ದೆಹಲಿ,ಫೆ.14: ಕರ್ನಾಟಕದ ಹೆಮ್ಮೆಯ ಕ್ರೀಡಾ ಸಾಧಕ, ಮಂಡ್ಯದ ಜೆಎಸ್ಎಲ್ (JSL) ಸ್ಪೋರ್ಟ್ಸ್ ಅಕಾಡೆಮಿಯ ಕ್ರೀಡಾ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಭರತ್ ಆರ್.ಎ. ಅವರಿಗೆ 2026ರ ಪ್ರತಿಷ್ಠಿತ “ರಾಷ್ಟ್ರೀಯ ಖೇಲ್ ಪ್ರೋತ್ಸಾಹ ಪ್ರಶಸ್ತಿ” ನೀಡಿ ಗೌರವಿಸಲಾಗಿದೆ.
ದೆಹಲಿಯ NDMC ಸಭಾಂಗಣದಲ್ಲಿ ನಡೆದ 8ನೇ ಅಖಿಲ ಭಾರತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಹಾಗೂ ದೈಹಿಕ ಶಿಕ್ಷಣ ಫೌಂಡೇಶನ್ ಆಫ್ ಇಂಡಿಯಾ (PEFI) ವತಿಯಿಂದ ನೀಡಲಾಗುವ ಅತ್ಯುತ್ತಮ ದೈಹಿಕ ಶಿಕ್ಷಣ ಶಿಕ್ಷಕರಿಗಾಗಿ ಮೀಸಲಾದ “ಡಾ. ಜಿ.ಪಿ. ಗೌತಮ್ ಪ್ರಶಸ್ತಿ”ಯನ್ನು ಇವರಿಗೆ ಪ್ರದಾನ ಮಾಡಲಾಯಿತು. ಕೇಂದ್ರ ಸಚಿವ ಹರ್ಷ್ ಮಲ್ಹೋತ್ರಾ ಅವರಿಂದ ಪ್ರಶಸ್ತಿ ಸ್ವೀಕರಿಸಿದ ಡಾ. ಭರತ್, ಈ ಗೌರವ ಪಡೆದ ಕರ್ನಾಟಕದ ಮೊದಲ ದೈಹಿಕ ಶಿಕ್ಷಣ ತಜ್ಞ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಮಾರಂಭದಲ್ಲಿ

ಗೋಪಾಲ್ ಸೈನಿ ಜಿ ಕ್ರೀಡಾ ಭಾರತಿಯ ರಾಷ್ಟ್ರೀಯ ಅಧ್ಯಕ್ಷರು,
ಡಾ. ಎ.ಕೆ. ಬನ್ಸಾಲ್ ಅಧ್ಯಕ್ಷರು PEFI, ಡಾ. ಎ.ಕೆ. ಉಪ್ಪಲ್ ಅಧ್ಯಕ್ಷರು ಪ್ರಶಸ್ತಿ ಸಮಿತಿ, ಡಾ. ಪಿಯೂಷ್ ಜೈನ್ PEFI ರಾಷ್ಟ್ರೀಯ ಕಾರ್ಯದರ್ಶಿ,ಮತ್ತು ವಿನಯ್ ಶರ್ಮಾ ದೆಹಲಿ ಮೆಟ್ರೋ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಉಪಸ್ಥಿತರಿದ್ದರು.
ಅಪಾರ ಸಾಧನೆ ಮತ್ತು ಸೇವೆ:
ಕ್ರೀಡಾ ಕ್ಷೇತ್ರದಲ್ಲಿ 17 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುವ ಇವರು, ರಾಂಪುರದ ಸರ್ಕಾರಿ ಶಾಲೆ ಹಾಗೂ ನವೋದಯ ವಿದ್ಯಾಲಯದಲ್ಲಿ 8 ವರ್ಷಗಳ ಕಾಲ ಉಚಿತ ಅಥ್ಲೆಟಿಕ್ಸ್ ತರಬೇತಿ ನೀಡುವ ಮೂಲಕ ಸ್ವಯಂಪ್ರೇರಿತ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ವಿವಿಧ ಪ್ರತಿಷ್ಠಿತ CBSE, ICSE ಮತ್ತು IGCSE ಶಾಲೆಗಳಲ್ಲಿ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿರುವ ಇವರು, ಪ್ರಸ್ತುತ ಮಂಡ್ಯದ ಜೆ.ಎಸ್.ಎಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಿರ್ದೇಶಕರಾಗಿ ಸಾವಿರಾರು ಕ್ರೀಡಾಪಟುಗಳನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಸಿದ್ಧಪಡಿಸುತ್ತಿದ್ದಾರೆ. ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವುದು ತಮ್ಮ ಮುಖ್ಯ ಗುರಿ ಎಂದು ಡಾ. ಭರತ್ ತಿಳಿಸಿದ್ದಾರೆ.