ಶಿವಮೊಗ್ಗ : ಕೇಂದ್ರ ಸರ್ಕಾರದ ’ವಿಬಿ-ಜಿ ರಾಮ್ಜಿ’ ಯೋಜನೆಯು ವಿಕಸಿತ ಭಾರತದ ದಿಟ್ಟಹೆಜ್ಜೆಯಾಗಿದ್ದು, ಕಾಂಗ್ರೆಸ್ ಪಕ್ಷದವರು ಈ ಯೋಜನೆಗೆ ರಾಜಕೀಯ ಬಣ್ಣ ಬೆರೆಸಬಾರದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಅವರು ಇಂದು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದು, ಮನರೇಗಾದಲ್ಲಿದ್ದ ಲೋಪದೋಷಗಳನ್ನು ನ್ಯೂನತೆಗಳನ್ನು ಸರಿಪಡಿಸಿ ನಮ್ಮ ಗ್ರಾಮೀಣ ಜನರಿಗೆ ಹೆಚ್ಚಿನ ಅನುಕೂಲ ಆಗಲಿ ಎಂಬ ದೃಷ್ಟಿಯಿಂದ ನೂತನ ‘ವಿಬಿ-ಜಿ ರಾಮ್ ಜಿ’ ಕಾಯ್ದೆಯನ್ನು ಜಾರಿ ಮಾಡಲಾಗಿದೆ. ಆದರೆ ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ನವರು ವಿರೋಧಿಸುತ್ತಿರುವುದು ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು.
‘ವಿಮ-ಜಿ ರಾಮ್ ಜಿ’ಯಲ್ಲಿ ಗಾಂಧಿ ಬದಲು ಇಂಗ್ಲೀಷ್ನಲ್ಲಿ ಸಂಕೇತಾಕ್ಷರ ರಾಮ್ ಎಂದು ಬಂದಿರುವುದಕ್ಕೆ ಕಾಂಗ್ರೆಸ್ ವಿರೋಧಿಸುತ್ತಿದೆಯೇ ? ಒಂದು ವೇಳೆ ಇದು ನಿಜವೇ ಆಗಿದ್ದರೂ ಕೂಡ ಪ್ರಾಯಶಃ ಮಹಾತ್ಮಗಾಂಧೀಜಿಯವರು ಬದುಕಿದ್ದರೂ ಕೂಡ ಇದನ್ನು ವಿರೋಧಿಸುತ್ತಿರಲಿಲ್ಲ ಏಕೆಂದರೆ ಗಾಂಧೀಜಿಯವರ ಉಸಿರೇ ರಘುಪತಿ ರಾಘವ ರಾಜಾರಾಂ ಆಗಿತ್ತು. ಆದರೆ ಕಾಂಗ್ರೆಸ್ ಮಂದಿಗೆ ಮಾತ್ರ ಈಗ ಗಾಂಧೀಜಿಯವರ ಮೇಲೆ ದಿಢೀರ್ ಪ್ರೀತಿ ಬಂದುಬಿಟ್ಟಿದೆ ಎಂದರು.

ಹಾಗೆ ನೋಡಿದರೆ ೨೦೦೬ರಲ್ಲಿ ಎನ್ಆರ್ಜಿಎ ಯೋಜನೆಯನ್ನು ಜಾರಿಗೆ ತರಲಾಗಿತ್ತು. ೩-೪ ವರ್ಷಗಳ ಕಾಲ ಗಾಂಧೀಜಿಯವರ ಹೆಸರೇ ಅಲ್ಲಿ ಇರಲಿಲ್ಲ. ೨೦೦೯ರಲ್ಲಿ ಚುನಾವಣೆಯಲ್ಲಿ ಲಾಭ ಪಡೆಯಲು ಮಹಾತ್ಮಗಾಂಧೀಜಿಯ ಹೆಸರನ್ನು ಸೇರಿಸಿ ಅದನ್ನು ಮನರೇಗಾ ಎಂದು ಹೊಸದಾಗ ಸೃಷ್ಟಿಸಲಾಯಿತು ಎಂದರು.
