ಶಿವಮೊಗ್ಗ: ಇಲ್ಲಿಗೆ ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಹೆಚ್. ಕೃಷ್ಣ ಸದಸ್ಯರಾದ ಮಾರುತಿ ಸುಮಂತರಾವ್, ಕೆ.ಎಸ್. ವಿಜಯಲಕ್ಷ್ಮೀ ಹಾಗು ಲಿಂಗರಾಜ್ ಕೋಟೆ ಅವರು ನಿನ್ನೆ ಯಾವುದೇ ಮಾಹಿತಿ ನೀಡದೆ ಶಿವಮೊಗ್ಗಕ್ಕೆ ಭೇಟಿ ನೀಡಿದ್ದು, ತಪಾಸಣೆ ನಡೆಸಿದ ೫ ನ್ಯಾಯಬೆಲೆ ಅಂಗಡಿಗಳಲ್ಲಿ ೩ರನ್ನು ವಜಾಮಾಡಲು ಹಾಗೂ ೨ಕ್ಕೆ ಎಚ್ಚರಿಕೆ ನೀಡಲು ಸೂಚಿಸಿದ್ದಾರೆ.
ಇಲ್ಲಿನ ಅಶೋಕ ನಗರ ಎಂ.ಕೆ. ವಿಜೇಶ್ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿದಾಗ ಯಾವುದೇ ದಾಖಲೆಗಳು ಸರಿಯಾಗಿ ಸಿಗದೇ ಹೆಚ್ಚುವರಿಯಾಗಿ ೩೨ ಕ್ವಿಂಟಲ್ ೪೫ ಕೆ.ಜಿ. ಅಕ್ಕಿ ಪತ್ತೆಯಾಗಿದೆ. ಯಾವುದೇ ಸಮರ್ಪಕ ಉತ್ತರ ನೀಡದ ಹಿನ್ನಲೆಯಲ್ಲಿ ಈ ಅಂಗಡಿಯನ್ನು ಸಸ್ಪೆಂಟ್ ಮಾಡಲಾಗಿದೆ ಎಂದು ಇಂದು ಮದ್ಯಾಹ್ನ ಆಯೋದ ಅಧ್ಯಕ್ಷ ಡಾ.ಹೆಚ್. ಕೃಷ್ಣ ತಿಳಿಸಿದರು.
ಅಂತೆಯೇ ಶೇಷಾದ್ರಿಪುರಂನ ಅಹಮ್ಮದ್ ಷರೀಫ್ ಎಂಬುವವರು ನಡೆಸಿದ್ದ ಅಫ್ತಾ ನ್ಯಾಯಬೆಲೆ ಅಂಗಡಿಯಲ್ಲಿ ೫.೫ಕ್ವಿಂಟಲ್ ಅಕ್ಕಿ ಹೆಚ್ಚುವರಿಯಾಗಿದ್ದು, ದಾಖಲೆಗಳು ಸರಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಅದನ್ನು ಸಹ ಸಸ್ಪೆಂಡ್ ಮಾಡಲಾಗಿದೆ. ಅಂತೆಯೇ ಅಣ್ಣನಗರದಲ್ಲಿ ಜಿ.ಸಿ.ಚಂದ್ರಶೇಖರ್ ಎಂಬುವವರು ನಡೆಸುತ್ತಿದ್ದ ಹರ್ಷಿತಾ ನ್ಯಾಯಬೆಲೆ ಅಂಗಡಿಯಲ್ಲಿ ೩.೯ಕ್ವಿಂಟಲ್ ವ್ಯತ್ಯಾಸ ಕಂಡುಬಂದಿದ್ದು, ಆಯೋಗಕ್ಕೆ ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸಸ್ಪೆಂಡ್ಗೆ ಸೂಚಿಸಲಾಗಿದೆ ಎಂದರು.
