ಸಾಗರ : ಮಾರಿಜಾತ್ರೆ ಯಶಸ್ಸಿಗೆ ಒಂದೊಂದು ಸಮಿತಿಗೆ ತಾಲ್ಲೂಕು ಮಟ್ಟದ ಒಬ್ಬೊಬ್ಬ ಅಧಿಕಾರಿಯನ್ನು ನೇಮಕ ಮಾಡಲಾಗುತ್ತದೆ. ಅಧಿಕಾರಿಗಳು ಜಾತ್ರೆ ಯಶಸ್ಸಿಗಾಗಿ ತಮಗೆ ವಹಿಸಿರುವ ಸಮಿತಿ ಜೊತೆ ಸೇರಿ ಕೆಲಸ ಮಾಡಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜಾತ್ರೆ ಯಶಸ್ಸಿಗೆ ೨೦ ಉಪ ಸಮಿತಿಗಳನ್ನು ರಚಿಸಲಾಗಿದೆ. ಅಧಿಕಾರಿಗಳ ಜೊತೆ ಸಮಿತಿ ಸಂಚಾಲಕರು, ೨೦ ಸದಸ್ಯರು ಇರುತ್ತಾರೆ. ಎಲ್ಲರೂ ಸೇರಿ ಜಾತ್ರೆ ಯಶಸ್ವಿಗೊಳಿಸುವತ್ತ ಗಮನ ಹರಿಸಬೇಕಾಗಿದೆ. ಜಾತ್ರೆಗೆ ಕನಿಷ್ಟ ೮ ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಮೂರು ದಿನಗಳ ಕಾಲ ಅಮ್ಮನವರ ದರ್ಶನಕ್ಕೆ ಹೆಚ್ಚಿನ ಭಕ್ತರು ಆಗಮಿಸಲಿದ್ದು, ಸದರಿ ಸಾಲಿನಲ್ಲಿ ಬಿಸಿಲಿನಲ್ಲಿ ನಿಲ್ಲುತ್ತಾರೆ. ಅವರಿಗೆ ನೆರಳಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಹಿಂದಿನ ಜಾತ್ರೆಯಂತೆ ವಿಐಪಿ ಪಾಸ್ ಸಂಸ್ಕೃತಿಯನ್ನು ಬಿಟ್ಟು ಪ್ರಮುಖರು ಕೆಲವರಿಗೆ ವಿಶೇಷ ಪಾಸ್ ನೀಡಲಾಗುತ್ತದೆ. ವಿಶೇಷ ಪಾಸ್ ಹೊಂದಿರುವವರು ಸರದಿ ಸಾಲಿನಲ್ಲಿ ನಿಂತವರು ದೇವರ ದರ್ಶನ ಪಡೆದ ನಂತರ ತಾವು ದೇವಿ ದರ್ಶನ ಪಡೆಯಬಹುದು ಎಂದರು.

ಈ ವರ್ಷ ವಸ್ತುಪ್ರದರ್ಶನ ಹರಾಜು ೧.೩೪ ಕೋಟಿ ರೂ.ಗೆ ಹೋಗಿದೆ. ಇದರಿಂದ ದೇವಸ್ಥಾನದ ವತಿಯಿಂದ ಶಾಲೆ ಮತ್ತು ಕಲ್ಯಾಣ ಮಂಟಪ ನಿರ್ಮಿಸುವ ಉದ್ದೇಶಕ್ಕೆ ಸ್ಪೂರ್ತಿ ಸಿಕ್ಕಂತೆ ಆಗಿದೆ. ಜಾತ್ರೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ಭಾಗಗಳಲ್ಲಿ ಸಿಸಿ ಕ್ಯಾಮರಾವನ್ನು ಮಾರಿಕಾಂಬಾ ಸಮಿತಿಯಿಂದ ಅಳವಡಿಸಲಾಗುತ್ತದೆ. ಇದರ ಜೊತೆಗೆ ಸ್ವಚ್ಚತೆಗೆ ಆದ್ಯತೆ ನೀಡಿ ನಗರಸಭೆಯಿಂದ ಹೆಚ್ಚಿನ ಜನರನ್ನು ಸ್ವಚ್ಚತಾ ಕಾರ್ಯಕ್ಕೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಜಾತ್ರೆಗೆ ಬರುವವರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ನಮ್ಮ ಕ್ಲಿನಿಕನ್ನು ತಾತ್ಕಾಲಿಕವಾಗಿ ಜಾತ್ರೆ ನಡೆಯುವ ಕಡೆ ಸ್ಥಳಾಂತರಿಸುವ ಜೊತೆಗೆ ಒಂದು ಹೆಚ್ಚುವರಿ ಅಂಬ್ಯುಲೆನ್ಸ್ ಸೇವೆಗೆ ಇರಿಸಲಾಗುತ್ತದೆ ಎಂದು ಹೇಳಿದರು.

ಮಂಗಳವಾರ ಮತ್ತು ಬುಧವಾರ ಜಾತ್ರೆ ಹಿನ್ನೆಲೆಯಲ್ಲಿ ಪಟ್ಟಣ ವ್ಯಾಪ್ತಿಯ ಶಾಲೆಗಳಿಗೆ ರಜೆ ನೀಡಲು ಶಿಕ್ಷಣಾಧಿಕಾರಿಗಳಿಗೆ ತಿಳಿಸಿದೆ. ಜಾತ್ರೆಯಲ್ಲಿ ಸರಗಳ್ಳತನ ಇನ್ನಿತರೆ ಅಪರಾಧ ಕೃತ್ಯ ತಡೆಗಟ್ಟಲು ಹೆಚ್ಚುವರಿ ಕ್ರೈಂಬ್ರಾಂಚ್ ಸಿಬ್ಬಂದಿ ನೇಮಕದ ಜೊತೆಗೆ ಹೆಚ್ಚುವರಿ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಲು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಮಾಡಲಾಗುತ್ತದೆ. ಅಮ್ಯೂಸ್ಮೆಂಟ್ ಪಾರ್ಕ್ ಹೆಚ್ಚಿನ ದರಕ್ಕೆ ಖರೀದಿ ಮಾಡಿದ್ದೇವೆ ಎಂದು ಆಟಿಕೆಗಳ ದರ ಜಾಸ್ತಿ ಮಾಡುವಂತಿಲ್ಲ. ಜಾತ್ರೆಗೆ ಬರುವ ಬಡ ಮತ್ತು ಮಧ್ಯಮ ಕುಟುಂಬದವರು ಎಲ್ಲ ಸೇವೆ ಪಡೆಯುವಂತೆ ದರ ನಿಗಧಿ ಮಾಡಲು ತಿಳಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ತಹಶೀಲ್ದಾರ್ ಚಂದ್ರಶೇಖರ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಶಿವಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಭೂಮೇಶ್ ಇನ್ನಿತರರು ಹಾಜರಿದ್ದರು.