ಶಿವಮೊಗ್ಗ: ಆಶಾ ಕಾರ್ಯಕರ್ತೆರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿ, ಅಲ್ಲಿಯವರೆಗೆ ಐಎಲ್ಓ ಶಿಫಾರಸ್ಸಿನಂತೆ ಕಾರ್ಮಿಕರಿಗೆ ನೀಡುವ ಕನಿಷ್ಠ ವೇತನವನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಕಾರ್ಯಕರ್ತರು ಸೋಮವಾರ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿದರು.
ಆತಾ ಕಾರ್ಯಕರ್ತೆಯರು ಕಳೆದ 18 ವರ್ಷಗಳಿಂದ ಆರೋಗ್ಯ ಇಲಾಖೆ ಮತ್ತು ಜನಸಾಮಾನ್ಯರ ಕೊಂಡಿಯಾಗಿ ಅತ್ಯಂತ ನಿಷ್ಠೆಯಿಂದ ಜನರಿಗೆ ಆರೋಗ್ಯ ಸೇವೆಯನ್ನು ನೀಡುತ್ತಿರುವುದು ತಮಗೆಲ್ಲ ತಿಳಿದಿದೆ. ಇವರ ಸೇವೆಯಿಂದಾಗಿಯೇ ಆರೋಗ್ಯ ಸೂಚಿಮಾಪಕಗಳು ಹೆಚ್ಚಿರುವುದು ಆರೋಗ್ಯ ಇಲಾಖೆಯ ದಾಖಲೆಗಳು ದೃಢಪಡಿಸುತ್ತವೆ. ಈ ಮಹತ್ವದ ಕಾರ್ಯದಿಂದ ಜನತೆಗೆ ಸೇವೆ ಸಲ್ಲಿಸುತ್ತಿರುವ ಇವರಿಗೆ ಸರ್ಕಾರದಿಂದ ಮತ್ತಷ್ಟು ಪ್ರೋತ್ಸಾಹ ಅತ್ಯಗತ್ಯವಿದೆ. ಇಂದಿನ ಬೆಲೆ ಏರಿಕೆ ದಿನಗಳಲ್ಲಿನ ಜೀವನ ಯೋಗ್ಯ ವೇತನ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಜಿಲ್ಲಾ ಸಮಿತಿ ವತಿಯಿಂದ ಆಶಾ ಕಾರ್ಯಕರ್ತೆಯರ ಬಹುದಿನಗಳ ಬೇಡಿಕೆಗಳ ಈಡೇರಿಕೆಗಾಗಿ ಈ ಮುಂಬರುವ ಬಜೆಟ್ ನಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯದ ಸಂಸದರಾದ ತಮ್ಮ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಹಾಗೆಯೇ ಕಳೆದ ಜುಲೈ 9 ರಂದು ರಾಷ್ಟ್ರವ್ಯಾಪಿಯಾಗಿ ಎಲ್ಲಾ ಯೋಜನಾ ಕಾರ್ಮಿಕರು ಹೋರಾಟ ನಡೆಸಿದ ನಂತರ 2025, ಜುಲೈಯಲ್ಲಿ ಆಶಾ ಕಾರ್ಯಕರ್ತೆಯರಿಗೆ ರೂ.2500-3000 ಹೆಚ್ಚಳವನ್ನು ಕೇಂದ್ರ ಆರೋಗ್ಯ ಸಚಿವರಾದ ಜೆ.ಪಿ.ನಡ್ಡಾ ಅವರು ಘೋಷಣೆ ಮಾಡಿದ್ದರು. ಇಲ್ಲಿಯವರೆಗೂ ಹೆಚ್ಚಳವಾಗಿರುವ ಮೊತ್ತವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಿಲ್ಲದಿರುವುದು ಅತ್ಯಂತ ವಿಷಾದದ ಸಂಗತಿ ಎಂದು ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ಮುಂಬರುವ ಬಜೆಟ್ನಲ್ಲಿ ಆಶಾ ಕಾರ್ಯಕರ್ತೆಯರನ್ನು ಐಎಲ್ಓ ಶಿಫಾರಸ್ಸಿನಂತೆ ಕಾರ್ಮಿಕರೆಂದು ಪರಿಗಣಿಸಿ, ರೂ.28,000 ಕನಿಷ್ಠ ವೇತನವನ್ನು ಜಾರಿಗೊಳಿಸಬೇಕು. ಈಗಾಗಲೇ ಆರೋಗ್ಯ ಸಚಿವರು ಘೋಷಿಸಿದ ಹೆಚ್ಚಳವನ್ನು ಕೂಡಲೇ ಜಾರಿ ಮಾಡಬೇಕು. ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸಲು ಕೋರಿ ಈ ಮೂಲಕ ಸಂಘದಿಂದ ತಮ್ಮ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದಿದ್ದಾರೆ.

ಆಶಾ ಕಾರ್ಯಕರ್ತೆಯರಿಗೆ ಈಗಾಗಲೇ ಕೇಂದ್ರ ಸರ್ಕಾರದಿಂದ ಜುಲೈ 2025 ರಲ್ಲಿ ಹೆಚ್ಚಿಸಿರುವ ರೂ.1500 ಮತ್ತು ಇತರ ಕಾಂಪೋನೆಂಟ್ಗಳ ಹೆಚ್ಚಳವನ್ನು ಮತ್ತು ನಿವೃತ್ತಿ ಇಡಿಗಂಟನ್ನು ಕೂಡಲೇ ಬಿಡುಗಡೆ ಮಾಡಬೇಕು.
ಆಶಾ ಕಾರ್ಯಕರ್ತೆಯರ ನಿವೃತ್ತಿ ಇಡಿಗಂಟನ್ನು ರೂ. 5 ಲಕ್ಷಕ್ಕೆ ಹೆಚ್ಚಿಸಬೇಕು. ನಿವೃತ್ತ ಆಶಾ ಕಾರ್ಯಕರ್ತೆಯರಿಗೆ ಪಿಂಚಣಿಯನ್ನು ಘೋಷಿಸಬೇಕು ಎಂದು ಒತ್ತಾಯಿಸಿದರು.