ಕಾಂಗ್ರೆಸ್ ಕೇಂದ್ರದಲ್ಲಿ ಆಡಳಿತದಲ್ಲಿದ್ದಾಗ ಇಂತಹ ಹಲವಾರು ಯೋಜನೆಗಳಿಗೆ ಕಾಂಗ್ರೆಸ್ ನಾಯಕರುಗಳು ಹೆಸರನ್ನು ಇಟ್ಟಿದೆ. ಆದರಲ್ಲೂ ಮುಖ್ಯವಾಗಿ ನೆಹರೂ, ಇಂದಿರಾಗಾಂಧಿ ಮತ್ತು ರಾಜೀವ್ಗಾಂಧಿಯವರ ಹೆಸರನ್ನೇ ಮರು ಸೃಷ್ಟಿಸಲಾಗಿದೆ. ಇತಿಹಾಸದುದ್ದಕ್ಕೂ ಇದನ್ನೇ ಮಾಡಿಕೊಂಡು ಬಂದಿದೆ. ರಾಷ್ಟ್ರೀಯ ವೃದ್ಯಾಪ್ಯ ಪಿಂಚಣಿ ಯೋಜನೆ, ರಾಷ್ಟ್ರೀಯ ಕುಡಿಯುವ ನೀರಿನ ಮಿಷನ್, ಕುಟೀರ ಜ್ಯೋತಿ ಯೋಜನೆ ಸೇರಿದಂತೆ ಸುಮಾರು ೪೫೦ಕ್ಕೂ ಹೆಚ್ಚು ಸರ್ಕಾರಿ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗೆ ನೆಹರೂ, ಇಂದಿರಾಗಾಂಧಿ, ರಾಜೀವ್ಗಾಂಧಿ ಎಂದು ಹೆಸರಿಟ್ಟಿದ್ದಾರಲ್ಲಾ ಆಗ ಇವರಿಗೆ ಗಾಂಧೀಜಿಯವರ ನೆನಪಾಗಲಿಲ್ಲವೇ ? ಎಂದು ವ್ಯಂಗ್ಯವಾಡಿದರು.

ಅಷ್ಟಕ್ಕೂ ಹೊಸ ವಿಬಿಜಿ ರಾಮ್-ಜಿ ಕಾಯ್ದೆಯಲ್ಲಿ ಹಲವು ಒಳ್ಳೆಯ ಅಂಶಗಳು ಸೇರಿಕೊಂಡಿದ್ದು, ಇವರಿಗೆ ಗೊತ್ತಿಲ್ಲವೇ ? ಕಾಂಗ್ರೆಸ್ ಕಾಲದಲ್ಲಿ ಉದ್ಯೋಗ ಖಾತ್ರಿ ಯೋಜನೆ ಕೇವಲ ಭ್ರಷ್ಟಾಚಾರದ ಕೂಪವಾಗಿತ್ತು. ಹೊಸ ಕಾಯ್ದೆ ಪ್ರಕಾರ ಅದಕ್ಕೆ ಕಡಿವಾಣ ಹಾಕಲಾಗಿದೆ. ಬಡವರಿಗೆ ಕೆಲಸ ಕೊಡುವ ಬದಲು ಜೆಸಿಬಿ ಬಳಸುತ್ತಿದ್ದರು. ಮಧ್ಯವರ್ತಿಗಳೇ ಹಣವನ್ನು ನುಂಗುತ್ತಿದ್ದರು. ಬಡವರ ಕೈಗೆ ಹಣ ಸೇರುತ್ತಿರಲಿಲ್ಲ. ಹೊಸ ಕಾಯ್ದೆ ಪ್ರಕಾರ ಇದೆಲ್ಲದ್ದಕ್ಕೂ ಕಡಿವಾಣ ಹಾಕಲಾಗಿದೆ. ಈಗ ನೇರವಾಗಿ ಹಣ ದುಡಿಮೆದಾರರ ಕೈಗೆ ಸಿಗುತ್ತದೆ. ಇದು ಇವರಿಗೆ ಇಷ್ಟವಿಲ್ಲ ಎಂದು ದೂರಿದರು.
