ನೂತನ ಜಿಲ್ಲಾಧಿಕಾರಿ ಹಾಗೂ ಜಿಲ್ಲಾರಕ್ಷಣಾಧಿಕಾರಿಯವರನ್ನು ಇಂದು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಆತ್ಮೀಯವಾಗಿ ಸನ್ಮಾನಿಸಿತು. ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಪದಾಧಿಕಾರಿಗಳಾದ ನಾಗರಾಜ್ ನೇರಿಗೆ, ಹೊನ್ನಾಳಿ ಚಂದ್ರಶೇಖರ್, ಸಂತೋಷ್ ಕಾಚಿನಕಟ್ಟೆ, ಸಂಪಾದಕರ ಸಂಘದ ಅಧ್ಯಕ್ಷ ಗಜೇಂದ್ರಸ್ವಾಮಿ ಎಸ್.ಕೆ., ಟ್ರಸ್ಟಿಗಳಾದ ಶೃಂಗೇರಿ ಚಂದ್ರಶೇಖರ್, ಪ್ರಸನ್ನಕುಮಾರ್, ಆರಗ ರವಿ, ರಾಮಚಂದ್ರ ಗುಣಾರಿ, ಸ್ಪಂದನ ಚಂದ್ರು ಹಾಗೂ ಇತರರಿದ್ದರು.
ಒಂದ್ ವಿಶೇಷ ಗೊತ್ತೇ..?
ಪ್ರಸ್ತುತ ಶಿವಮೊಗ್ಗದಲ್ಲಿ ಇರುವ ಜಿಲ್ಲಾಧಿಕಾರಿ, ಜಿಲ್ಲಾರಕ್ಷಣಾಧಿಕಾರಿ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯವರು ಐಪಿಎಸ್ ನಲ್ಲಿ ಉತ್ತೀರ್ಣರಾದಂತಹವರು. ಈ ವಿಷಯವನ್ನು ಇಂದಿನ ಸಂವಾದದಲ್ಲಿ ಎಸ್ಪಿ ತಿಳಿಸಿದ್ದು ವಿಶೇಷ.
ಶಿವಮೊಗ್ಗ,ಜ.07:
ಜಿಲ್ಲೆ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರಸಿದ್ದಿಯಾಗಿದೆ. ಜಿಲ್ಲೆಯಲ್ಲಿ ಇನ್ನೂ ಎಲೆಮರೆಕಾಯಿಯಂತಿರುವ ಸ್ಥಳಗಳ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗು ವುದೆಂದು ನೂತನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.
ಶಿವಮೊಗ್ಗ ಪ್ರೆಸ್ಟ್ರಸ್ಟ್ ಪತ್ರಿಕಾಭವನ ದಲ್ಲಿ ಆಯೋಜಿಸಿದ್ದ ನೂತನ ಡಿಸಿ ಎಸ್ಪಿಯವರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸಿದ್ದಿ ಪಡೆದ ಪ್ರೇಕ್ಷಣೀಯ ಸ್ಥಳಗಳ ಜೊತೆಗೆ ಪ್ರಚಲಿತದಲ್ಲಿಲ್ಲದ ಸ್ಥಳಗಳನ್ನು ಸಹ ಗುರುತಿಸಿ ಅವುಗಳಿಗೆ ಸಾರ್ವಜನಿಕರ ಭೇಟಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.
ಶರಾವತಿ ಸಂತ್ರಸ್ಥರ ಸಮಸ್ಯೆ ತಾರ್ಕಿಕ ಅಂತ್ಯವನ್ನು ಕಾಣುವ ಹಂತಕ್ಕೆ ಬಂದಿದೆ. ಹಿಂದಿನ ಜಿಲ್ಲಾಧಿಕಾರಿಗಳು ಈ ವಿಷಯದಲ್ಲಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸಾಕಷ್ಟು ಕ್ರಮ ಕೈಗೊಂಡಿದ್ದಾರೆ. ಆ ಕೆಲಸವನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಮುಂದುವರೆಯಲಾಗುವುದು ಎಂದ ಅವರು, ಮಂಗನಕಾಯಿಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೆರೆ, ಕಂದಾಯ ಭೂಮಿ ಒತ್ತುವರಿ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು . ಒತ್ತುವರಿ ವಿಚಾರದಲ್ಲಿ ಕಾನೂನು ರೀತಿ ಏನೆಲ್ಲ ಮಾಡಬಹುದೋ ಅವೆಲ್ಲವನ್ನೂ ಕೂಡ ಮಾಡಲಾಗುವುದು ಎಂದು ಹೇಳಿದರು.
