ಶಿವಮೊಗ್ಗ : ಮಕ್ಕಳಲ್ಲಿ ಸೃಜನಶೀಲತೆಯನ್ನು ಬಿತ್ತುವ ಕಾರ್ಯ ಮನೆಯಿಂದಲೇ ಶುರುವಾಗಲಿ ಎಂದು ಖ್ಯಾತ ಮನಃಶಾಸ್ತ್ರಜ್ಞ ಡಾ.ಎಸ್.ಟಿ. ಅರವಿಂದ ಅಭಿಪ್ರಾಯಪಟ್ಟರು.
ನಗರದ ಭೂರಿದಿ ಎಜುಕೇಶನ್ ಟ್ರಸ್ಟ್ ನ ಇನೊವೇಟಿವ್ ಕಿಡ್ಡೂಸ್ ಶಾಲೆಯ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ‘ಆತ್ಮಜ್ಯೋತಿ ಭವ’ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಮುಂದೆ ಪೋಷಕರ ನಡೆ ನುಡಿ ಆದರ್ಶಪ್ರಾಯವಾಗಿರಲಿ. ಪೋಷಕರ ವ್ಯಕ್ತಿತ್ವಗಳು ಮಕ್ಕಳ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಮಕ್ಕಳ ಮುಂದೆ ಪೋಷಕರು ಬಳಸುವ ಭಾಷೆಯು, ಗೌರವ ವಿನಯದ ಮಾತುಗಳಾಗಿರಬೇಕು. ಮೊಬೈಲ್ ಎಂಬುದು ವ್ಯಸನವಾಗದಂತೆ ಜಾಗೃತಿ ವಹಿಸಿ. ನಿಮಾನ್ಸ್ ನಲ್ಲಿ ಶಟ್ ಕ್ಲಿನಿಕ್ ಎಂಬ ವ್ಯಸನಮುಕ್ತವಾಗಿಸುವ ವಾರ್ಡ್ ಇದೆ. ಇತ್ತಿಚೆಗೆ ಮೊಬೈಲ್ ವ್ಯಸನ ಬಿಡಿಸುವ ಕ್ಲಿನಿಕ್ ಶುರುವಾಗಿದೆ. ಮೊಬೈಲ್ ಮೂಲದ ಆಟಗಳು, ಮಕ್ಕಳಲ್ಲಿ ಹಿಂಸಾತ್ಮಕ ಪ್ರವೃತ್ತಿಯನ್ನು ತುಂಬುತ್ತಿವೆ ಎಂಬ ವಾಸ್ತವತೆ ಅರಿಯಿರಿ. ಈಚೆಗೆ ಮಕ್ಕಳು ಕೂಡ ಖಿನ್ನತೆಗೆ ಒಳಗಾಗುತ್ತಿರುವುದನ್ನು ಕಾಣುತ್ತಿರುವುದು ವಿಷಾದನೀಯ.

ಅನೇಕ ತಂದೆ ತಾಯಂದಿರು, ಒತ್ತಡಯುತ ಜೀವನ ಶೈಲಿಗೆ ಸಿಲುಕಿ, ತಮ್ಮ ಮಕ್ಕಳನ್ನು ಸರಿಯಾಗಿ ಪೋಷಿಸುವಲ್ಲಿ ಹಿಂದೆ ಉಳಿಯುತ್ತಿದ್ದಾರೆ. ಮೌಲ್ಯಗಳನ್ನು ಕಲಿಸುವ ಕಾರ್ಯ ಮನೆಯಿಂದಲೇ ಶುರುವಾಗಬೇಕು. ಪ್ರೀತಿಯೊಂದಿಗೆ ಶಿಸ್ತು ಸಂಯಮದ ಸಮ್ಮಿಲನ ಆಗಬೇಕು. ನಮ್ಮ ಸಂಸ್ಕೃತಿ ಸಂಸ್ಕಾರಯುತ ಗುಣಗಳನ್ನು ಮಕ್ಕಳಲ್ಲಿ ನೆಲೆಯಾಗುವಂತೆ ಪೋಷಕರು ಕಾಳಜಿ ವಹಿಸಿ ಎಂದು ಕಿವಿಮಾತು ಹೇಳಿದರು.

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕಿ ಲಕ್ಷ್ಮೀ.ಆರ್.ದೊಡ್ಡಮನಿ ಮಾತನಾಡಿ, ಶಿಕ್ಷಣ ನಮಗೆ ಸಿಕ್ಕ ಬಹುದೊಡ್ಡ ಸಂಪತ್ತು. ಕಲಿತ ಜ್ಞಾನವನ್ನು ಸರ್ವತೋಮುಖ ಬೆಳವಣಿಗೆಗಾಗಿ ಬಳಸಿ. ಬಡತನ ಮತ್ತು ಸವಾಲುಗಳು ಹೊಸತನದ ಸಾಧನೆಗೆ ಪ್ರೇರಣೀಯವಾಗಿರುವ ವಿಚಾರ ಎಂಬ ಸತ್ಯ ಅರಿಯಿರಿ. ಮಕ್ಕಳಲ್ಲಿರುವ ಕೌಶಲ್ಯತೆಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ಗುರುತಿಸುವ ಕಾರ್ಯ ಪೋಷಕರಿಂದ ಆಗಲಿ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಬಸವರಾಜ್ ದೇಸಾಯಿ, ಪ್ರಾಂಶುಪಾಲರಾದ ರೇಖಾ ಬಸವರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕಿ ಬಿಂದು ನಿರೂಪಿಸಿದರು.