ಶಿವಮೊಗ್ಗ,ಜ. 17:
“ಹಿರಿಯ ರಾಜಕೀಯ ಮುತ್ಸದ್ದಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಶ್ರೀ ಭೀಮಣ್ಣ ಖಂಡ್ರೆ ಅವರು ವಿಧಿವಶರಾದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ಆಘಾತವಾಗಿದೆ. ಶಿವಶರಣರ ತತ್ವಗಳನ್ನೇ ಉಸಿರಾಗಿಸಿಕೊಂಡಿದ್ದ ಅವರು, ತಮ್ಮ ನೂರು ವರ್ಷಗಳ ಸಾರ್ಥಕ ಜೀವನದ ಮೂಲಕ ಇಡೀ ನಾಡಿಗೆ ಮಾರ್ಗದರ್ಶಕರಾಗಿದ್ದರು. ಅವರ ಅಗಲಿಕೆಯಿಂದ ಸಮಾಜವು ಒಬ್ಬ ಹಿರಿಯ ಕೊಂಡಿಯನ್ನು ಕಳೆದುಕೊಂಡಂತಾಗಿದ್ದು, ರಾಜ್ಯದ ಸಾರ್ವಜನಿಕ ಜೀವನಕ್ಕೆ ದೊಡ್ಡ ನಷ್ಟ ಉಂಟಾಗಿದೆ” ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ.ರಾಘವೇಂದ್ರ ಅವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕ ಏಕೀಕರಣದಂತಹ ಐತಿಹಾಸಿಕ ಚಳವಳಿಗಳಲ್ಲಿ ಮುಂಚೂಣಿಯಲ್ಲಿದ್ದ ಭೀಮಣ್ಣ ಖಂಡ್ರೆಯವರು, ಅಭಿವೃದ್ಧಿಯ ಹರಿಕಾರರಾಗಿದ್ದರು. ವಿಶೇಷವಾಗಿ ಉತ್ತರ ಕರ್ನಾಟಕದ ಏಳಿಗೆಗಾಗಿ, ಶಿಕ್ಷಣ ಮತ್ತು ಸಹಕಾರ ಕ್ಷೇತ್ರಗಳ ಮೂಲಕ ಅವರು ನೀಡಿದ ಕೊಡುಗೆಗಳು ಅಪ್ರತಿಮ. ಬೀದರ್ ಜಿಲ್ಲೆಯ ಶೈಕ್ಷಣಿಕ ಕ್ರಾಂತಿಯ ಹಿಂದೆ ಅವರ ಅವಿರತ ಶ್ರಮವಿದೆ. ಮೌಲ್ಯಾಧಾರಿತ ರಾಜಕಾರಣದ ಮೂಲಕ ದಶಕಗಳ ಕಾಲ ಜನರ ಸೇವೆಯನ್ನು ಮಾಡಿದ ಅವರು, ಇಂದಿನ ತಲೆಮಾರಿನ ರಾಜಕಾರಣಿಗಳಿಗೆ ಆದರ್ಶಪ್ರಾಯರಾಗಿದ್ದರು ಎಂದು ಅವರು ಸ್ಮರಿಸಿದ್ದಾರೆ.
‘ಸಮಾಜದ ಮೇಲೆ ಅಪಾರ ಕಾಳಜಿಯಿಟ್ಟುಕೊಂಡಿದ್ದ ಈ ಹಿರಿಯ ಚೇತನದ ಆತ್ಮಕ್ಕೆ ಭಗವಂತನು ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಈ ತೀವ್ರ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಸುಪುತ್ರರಾದ ಶ್ರೀ ಈಶ್ವರ ಖಂಡ್ರೆ ಅವರಿಗೆ, ಕುಟುಂಬದ ಸದಸ್ಯರಿಗೆ ಹಾಗೂ ಅವರ ಸಾವಿರಾರು ಅಭಿಮಾನಿಗಳಿಗೆ ಕರುಣಿಸಲಿ’ ಎಂದು ಸಂಸದ ರಾಘವೇಂದ್ರ ತಮ್ಮ ತೀವ್ರ ಸಂತಾಪಗಳನ್ನು ವ್ಯಕಪಡಿಸಿದ್ದಾರೆ.