿಯಿಂದ 657 ಕೋಟಿ ಅನ್ನಭಾಗ್ಯದ ಹಣ ಇನ್ನೂ ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ.
ಎಸ್ಸಿಪಿ-ಟಿಎಸ್ಪಿ ಯೋಜನೆಯ ಶೇ.35 ಹಣ ಗ್ಯಾರೆಂಟಿ ಯೋಜನೆಗೆ ಬಳಸಿಕೊಂಡಿದ್ದು, ದಲಿತರ ಉದ್ಧಾರಕ್ಕೆ ಇಟ್ಟ ಹಣ ಕ್ಕೆ ಸರ್ಕಾರ ಕನ್ನಹಾಕಿದೆ. ಯಾವ ಮುಖ ಇಟ್ಟುಕೊಂಡು ಈ ಸರ್ಕಾರ ಸಾಧನಾ ಸಮಾವೇಶ ಮಾಡುತ್ತಿದೆ ಎಂದರು.

ವಿಶೇಷ ಎಂದರೆ 300 ರೈತರು ಆತ್ಮಹತ್ಯೆಮಾಡಿಕೊಂಡ ಹಾವೇರಿಯಲ್ಲಿಯೇ ಈ ಸಮಾವೇಶ ಮಾಡಲು ಸರ್ಕಾರ ಹೊರಟಿದೆ. ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದಿಂದ ನೀಡುತ್ತಿದ್ದ 4000 ರೂ.ಗಳನ್ನು ಕಿತ್ತುಕೊಂಡಿದೆ. ರೈತರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾನಿಧಿಯನ್ನು ನಿಲ್ಲಿಸಿದ್ದು ಗುತ್ತಿಗೆದಾರರಿಗೆ 37 ಸಾವಿರ ಕೋಟಿ ಬಾಕಿ ನಿಲ್ಲಿಸಿದೆ. 20 ಸಾವಿರ ಕೋಟಿ ಆದಾಯ ಕೊರತೆ ಎದುರಿಸುತ್ತಿದೆ ಎಂದು ಸಿಎಜಿ ವರದಿ ಹೇಳಿದೆ. ಹೆಚ್ಚೆಚ್ಚು ಜನರಿಗೆ ಮದ್ಯ ಕುಡಿಸುವುದೇ ಈ ಸರ್ಕಾರದ ಮೂಲಮಂತ್ರವಾಗಿದ್ದು, ಬಾರ್ಗಳ ಸಂಖ್ಯೆ ಹೆಚ್ಚಿಸಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಜೈಲುಗಳು ರೆಸಾರ್ಟ್ಗಳಾಗಿ ಪರಿವರ್ತನೆಯಾಗಿದೆ. ಜೈಲಿನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದ್ದು ಮಹಿಳೆಯರಿಗೆ ಸುರಕ್ಷತೆ ಇಲ್ಲದಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪೊಲೀಸ್ ವಶದಲ್ಲಿದ್ದ ಮಹಿಳೆಯನ್ನೇ ವಿವಸ್ತ್ರಗೊಳಿಸಿದ ಘಟನೆ ಹಾಗೂ ಓಂಶಕ್ತಿ ಬಸ್ಸಿನ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಸರ್ಕಾರ ಸಾವಿರ ದಿನಗಳಲ್ಲಿ ಎಷ್ಟು ಅಭಿವೃದ್ಧಿ ಮಾಡಿದೆ, ಎಷ್ಟು ಸಾಲ ಮಾಡಿದೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ಎಸ್. ದತ್ತಾತ್ರಿ, ಮಾಲತೇಶ್, ಮೋಹನ್ರೆಡ್ಡಿ, ಮೇಘರಾಜ್, ದಿವಾಕರ ಶೆಟ್ಟಿ, ರಾಜೇಶ್ ಕಾಮತ್, ರಾಜುತಲ್ಲೂರು, ಮಂಜುನಾಥ್ ಮತ್ತಿತರರಿದ್ದರು.