ಸಾಗರ : ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶವಿದ್ದು, ಪ್ರತಿ ಬಜೆಟ್ನಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ಕನಿಷ್ಟ ೧೦ಸಾವಿರ ಕೋಟಿ ರೂ. ಮೀಸಲು ಇರಿಸಬೇಕು. ನಮ್ಮ ಸರ್ಕಾರ ಬಂದ ಮೇಲೆ ಪ್ರವಾಸೋದ್ಯಮ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ಗೋಪಾಲಗೌಡ ಕ್ರೀಡಾಂಗಣದಲ್ಲಿ ಶುಕ್ರವಾರ ಹೆಲಿ ಟೂರಿಸಂಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರವಾಸೋದ್ಯಮ ಆರ್ಥಿಕ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡುತ್ತದೆ. ಹಿಂದಿನ ಸರ್ಕಾರಗಳು ಪ್ರವಾಸೋದ್ಯಮ ಕಡೆಗಣಿಸಿ ಬಜೆಟ್ನಲ್ಲಿ ಕಡಿಮೆ ಅನುದಾನ ನೀಡುತ್ತಿದ್ದರು. ನಮ್ಮ ಸರ್ಕಾರ ಅದನ್ನು ಹೆಚ್ಚಿಸಿದೆ. ಪ್ರವಾಸೋದ್ಯಮ ಅಭಿವೃದ್ದಿಗೆ ಬಜೆಟ್ನಲ್ಲಿ ಹೆಚ್ಚಿನ ಒತ್ತು ನೀಡುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದರು.
ಸಾಗರದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ಹೆಚ್ಚಿನ ಅವಕಾಶ ಇದೆ. ವಿಶ್ವವಿಖ್ಯಾತ ಜೋಗ ಜಲಪಾತ ಪ್ರವಾಸೋದ್ಯಮ ದೃಷ್ಟಿಯಿಂದ ಪರಿಪೂರ್ಣ ಅಭಿವೃದ್ದಿಪಡಿಸಲಾಗುತ್ತಿದೆ. ತ್ರಿಸ್ಟಾರ್ ಹೋಟೆಲ್, ರೋಪ್ವೇ ನಿರ್ಮಾಣಕಾರ್ಯ ಪ್ರಗತಿಯಲ್ಲಿದೆ. ಏಪ್ರಿಲ್ ತಿಂಗಳಿನಲ್ಲಿ ಜೋಗ ಜಲಪಾತ ಪೂರ್ಣ ಅಭಿವೃದ್ದಿಯಾಗಿದ್ದನ್ನು ಮತ್ತು ಹಸಿರುಮಕ್ಕಿ ಸೇತುವೆಯನ್ನು ಮುಖ್ಯಮಂತ್ರಿಗಳ ಕೈನಿಂದ ಉದ್ಘಾಟಿಸುವ ಆಲೋಚನೆ ಹೊಂದಲಾಗಿದೆ ಎಂದು ತಿಳಿಸಿದರು.

ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಗಣಪತಿ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಿದ್ದು, ಗೋಪಾಲಗೌಡ ಕ್ರೀಡಾಂಗಣದಲ್ಲಿ ಐದು ದಿನಗಳ ಹೆಲಿ ಟೂರಿಸಂಗೆ ಇಂದು ಚಾಲನೆ ನೀಡಿದೆ. ರಾಜ್ಯದ ಬೇರೆಬೇರೆ ಭಾಗಗಳಲ್ಲಿ ಹೆಲಿ ಟೂರಿಸಂ ಪ್ರಖ್ಯಾತಿ ಗಳಿಸಿದೆ. ಜೋಗ ಜಲಪಾತ ಅಭಿವೃದ್ದಿ ನಂತರ ಸಾಧ್ಯವಾದರೆ ಅಲ್ಲಿಯೂ ಹೆಲಿ ಟೂರಿಸಂಗೆ ಅವಕಾಶ ಕಲ್ಪಿಸುವ ಉದ್ದೇಶವಿದೆಲ್ಜನರಿಗೆ ಹೊಸಹೊಸ ಅವಕಾಶಗಳು ಸಿಗಬೇಕು. ಹೆಲಿ ಟೂರಿಸಂ ನಮ್ಮೂರಿನ ಹೊಸ ಕಲ್ಪನೆಯಾಗಿದೆ. ಕಿರಣ್ ಮತ್ತು ಸ್ನೇಹಿತರು ಇಂತಹದ್ದೊಂದು ಪ್ರಯತ್ನಕ್ಕೆ ಮುಂದಾಗಿದ್ದು ಅವರಿಗೆ ಜನರ ಸಹಕಾರವೂ ಮುಖ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಿರಣ್ ದೊಡ್ಮನಿ, ರಾಜೀವ್ ಪೈಲೆಟ್, ಸುಂದರ ಸಿಂಗ್, ಟಿ.ವಿ.ಪಾಂಡುರಂಗ, ಚೇತನರಾಜ್ ಕಣ್ಣೂರು, ರಮೇಶ್ ಟಿ.ಪಿ., ಗಣಪತಿ ಮಂಡಗಳಲೆ ಇನ್ನಿತರರು ಹಾಜರಿದ್ದರು