ಶಿವಮೊಗ್ಗ : ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ಕುಮಾರ್ಸ್ವಾಮಿಯವರ ಹುಟ್ಟುಹಬ್ಬವನ್ನು ಶಿವಮೊಗ್ಗ ಜಿಲ್ಲಾ ಯುವಜನತಾದಳ(ಜಾತ್ಯಾತೀತ)ಪಕ್ಷದವತಿಯಿಂದ ಜಿಲ್ಲಾ ಜೆಡಿಎಸ್ ಕಛೇರಿಯಲ್ಲಿ ಅತ್ಯಂತ ಅರ್ಥಪೂರ್ಣ ಹಾಗೂ ಸಂಘಟನಾತ್ಮಕ ಉತ್ಸಾಹದೊಂದಿಗೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯ ನಾಯಕರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪದಾಧಿಕಾರಿಗಳು, ಮುಖಂಡರು, ಅಪಾರ ಸಂಖ್ಯೆಯ ಕಾರ್ಯಕರ್ತರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ, ಹುಟ್ಟುಹಬ್ಬ ಆಚರಿಸಿಕೊಳ್ಳಲಾಯಿತು.
ನಂತರ ಮೆಗ್ಗಾನ್ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ಗೋಪಾಲ್, ನಿಖಿಲ್ಕುಮಾರ್ಸ್ವಾಮಿ ಕೇವಲ ಯುವ ನಾಯಕರಲ್ಲ, ಬದಲಾಗಿ ರಾಜ್ಯದ ರಾಜಕೀಯದಲ್ಲಿ ಪರ್ಯಾಯ ನಾಯಕತ್ವವನ್ನು ರೂಪಿಸುತ್ತಿರುವ ದೃಢಸಂಕಲ್ಪದ ನಾಯಕರೆಂದು ಶ್ಲಾಘಿಸಿದರು. ಯುವಜನರ ಸಮಸ್ಯೆಗಳಿಗೆ ಸ್ಪಂಧಿಸುವ ರೈತಪರ ಹಾಗೂ ಜನಪರ ಚಿಂತನೆಹೊಂದಿರುವ ಅವರ ರಾಜಕೀಯ ನಿಲುವುಗಳು ರಾಜ್ಯದ ರಾಜಕಾರಣದಲ್ಲಿ ಹೊಸದಿಕ್ಕು ನೀಡುತ್ತಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟನಾತ್ಮಕವಾಗಿ ಬಲಪಡಿಸುವಲ್ಲಿ ನಿಖಿಲ್ಕುಮಾರ್ ಸ್ವಾಮಿಯವರ ನಾಯಕತ್ವ ಪ್ರಮುಖಪಾತ್ರ ವಹಿಸಿದ್ದು, ಮುಂದಿನ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಯುವಪಡೆ ಸಜ್ಜಾಗಬೇಕು ಎಂದು ಕರೆ ನೀಡಿದರು.
ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಧುಕುಮಾರ್ ಮಾತನಾಡಿ, ಜೆಡಿಎಸ್ ಪಕ್ಷದ ಸಂಘಟನೆ, ಮತ್ತಷ್ಟು ಬಲವಾಗುವಂತೆ ಕಾರ್ಯನಿರ್ವಹಿಸುವುದಾಗಿ ಬೂತ್ಮಟ್ಟದ ಸಂಘಟನೆಗೆ ಒತ್ತುನೀಡುವ ಜೊತೆಗೆ ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾಗುವ ಹೋರಾಟವನ್ನು ತೀವ್ರಗೊಳಿಸುವುದಾಗಿ ಯುವ ಕಾರ್ಯಕರ್ತರು ಸಂಕಲ್ಪಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ದಾದಾಪೀರ್, ರಾಮಕೃಷ್ಣ, ರಾಜ್ಯ ಕಾರ್ಯದರ್ಶಿ ರಾಕೇಶ್ ಡಿಸೋಜಾ, ಜೆಡಿಎಸ್ ಯುವ ಘಟಕದ ಕಾರ್ಯಾಧ್ಯಕ್ಷ ಎಸ್. ನಿಖಿಲ್, ಮುಖಂಡರಾದ ತಿಪ್ಪೇಸ್ವಾಮಿ, ಗೀತಾಸತೀಶ್, ರಮೇಶ್ ನಾಯ್ಕ, ತ್ಯಾಗರಾಜ್, ನಾಗೇಶ್ ನಾಯ್ಕ, ನರಸಿಂಹ, ವಿನಯ್, ರೋಹಿತ್, ಸಂಜಯ್ ಕಶ್ಯಪ್, ಪ್ರೇಮ್ಕುಮಾರ್ ಸೇರಿದಂತೆ ಇನ್ನಿತರರಿದ್ದರು.