ಶಿವಮೊಗ್ಗ : ಖಾಸಗಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಸುಟ್ಟು ಕರಕಲಾದ ಭಯಾನಕ ಘಟನೆ ನಿನ್ನೆ ರಾತ್ರಿ ಜಿಲ್ಲೆಯ ಅರಸಾಳು ಸಮೀಪದ ಸೂಡೂರು ಬಳಿಯ ೯ನೇ ಮೈಲಿಗಲ್ಲಿನ ಬಳಿ ನಡೆದಿದೆ.
ಶ್ರೀ ಅನ್ನಪೂರ್ಣೇಶ್ವರಿ ಟ್ರಾನ್ಸ್ಪೋರ್ಟ್ ಸಂಸ್ಥೆಗೆ ಸೇರಿದ ಸ್ಲೀಪರ್ ಕೋಚ್ ಬಸ್ ಇದಾಗಿದ್ದು, ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಚಾಲಕ ಸೇರಿ ಒಟ್ಟು ೪೦ ಬಸ್ಸಿನಲ್ಲಿದ್ದರು ಎಂದು ತಿಳಿದುಬಂದಿದೆ. ಬಸ್ಸಿನಲ್ಲಿದ್ದ ಸುಮಾರು ೧೨ ಜನ ಪ್ರಯಾಣಿಕರು ಸುಟ್ಟಗಾಯಗಳಿಂದ ನರಳುತ್ತಿದ್ದು ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರು ರಿಪ್ಪನ್ಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಿದ್ದರೂ ಬಸ್ ಸಂಪೂರ್ಣ ಸುಟ್ಟು ಹೋಗಿದೆ.
ಬಸ್ನ ಕ್ಲೀನರ್ ಸಂಜು ಬಸ್ ಹತ್ತುವ ಮುಂಚೆ ಬಸ್ನಲ್ಲಿ ಸುಟ್ಟ ವಾಸನೆ ಬರುತ್ತಿದೆ ಎಂದು ಹೇಳಿದರೂ ಚಾಲಕನ ನಿರ್ಲಕ್ಷ ತೋರಿ ಚಲಿಸಿದ್ದಾನೆ ಎಂದು ಹೇಳಲಾಗುತ್ತಿದೆ. ನಿಟ್ಟೂರಿನಿಂದ ಬೆಂಗಳೂರಿಗೆ ಈ ಬಸ್ ಹೊರಟಿತ್ತು. ಬೆಂಕಿ ಹತ್ತಿಕೊಂಡ ವೇಳೆ ಪ್ರಯಾಣಿಕರೊಬ್ಬರು ಮಗುವನ್ನು ಹೊತ್ತುಕೊಂಡು ಹಾರಿದ್ದಾರೆ. ಶ್ರೀನಿಧಿ ಎಂಬ ಮಹಿಳೆಯ ಎರಡು ಕೈಗಳು ಸುಟ್ಟುಹೋಗಿದೆ.. ನಿರ್ವಾಹಕ ನಿಖಿಲ್ನ ಮುಖ ಸುಟ್ಟಿದೆ. ಶ್ವೇತಾ, ಸುಹಾಸ್, ಸಿಂಧು, ಪೂಜಾರವನ್ನು ಹೆಚ್ವಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಇದೂವರೆಗೂ ಯಾವುದೇ ಪ್ರಾಣಹಾನಿಯಾಗಿಲ್ಲ. ರಿಪ್ಪನ್ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.