ಮುಖ್ಯವಾಗಿ ಪರಿಸರಕ್ಕೆ ಸಂಬಂಧಿಸಿ ದಂತೆ, ಯುವ ಜನತೆಯನ್ನು ಪರಿಸರ ಸ್ನೇಹಿಯಾಗಿ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಕಾನೂನು ಸುವ್ಯವಸ್ಥೆಯಲ್ಲಿ ಮುಂಜಾಗೃತಾ ಕ್ರಮವನ್ನು ಕೈಗೊಳ್ಳಲಾಗುವುದು. ಪ್ರತಿದಿನವೂ ಸಹ ನಮಗೆ ಸವಾಲು ಇರುತ್ತದೆ. ಈ ಹಿನ್ನೆಲೆಯಲ್ಲಿ ರಚನಾತ್ಮಕ ವಾಗಿ ಕಾರ್ಯನಿರ್ವಹಿಸಲಾಗುತ್ತದೆ ಎಂದು ಹೇಳಿದರು.

ಕಾನೂನು ಬಾಹಿರ ಚಟುವಟಿಕೆಗಳ ವಿರುದ್ದ ಕಠಿಣ ಕ್ರಮ ಕೈಗೊಂಡು ಸಮಾಜದ ಸ್ವಾಸ್ತ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ನೂತನ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಹೇಳಿದರು.
ಶಿವಮೊಗ್ಗ ಜಿಲ್ಲೆ ಹಲವು ವಿಷಯಗಳಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ. ಸಾಹಿತ್ಯ ಕ್ಷೇತ್ರದಲ್ಲಿಯೂ ಕೂಡ ಸಾಕಷ್ಟು ಪ್ರಸಿದ್ದಿಯನ್ನು ಪಡೆದಿದೆ. ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಗಾಗಿ ಹಲವು ಬಾರಿ ಇಲ್ಲಿಗೆ ಬಂದಿದ್ದೇನೆ ಎಂದರು.
ನಕ್ಸಲ್ ನಿಗ್ರಹಪಡೆಯಲ್ಲಿ ಕೆಲಸ ಮಾಡುತ್ತಿದ್ದಾಗ ಶಿವಮೊಗ್ಗ ಜಿಲ್ಲೆಯ ಕಾಡಿನಲ್ಲಿ ಸಾಕಷ್ಟು ನಡೆದಿದ್ದೇನೆ. ಇದೀಗ ಜಿಲ್ಲಾ ರಕ್ಷಣಾಧಿಕಾರಿಯಾಗಿ ನಾಡಿನಲ್ಲಿ ನಡೆಯುತ್ತಿದ್ದೇನೆ ಎಂದ ಅವರು, ಶಿವಮೊಗ್ಗ ಜಿಲ್ಲೆ ಸಾಹಿತಿಗಳ ಮತ್ತು ಸಾಹಿತ್ಯದ ಪ್ರಭಾವದಿಂದಾಗಿ ಇಂದು ನಾನು ಈ ಸ್ಥಾನದಲ್ಲಿದ್ದೇನೆ ಎಂದು ಹೇಳಿದರು.
ನಾನು ಮೂಲತಃ ಚಿತ್ರದುರ್ಗ ಜಿಲ್ಲೆಯವನು. ಬೆಂಗಳೂರಿನಲ್ಲಿ ಬೆಳೆದೆ. ಅಲ್ಲಿಯೇ ಇಂಜಿನಿಯರ್ ಮೆಕಾನಿಕಲ್ನಲ್ಲಿ ಪದವಿ ಶಿಕ್ಷಣವನ್ನು ಪಡೆದೆ. ಖಾಸಗಿ ಕಂಪನಿಯಲ್ಲಿ ಕೆಲಸದ ಅವಕಾಶವೂ ಸಿಕ್ಕಿತು. ೨ ವಿದೇಶಗಳಲ್ಲಿ ಕೆಲಸಕ್ಕೆ ಹೋಗಬೇಕಾದ ಅವಕಾಶವೂ ಬಂದಿತು. ಆದರೆ ನಮ್ಮ ದೇಶದಲ್ಲಿಯೇ ಸೇವೆ ಸಲ್ಲಿಸಬೇಕೆಂಬುದು ನನ್ನ ಆಸೆಯಾಗಿತ್ತು. ಆ ಸಂದರ್ಭದಲ್ಲಿಯೇ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ರಾಜ್ಯದಲ್ಲಿಯೇ ಐಪಿಎಸ್ ಅಧಿಕಾರಿಯಾಗುವದ ಅವಕಾಶ ದೊರೆಯಿತು. ನಮ್ಮ ಕರ್ನಾಟಕವೇ ವಿಶ್ವದ ಎಲ್ಲಾ ರಾಷ್ಟ್ರ ಎಂದುಕೊಂಡು ಅತ್ಯಂತ ಸಂತೋಷದಿಂದ ಕಾರ್ಯನಿರ್ವಹಿಸುತ್ತಿದ್ದೇನೆ ಎಂದರು.
