
ನೆಗಿಟೀವ್ ಥಿಂಕಿಂಗ್
ವಾರದ ಅಂಕಣ _71
ಗಜೇಂದ್ರಸ್ವಾಮಿ ಎಸ್. ಕೆ.,ಶಿವಮೊಗ್ಗ
(ಅರಹತೊಳಲು, ಭದ್ರಾವತಿ)
ಈ ಜಗತ್ತಲ್ಲಿ ಎಲ್ಲಾ ಬಗೆಯ ಜನರಿದ್ದಾರೆ. ತಮ್ಮ ಬದುಕಿನ ಮಾರ್ಗಗಳನ್ನು, ಹಿಂದಿನ ಕಷ್ಟ ನಷ್ಟಗಳನ್ನು, ಸಹಾಯ ಮಾಡಿದವರನ್ನು ಸ್ಮರಿಸುವ ಅವರನ್ನು ಗೌರವಿಸುವ ಮನೋಭಾವ ನಮ್ಮಲ್ಲಿ ಬಹಳಷ್ಟು ಜನರಿಗೆ ಇದೆ.

ನಮ್ಮ ಹಿಂದಿನ ಬದುಕಿನ ಕಷ್ಟಗಳು ಇಂದಿನ ಹೊಸ ಬದುಕಿನ ಬೆಳವಣಿಗೆಗೆ ಕಾರಣವಾಗುತ್ತಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕೆಲವೇ ಕೆಲವು ನಿಕೃಷ್ಟ ಮನಸ್ಸಿನ ವ್ಯಕ್ತಿಗಳು ತಾವು ಬೆಳೆದು ಬಂದ ದಾರಿಯನ್ನೇ ಕಸದ ಬುಟ್ಟಿಗೆ ಹಾಕಿ ತುಳಿಯುವ ಕಾಯಕ ಕೆಲವರಲ್ಲಿ ಹೆಚ್ಚಾಗುತ್ತಿದೆ. ಅದಕ್ಕೆ ಹೇಳುವುದು ಅದು ಅಹಂಕಾರವಲ್ಲ ದುರಹಂಕಾರ.

ದುರಾಂಕಾರ ಯಾವತ್ತಿದ್ದರೂ ನಮ್ಮ ಕರ್ಮ ಅಥವಾ ಪಾಪ ಇದ್ದಂತೆ, ಅದು ಯಾವತ್ತೂ ತಿರುಗಿ ನಿಲ್ಲುತ್ತದೋ ಗೊತ್ತಿಲ್ಲ. ಏಕೆಂದರೆ ಅಂತಹ ಸಾಕಷ್ಟು ಉದಾಹರಣೆಗಳನ್ನು ನಾವು ಕಣ್ಣಾರೆ ಕಂಡಿದ್ದೇವೆ ಎಂಬುದು ಈ ವಾರದ ನೆಗೆಟಿವ್ ಥಿಂಕಿಂಗ್ ಅಂಕಣದ ವಿಷಯ.

ಹಿಂದಿನ ಬದುಕು ಇಂದಿನ ಭವಿಷ್ಯಕ್ಕೆ, ಇಂದಿನ ನೆಮ್ಮದಿಗೆ, ಜೀವನಕ್ಕೆ ಕಾರಣವಾಗಬೇಕು. ಆದರೆ ಹಿಂದೆ ಮಾಡಿದ್ದ ಸಹಾಯಗಳನ್ನು ತಿರುಗಿಯೂ ಯೋಚಿಸದವರಿಗೆ ಭಗವಂತನೇ ಪಾಠ ಕಲಿಸುತ್ತಾನೆ ಎಂಬ ಮಾತು ನಮ್ಮಲ್ಲಿ ಈಗಲೂ ಕೇಳಿ ಬರುತ್ತಿದೆಯಲ್ಲವೇ?
ಮನುಷ್ಯನಿಗೆ ಒಂದಿಷ್ಟು ಅಹಂಕಾರ ಇರಬೇಕು ನಿಜ. ಆದರೆ ಅದು ದುರಹಂಕಾರವಾಗಬಾರದು ಎಂಬುದು ನಮ್ಮ ಹಿರಿಯರ ಮಾತಲ್ಲವೇ?
ನಾನೇ ಗ್ರೇಟ್ ಎಂದು ಸ್ವಯಂಘೋಷಿತ ಹೀರೋನಂತಾಡುವ ವ್ಯಕ್ತಿಗಳು ನಮ್ಮ ನಡುವೆ ಈಗಲೂ ಕೆಲವರಿದ್ದಾರೆ ಜಗದ ಕಣ್ಣಿಗೆ ಅತಿ ಒಳ್ಳೆಯವರು, ಸಭ್ಯರು, ಸುಸಂಸ್ಕೃತರು ಎಂದು ತೋರಿಸಿಕೊಳ್ಳುತ್ತಾ ತಮ್ಮ ತಮ್ಮ ಬೇಳೆಕಾಳುಗಳನ್ನು ಬೇಯಿಸಿಕೊಳ್ಳುವ ಕುತಂತ್ರ ಬುದ್ಧಿಗಳನ್ನು ಕೆಲವರು ಹೊಂದಿರುವುದು ನಮ್ಮ ನಡುವಿನ ದುರಂತ ಹೌದಲ್ಲವೇ?