ನೂತನ ಕಾಯ್ದೆಯಡಿ ಕೃಷಿ ಋತುವಿನಲ್ಲಿ ಕಾರ್ಮಿಕರಿಗೆ ೬೦ ದಿನಗಳ ವಿರಾಮ ಕಡ್ಡಾಯವಾಗಿದೆ. ಇದರಿಂದ ಕೃಷಿ ಕೆಲಸ ಮಾಡಿಕೊಳ್ಳಲು ಅವರಿಗೆ ಸಹಾಯಕವಾಗುತ್ತದೆ. ಒಂದು ಪಕ್ಷ ಕೆಲಸ ಸಿಗದಿದ್ದರೆ ಅವರಿಗೆ ನಿರುದ್ಯೋಗ ಭತ್ಯೆಯನ್ನು ಕೂಡ ನೀಡಲಾಗುವುದು. ಕಾಂಗ್ರೆಸ್ ಹೇಳುವಂತೆ ಯಾವ ತಪ್ಪುಗಳು ಇಲ್ಲಿ ಇರುವುದಿಲ್ಲ. ಕೆಲಸ ಮಾಡುವ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ನವರು ಹೇಳುತ್ತಿದ್ದಾರೆ. ಆದರೆ ನಾವು ಖಾತರಿ ಅವಧಿಯನ್ನು ೧೦೦ ರಿಂದ ೧೨೫ ದಿನಗಳಿಗೆ ಹೆಚ್ಚಿಸಿದ್ದೇವೆ ಮತ್ತು ಯಾವುದೇ ಕಾರಣಕ್ಕೂ ಗ್ರಾ.ಪಂ. ಅಧಿಕಾರವನ್ನು ಕಾಂಗ್ರೆಸ್ನವರು ಹೇಳಿದಂತೆ ಮೊಟಕುಗೊಳಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಕಾಂಗ್ರೆಸ್ನವರು ಸದಾ ಗಾಂಧೀಜಿ, ಅಂಬೇಡ್ಕರ್ ಎಂದು ಜಪ ಮಾಡುತ್ತಾರೆ. ಆದರೆ ಇವರಿಗೆ ನಿಜವಾದ ಪ್ರೀತಿ ಇಲ್ಲ. ಅಂಬೇಡ್ಕರ್ ಅವರನ್ನು ಅವರು ಜೀವಂತವಾಗಿದ್ದಾಗಲೇ ಚುನಾವಣೆಯಲ್ಲಿ ಸೋಲಿಸಿದ ಕೀರ್ತಿ ಕಾಂಗ್ರೆಸ್ನವರದ್ದು. ಸದಾ ಸಂವಿಧಾನ ಪುಸ್ತಕವನ್ನು ಹಿಡಿದುಕೊಳ್ಳುವ ಕಾಂಗ್ರೆಸ್ ನಾಯಕರಿಗೆ ಸಂವಿಧಾನದ ಬಗ್ಗೆ ವಿಶ್ವಾಸವೂ ಇಲ್ಲ, ಸಂವಿಧಾನ ಪ್ರಕಾರ ನಡೆದುಕೊಳ್ಳುವುದೂ ಇಲ್ಲ ಎಂದು ಟೀಕಿಸಿದ ಅವರು, ಕಾಂಗ್ರೆಸ್ನವರು ವಿನಾಕಾರಣ ಕೇಂದ್ರ ಸರ್ಕಾರ ಒಳ್ಳೆಯ ಉದ್ದೇಶಕ್ಕಾಗಿ ಜಾರಿಗೆ ತಂದಿರುವ ಕಾಯ್ದೆಗಳನ್ನು ಸ್ವಾಗತಿಸಿ ದೇಶದ ಅಭಿವೃದ್ಧಿಗೆ ಸಹಕರಿಸಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ|| ಧನಂಜಯ ಸರ್ಜಿ, ಪ್ರಮುಖರಾದ ಮಾಲತೇಶ್, ಹರಿಕೃಷ್ಣ, ಶಿವರಾಜ್, ರಾಜೇಶ್ ಕಾಮತ್, ಮಂಜುನಾಥ್ ಎ., ಮಲ್ಲಿಕಾರ್ಜುನ ಹಕ್ರೆ, ಎಸ್. ಚಂದ್ರಶೇಖರ್ ಇದ್ದರು.
ಕಳೆದ ಬಾರಿ ನಿಮಗೆ ದೇಶದಲ್ಲಿಯೇ ಅನುದಾನ ಬಳಕೆಯಲ್ಲಿ ಮೊದಲಸ್ಥಾನವನ್ನು ನೀಡಲಾಗಿತ್ತು. ಆದರೆ ಈ ಬಾರಿ ೫ನೇ ಸ್ಥಾನ ನೀಡಲಾಗಿದೆಯಲ್ಲಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಹಾಗೇನಿಲ್ಲ ನನಗೆ ಈ ಎರಡು ವರ್ಷದಲ್ಲಿ ೯.೮೬ ಕೋಟಿ ಅನುದಾನ ಬಂದಿದೆ. ಒಟ್ಟು ೨೪೮ ಕಾಮಾಗಾರಿಗಳು ನಡೆಯುತ್ತಿವೆ. ಈಗಾಗಲೇ ೩೬ ಕಾಮಗಾರಿಗಳು ಪೂರ್ಣಗೊಂಡಿವೆ. ಸುಮಾರು ೩.೧೦ ಕೋಟಿ ಅನುದಾನ ಬಳಕೆಯಾಗಿದೆ. ಕೆಲವು ತಾಂತ್ರಿಕ ಕಾರಣಗಳಿಂದ ಮತ್ತು ಸಮಸ್ಯೆಗಳಿಗೆ ಕೆಲವು ಕಾಮಗಾರಿಗಳು ವಿಳಂಬವಾಗುತ್ತಿವೆ. ಏನೇ ಆದರೂ ಅವೆಲ್ಲವನ್ನು ಪೂರ್ಣಗೊಳಿಸುತ್ತೇನೆ. ಇಂದಿನಿಂದಲೇ ಕ್ಷೇತ್ರ ಪ್ರವಾಸವನ್ನು ಮಾಡುವೆ ಎಂದರು.