ಅಂತೆಯೇ ಗುತ್ಯಪ್ಪ ಕಾಲೋನಿಯ ನಾಗರೀಕ ಸೇವಾ ಸಂಘ ಹೆಸರಿನಲ್ಲಿ ನಡೆಸುತ್ತಿದ್ದ ನ್ಯಾಯಬೆಲೆ ಅಂಗಡಿಯಲ್ಲಿ ೧.೫ಕ್ವಿಂಟಲ್ ವ್ಯತ್ಯಾಸ ಕಂಡು ಬಂದಿದ್ದು, ಗಾಡಿಕೊಪ್ಪ ತಾಂಡದ ಕಸಬಾ ಕೃಷಿ ಪತ್ತಿನ ಅಂಗಡಿಯಲ್ಲಿ ೧.೫ ಕ್ವಿಂಟಲ್ ವ್ಯತ್ಯಾಸ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.
ಆಹಾರ ಭದ್ರತೆ ಹಿನ್ನೆಲೆಯಲ್ಲಿ ಇನ್ನೂ ೩ ದಿನಗಳ ಕಾಲ ಶಿವಮೊಗ್ಗ ಜಿಲ್ಲೆಯಲ್ಲಿ ನಮ್ಮ ತಂಡ ಹಾಸ್ಟೇಲ್, ನ್ಯಾಯಬೆಲೆ ಅಂಗಡಿ ಇತರೆ ಕಡೆ ದಾಳಿ ನಡೆಸಲಿದೆ. ತಪ್ಪು ಕಂಡಾಗ ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ೫೯೭ ನ್ಯಾಯಬೆಲೆ ಅಂಗಡಿಗಳಿದ್ದು, ೬೭ ನಗರ ಪ್ರದೇಶದಲ್ಲಿವೆ. ಎಲ್ಲೆಡೆ ದಾಖಲೆಗಳನ್ನು ಪಡೆಯಲಾಗುತ್ತಿದೆ ಎಂದರು.
೭೫ ವರ್ಷ ಮೇಲ್ಪಟ್ಟವರಿಗೆ ಮನೆಗೆ ಹೋಗಿ ಆಹಾರ ಧಾನ್ಯ ವಿತರಣೆ
ನ್ಯಾಯಬೆಲೆ ಅಂಗಡಿಗಳು ತಮ್ಮ ವ್ಯಾಪ್ತಿಯಲ್ಲಿರುವ ಯಾವುದೇ ಪಡಿತರ ಚೀಟಿಯ ವ್ಯಕ್ತಿ ೭೫ ವರ್ಷ ದಾಟಿದ್ದರೆ ಅವರ ಮನೆಗೆ ಹೋಗಿ ಆಹಾರ ಧಾನ್ಯಗಳನ್ನು ಕೊಡುವಂತಹ ಕಾನೂನುಗಳು ಜಾರಿಯಾಗಿವೆ. ಕಳೆದ ೩ ತಿಂಗಳಿನಿಂದ ಈ ಕಾನೂನು ಜಾರಿಗೆ ಬಂದಿದ್ದು, ಯಾರಿಗಾದರೂ ಆಹಾರ ಧಾನ್ಯಗಳು ಸಿಗದಿದ್ದರೆ ಆಯೋಗವನ್ನು ಸಂಪರ್ಕಿಸಿ ಎಂದು ಡಾ.ಕೃಷ್ಣ (೯೪೪೮೪೬೬೦೯೯) ತಿಳಿಸಿದರು.
ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಆಹಾರ ವ್ಯವಸ್ಥೆ ಸರಿಯಾಗಿದೆ ಎಂದು ತಿಳಿದಿದ್ದೇನೆ ಅಂತೆಯೇ ಆಲ್ಕೋಳ ಬಳಿ ಇರುವ ಆಹಾರ ಇಲಾಖೆಯನ್ನು ಸ್ಥಳಾಂತರಿಸಲು ಸೂಚಿಸಲಾಗಿದೆ ಎಂದರು.