ತಾತ್ಸಾರ, ಅಹಂಕಾರ ನಮ್ಮನ್ನೇ ತುಳಿಯುತ್ತೆ, ದುರಂಹಕಾರ ಪರರ ಭವಿಷ್ಯವನ್ನೇ ಹಾಳು ಮಾಡುತ್ತೆ,
ತಮಗೂ …., ಬಗಣಿಗೂಟ ಹೊಡೆಯುತ್ತೆ ನೆನಪಿರಲಿ ಎಂಬ ಮಾತನ್ನು ಹಿರಿಯರೊಬ್ಬರು ಹೇಳಿದ್ದು ಇಲ್ಲಿ ವಿಶೇಷ ಎನಿಸುತ್ತದೆ.
ಕೆಲವರ ದುರಹಂಕಾರ ಸಭ್ಯರನ್ನು ಒಂದಿಷ್ಟು ಅತಂತ್ರಗೊಳಿಸುತ್ತದೆ, ತೊಂದರೆ ಮಾಡುತ್ತದೆ ಎಂಬುದು ಸರಿಯಷ್ಟೇ ಆದರೆ ಅದು ಶಾಶ್ವತವೇನಲ್ಲ. ಸಭ್ಯರು ಮುಂದಿನ ದಿನಗಳನ್ನು ನೆನೆಯುತ್ತಾ ನಡೆಯುವ ಹೆಜ್ಜೆಯಲ್ಲಿ ಮುಂದೆ ಸಾಗುತ್ತಾರೆ. ಆದರೆ ದುರಹಂಕಾರಿಗಳು ನಿಜವಾಗಿಯೂ ನನ್ನದೇ ಗ್ರೇಟ್ ಎಂದು ಹಠ ಸಾಧಿಸುತ್ತಾ ತಿರುಗಿ ಬೀಳುತ್ತಾರೆ. ಅದಕ್ಕೆ ಹೇಳುವುದು ನಮ್ಮ ನಡುವೆ ಇರುವಂತಹ ಒಂದು ಶಕ್ತಿ ದೇವರಲ್ಲವೇ?

ಆ ದೇವರು ಖಂಡಿತ ಅಂತವರಿಗೆ ಶಿಕ್ಷೆ ನೀಡುತ್ತದೆ ಎಂಬುದು ನಮ್ಮ ಓದುಗರಬ್ಬರ ಅಭಿಪ್ರಾಯ.
ಇಲ್ಲಿ ಅತಿ ಮುಖ್ಯವಾಗಿ ನಾವು ಸ್ವಯಂಘೋಷಿತ ಹೀರೋಗಳನ್ನು ಒಂದಿಷ್ಟು ಅವಲೋಕಿಸುವ, ಅವರು ಗೊತ್ತಾಗದಂತಹ ಮಾಡಿದ ತಪ್ಪು ಪರಿಸ್ಥಿತಿಯನ್ನು ತಂದು ನೀಡುವ ಕುತಂತ್ರ ಬುದ್ಧಿ ಜಗದ ಬಹುತೇಕ ಜನರಿಗೆ ಅರ್ಥವಾಗಬೇಕಿದೆ ಅಲ್ಲವೇ?

