ವಮೊಗ್ಗ : ನಗರದ ಸುಪ್ರಸಿದ್ಧ ಶ್ರೀ ಕೋಟೆ ಮಾರಿಕಾಂಬ ಜಾತ್ರೆಯ ಅಂಗವಾಗಿ ದೇವಿಯ ವಿಸರ್ಜನಾಮೂರ್ತಿಯ ಕೆತ್ತನೆ ಆರಂಭ ಪ್ರಯುಕ್ತ ಗಾಂಧಿಬಜಾರಿನ ದೇವಿಯ ತವರು ಮನೆಯನ್ನು ಇಂದು ಶಾಸ್ತ್ರೋಕ್ತವಾಗಿ ಖ್ಯಾತಶಿಲ್ಪಿ ಕಾಶೀನಾಥ್ ಅವರಿಂದ ಕೆತ್ತನೆ ಆರಂಭವಾಯಿತು.
ಈ ಸಂದರ್ಭದಲ್ಲಿ ಶಿಲ್ಪಿ ಕಾಶೀನಾಥ್ ಮಾತನಾಡಿ, 1964ರಿಂದ ನಾನು ಈ ಮೂರ್ತಿಯ ಕೆತ್ತನೆ ಕೆಲಸ ಮಾಡುತ್ತಾ ಬಂದಿದ್ದೇನೆ. ಮೊದಲು 6ಅಡಿ ಮೂರ್ತಿ ಮಾಡುತ್ತಿದ್ದೆ. ಈಗ 11 ಅಡಿ ಎತ್ತರದ ಮಾರಿಕಾಂಬ ಮೂರ್ತಿಯನ್ನು ದೇವಿಯ ತವರುಮನೆಯಲ್ಲೇ ಮಾಡುತ್ತಿದ್ದೇನೆ. ಪ್ರತಿವರ್ಷದಂತೆ ಮಾರಿಕಾಂಬ ಸಮಿತಿಯವರು ಶಾಸ್ತ್ರೋಕ್ತವಾಗಿ ಅರಕೆರೆ ಕಾಳಿಕಾಂಬ ಸಮಿತಿಯವರ ತವರು ಮನೆಯವರ ಜೊತೆಗೂಡಿ ಈ ಮರವನ್ನು ಮೆರವಣಿಯಲ್ಲಿ ತರುತ್ತಾರೆ. ಮೂರ್ತಿ ತಯಾರು ಮಾಡುವ ಮನೆಯನ್ನು ಕೂಡ ವಿಶ್ವಕರ್ಮ ಕುಟುಂಬದವರು ನೀಡಿದ್ದು, ಅದೇ ಮನೆ ಈಗ ದೊಡ್ಡ ಕಟ್ಟಡವಾಗಿದ್ದು, ಅವರು ಈ ಮೂರ್ತಿಯ ಕೆತ್ತನೆಗಾಗಿಯೇ ಮನೆಯನ್ನು ಬಿಟ್ಟುಕೊಟ್ಟಿದ್ದಾರೆ. ಮೊದಲು ಸ್ವಲ್ಪಜನ ಸೇರುತ್ತಿದ್ದ ಈ ಜಾತ್ರೆಗೆ ಇಂದು ಲಕ್ಷಾಂತರ ಜನರು ಸೇರುತ್ತಿದ್ದು, ದೇವಿಯ ಮಹಿಮೆ ಅಪಾರವಾಗಿದೆ. ಮಂಗಳವಾರ ಗಾಂಧಿಬಜಾರಿನ ತವರು ಮನೆಯಲ್ಲಿ ಸ್ಥಾಪಿತವಾಗುವ ಈ ದೇವಿಗೆ ಬೆಳಿಗ್ಗೆ 4 ಗಂಟೆಯಿಂದಲೇ ಸಾವಿರಾರು ಜನರು ಸರತಿಸಾಲಿನಲ್ಲಿ ನಿಂತು ದರ್ಶನ ಪಡೆದು, ಮಡಿಲಕ್ಕಿ ಅರ್ಪಿಸಿ, ಪುನೀತರಾಗುತ್ತಾರೆ. ನಂತರ ಗಂಡನ ಮನೆಗೆ ಕೋಟೆ ರಸ್ತೆಯಲ್ಲಿನ ಗದ್ದುಗೆಗೆ ಮೂರ್ತಿ ವಿಜೃಂಬಣೆಯ ಮೆರವಣಿಗೆಯಲ್ಲಿ ತೆರಳಿ ಸ್ಥಾಪನೆಗೊಂಡು ಅಲ್ಲಿ ನಾಲ್ಕು ದಿನಗಳ ಕಾಲ ಪೂಜೆ ಮಾಡಲಾಗುತ್ತದೆ.

ದೇವಿಯ ಕೃಪೆಯಿಂದ ಸುಂದರವಾಗಿ ಕೆತ್ತನೆಮೂಡಿ ಬರುತ್ತದೆ. ನನಗೀಗ 82 ವರ್ಷ. ಮೈಯಲ್ಲಿ ಶಕ್ತಿಯಿಲ್ಲ. ಆದರೂ ಕೂಡ ಆ ದೇವಿ ನನ್ನಿಂದಲೇ ಈ ಪುಣ್ಯ ಕಾರ್ಯವನ್ನು ಮಾಡಿಸಿಕೊಳ್ಳುತ್ತಿದ್ದಾಳೆ ಎಂದರು.
ನನಗೆ ಆತ್ಮತೃಪ್ತಿ ಇದೆ. ಆರೋಗ್ಯವಾಗಿದ್ದೇನೆ. ಇದಕ್ಕೆಲ್ಲಾ ದೇವಿಯೇ ಕಾರಣ ಎಂದರು. ಹೆತ್ಯಾಗ ಮರದಿಂದ ಈ ಮೂರ್ತಿಯನ್ನು ನಿರ್ಮಾಣ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಶೃಂಗೇರಿ ಗುರುಗಳು ನನಗೆ ಪಂಚಶಿಲ್ಪ ಕಲಾಪ್ರವೀಣ ಎಂದರು ಬಿರುದು ನೀಡಿದ್ದಾರೆ. ಕಲ್ಲು, ಮರ, ಚಿನ್ನ, ಬೆಳ್ಳಿ, ಸಿಮೆಂಟ್ ಮೂರ್ತಿಯನ್ನು ಮಾಡುತ್ತೇನೆ. ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ದೇಶ-ವಿದೇಶಗಳಿಂದ ಹಲವಾರು ಪ್ರಶಸ್ತಿಗಳು ಆ ದೇವಿಯ ಕೃಪೆಯಿಂದ ನನಗೆ ದೊರೆತಿದೆ ಎಂದರು.
ಈ ಸಂದರ್ಭದಲ್ಲಿ ಕೋಟೆ ಮಾರಿಕಾಂಬ ಸಮಿತಿಯ ಪ್ರಮುಖರಾದ ಎನ್. ಮಂಜುನಾಥ್, ಎನ್. ಉಮಾಪತಿ, ಎಸ್.ಪಿ. ಶೇಷಾದ್ರಿ, ಸುನೀಲ್, ನವುಲೆ ಶ್ರೀಧರ್ಮೂರ್ತಿ, ಪ್ರಭಾಕರ್, ಮುರಳಿಧರ್, ಹರಕೆರೆ ಚಂದ್ರಾಚಾರ್ ಮತ್ತಿತರರಿದ್ದರು.