ತಮ್ಮ ತಮ್ಮ ಆಸೆ ಆಕಾಂಕ್ಷೆಗಳಿಗೋಸ್ಕರ ಇನ್ನೊಬ್ಬರನ್ನು ತುಳಿಯುವ ಮಾತೆತ್ತಿದರೆ, ಅದು ಹೀಗೆ ಅದು ಹಾಗೆ ಎಂದು ವೇದಾಂತದ ನಾಲ್ಕು ಪುಟಗಳನ್ನು ಓದಿ ಅದನ್ನು ಬಿಂಬಿಸುವ ಮೂಲಕ ಮಹಾನ್ ಮೇಧಾವಿ ಎಂದುಕೊಳ್ಳುವ ವ್ಯಕ್ತಿಗಳಿಗೆ ಹೇಗೆ ತಾನೆ ತಮ್ಮ ಹಿಂದಿನ ಬದುಕು ನೆನಪಾಗಲಿಕ್ಕೆ ಸಾಧ್ಯ. ಈ ಜಗತ್ತಿನಲ್ಲಿ ಯಾರೇ ಆಗಲಿ, ಹೇಗೆ ಇರಲಿ ಎಷ್ಟೇ ಸ್ಥಿತಿವಂತರಾಗಿರಲಿ ಪರಸ್ಪರ ಮನುಜ ಗುಣವೆಂಬಂತೆ ಅಕ್ಕಪಕ್ಕದಲ್ಲಿ ಗೆಳೆಯರಲ್ಲಿ ಸಹಾಯ ಹಸ್ತ ಪಡೆಯುವುದು ಸಹಾಯ ಮಾಡುವುದು ವಾಡಿಕೆ.
ಈ ಸಹಾಯ ಕೆಲವರಲ್ಲಿ ಯಾವುದೇ ಕಾರಣಕ್ಕೂ ಜಗತ್ತಿಗೆ ಹೊರ ಬೀಳದ ವಿಷಯವಾಗುತ್ತದೆ. ಬಲಗೈಯಲ್ಲಿ ಕೊಟ್ಟರೆ ಎಡಗೈಗೆ ಗೊತ್ತಾಗಬಾರದು ಎಂಬ ನಿಯಮ ಬಹಳಷ್ಟು ಜನರಲ್ಲಿದೆ. ಆದರೆ ಕೆಲವರು ಅದನ್ನೇ ದೊಡ್ಡ ವೇದಾಂತ ಮಾಡಿಕೊಂಡಿದ್ದಾರೆ. ಮತ್ತೊಂದು ದುರಂತವೆಂದರೆ ಒಂದು ಸಹಾಯ ಪಡೆದವರು ಇಂದು ಮತ್ತೊಬ್ಬರನ್ನು ಅದೇ ಸಹಾಯ ಮಾಡಿದವರನ್ನು ಮರೆಯುವ ಹಾಗೂ ಅವರನ್ನು ತುಳಿಯಲು ಷಡ್ಯಂತ್ರ ರೂಪಿಸುವ ಕಸುಬು ಅವರ ಕಾಯಕವಾಗಿರುವುದು ಈ ಜಗತ್ತಿನ ಅತಿ ನೋವಿನ ಹಾಗೂ ದುರಂತದ ಸಂಗತಿ ಎಂದರೆ ತಪ್ಪಾಗಲಿಕ್ಕಿಲ್ಲ.

ಒಂದು ಮಾತು ಇಲ್ಲಿ ಅತ್ಯಂತ ಸ್ಪಷ್ಟವಾಗಿ ಹೇಳಬೇಕಿದೆ. ಬದುಕಿಗಾಗಿ ನಾವು ಮಾಡಿದ, ನಮ್ಮ ಹಿಂದಿನ ದಿನಗಳು ಹಾಗೂ ಅಂದಿನ ಕಷ್ಟಗಳು ನಮ್ಮ ಮನದಲ್ಲಿ ಸದಾ ಯಾವಾಗಲೂ ಹಸಿರಾಗಿರಬೇಕು ಆ ಕಷ್ಟಗಳನ್ನು ನೆನೆದು ಬದುಕು ಕಟ್ಟಿಕೊಳ್ಳಬೇಕು, ಆದರೆ ಅಂತಹ ಆಲೋಚನೆಗಳು ಕೆಲವರಲ್ಲಿ ಬರದಿರುವುದೇ ಈ ಕಲಿಯುಗದ ಕುಲಗೆಟ್ಟ ವಿಷಯವಂತೆ ಏಕೆಂದರೆ ನೋವು ನೀಡಿದಾತ ಅದನ್ನು ಮತ್ತೆ ಅನುಭವಿಸಲೇಬೇಕು.
ಅದಕ್ಕೆ ಹೇಳುವುದು ಸಹಾಯವನ್ನು ಸ್ಮರಿಸದ ದುರಹಂಕಾರಿಯಾಗಿರುವವನಿಗೆ ಕಾಣದ ಶಕ್ತಿ ತಿರುಗಿ ಬಾಣ ಬಿಡುತ್ತದೆ ಎಂಬ ಮಾತು ಸರಿಯೋ ತಪ್ಪೋ ಗೊತ್ತಿಲ್ಲ. ಅದಕ್ಕೆ ಆ ಕಾಣದ ಶಕ್ತಿಯ ಮೊರೆ ಹೋಗುವ ಅನಿವಾರ್ಯತೆ ನಮ್ಮ ನಡುವೆ ಬಂದಿರುವುದು ವಿಶೇಷವೇ ಹೌದು.
ಜೈ ಕೋಟೆ ಮಾರಿಕಾಂಭೆ