ಶಿವದೂತ ಗುಳಿಗ ನಾಟಕ, ಪಟ್ಲ ಸತೀಶ್ ಶೆಟ್ಟರ ಯಕ್ಷಗಾನ, ಗಾನ- ಮಯೂರ ರಸದೌತಣ
ಶಿವಮೊಗ್ಗ: ನಾಡಿನ ಭಕ್ತರ ಶ್ರದ್ಧಾ ಕೇಂದ್ರ ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ ಜನವರಿ 14 ಮತ್ತು 15 ರಂದು ಸಂಕ್ರಾಂತಿ ಪ್ರಯುಕ್ತ ಪ್ರತಿವರ್ಷದಂತೆ ಈ ವರ್ಷವೂ ವಿಜೃಂಭಣೆಯ ಜಾತ್ರಾ ಮಹೋತ್ಸವ ಜರುಗಲಿದೆ. ಸಿಗಂದೂರು ಚೌಡೇಶ್ವರಿ ಸೇತುವೆ ನಿರ್ಮಾಣವಾಗಿ ಲೋಕಾರ್ಪಣೆಯಾದ ಬಳಿಕ ನಡೆಯುತ್ತಿರುವ ಮೊದಲ ಜಾತ್ರೆ ಇದಾಗಿದ್ದು, ನಾಡಿನಾದ್ಯಂತ ನೆಲೆಸಿರುವ ದೇವಿಯ ಭಕ್ತರಿಗೆ ದೇವಿಯ ಉತ್ಸವ ಕಣ್ತುಂಬಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ.
ಎರಡು ದಿನಗಳಗಳ ದೇವಿಯ ಜಾತ್ರೆ ನಡೆಯಲಿದ್ದು, ಧಾರ್ಮಿಕ ವಿಧಿವಿದಾನಗಳೊಂದಿಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಜಾನಪದ ಕಲಾ ತಂಡಗಳ ಪ್ರದರ್ಶನ ಜಾತ್ರೆಯಲ್ಲಿ ನೆರೆವೇರಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಕ್ಷೇತ್ರ ಸಿಗಂದೂರು ಚೌಡಮ್ಮ ದೇವಿ ದೇವಾಲಯದ ಆನುವಂಶಿಕ ಧರ್ಮದರ್ಶಿ ಡಾ.ಎಸ್.ರಾಮಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ರವಿಕುಮಾರ್ ಮನವಿ ಮಾಡಿದ್ದಾರೆ.

ಜನವರಿ 14 ರಂದು ಬೆಳಗ್ಗೆ 4 ಗಂಟೆಗೆ ಮಹಾಭಿಷೇಕ, ಹೂವು ಮತ್ತು ಆಭರಣ ಅಲಂಕಾರ, 5 ಗಂಟೆಗೆ ಗೋಪೂಜೆ, 6 ಗಂಟೆಗೆ ಗುರುಪೂಜೆ, 7 ಗಂಟೆಗೆ ದೇವಿ ಪಾರಾಯಣ, 8 ಗಂಟೆಗೆ ರಥಪೂಜೆಯ ಮೂಲಕ ರಥ ಮತ್ತು ಪಲ್ಲಕ್ಕಿಯು ದೇವಿಯ ಮೂಲ ಸ್ಥಾನಕ್ಕೆ ಹೊರಡಲಿದೆ. ಬೆಳಕ್ಕೆ 8.30 ಕ್ಕೆ ಚಂಡಿಕಾ ಹೋಮ ಆರಂಭವಾಗಲಿದೆ. ಮಧ್ಯಾಹ್ನ 12 ಗಂಟೆಗೆ ಜ್ಯೋತಿ ದೇವಾಲಯ ಪ್ರವೇಶ ಮಾಡಲಿದೆ. 12.30 ಗಂಟೆಗೆ ಚಂಡಿಕಾ ಹೋಮದ ಪೂರ್ಣಾಹುತಿ ನೆರವೇರಲಿದೆ. 1.15ಕ್ಕೆ ಧರ್ಮಸಭೆ ನಡೆಯಲಿದೆ. ಮಧ್ಯಾಹ್ನ 3 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದೆ, ಸಂಜೆ 5 ಗಂಟೆಗೆ ಗುರುಪೂಜೆ ನೆರವೇರಲಿದ್ದು, 6 ಗಂಟೆಗೆ ಗಂಗಾರಥಿ ನೆರವೇರಲಿದೆ.
ಶಿವದೂತ ಗುಳಿಗ ನಾಟಕ

ಜನವರಿಂದ 14 ರಂದು ಸಂಜೆ 7 ಗಂಟೆಯಿಂದ ಭಕ್ತ ಪ್ರಿಯ ನಾಟಕ ಶಿವದೂತ ಗುಳಿಗ ನಾಟಕ ಪ್ರದರ್ಶನವಿದೆ. ದೇಶವಿದೇಶಗಳಲ್ಲಿ ಪ್ರದರ್ಶನ ಕಂಡಿರುವ ಈ ನಾಟಕ ಪ್ರದರ್ಶನ ಮುಗಿದ ಬಳಿಕ ಗಾನ ಮಯೂರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸರಿಗಮಪ ಮತ್ತು ಎದೆತುಂಬಿ ಹಾಡಿದೆನು ಸೇರಿದಂತೆ ವಿವಿಧ ಸಂಗೀತ ಶೋಗಳಲ್ಲಿ ಭಾಗಿಯಾಗಿರುವ ಹಲವು ಕಲಾವಿದರ ಕಂಠ ಸಿರಿಯಲ್ಲಿ ಈ ಕಾರ್ಯಕ್ರಮ ಮೂಡಿಬರಲಿದೆ.
:
ಮೂಲ ಸ್ಥಳದಲ್ಲಿ ಬೆಳಗ್ಗೆ 5.30 ಗಂಟೆಗೆ ಪುಣ್ಯಾಹ ಶುದ್ದಿ, 6 ಗಂಟೆಗೆ ನವಚಂಡಿಕಾ ಹೋಮ ಪ್ರಾರಂಭವಾಗಲಿದೆ.8.30 ಗಂಟೆಗೆ ಹೋಮ ಪೂರ್ಣಾಹುತಿ,9 ಗಂಟೆಗೆ ಮಹಾಭಿಷೇಕ, ಹೂವಿನ ಮತ್ತು ಆಭರಣ ಅಲಂಕಾರ ಮಹಾಪೂಜೆ ನಡೆಯಲಿದ್ದು, 10.30 ರಿಂದ ಪಲ್ಲಕ್ಕಿ ಉತ್ಸವ ಮತ್ತು ಜ್ಯೋತಿ ಮೆರವಣಿಗೆ ಆರಂಭವಾಗುವುದು.
ಜನವರಿ 15 ರಂದು ಮುಂಜಾನೆಯಿಂದ ಮಹಾಭಿಷೇಕ, ಅಲಂಕಾರ, ಮಹಾಪೂಜೆ ಗುರುಪೂಜೆ, ದೇವಿ ಪಾರಾಯಣಗಳು ನಡೆಯದ್ದು, 8 ಗಂಟೆಗೆ ನವಚಂಡಿಕಾ ಹೋಮ ಹಾಗೂ ಮಧ್ಯಾಹ್ನ 3 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಸಂಜೆ 5 ಗಂಟೆಗೆ ಶ್ರೀ ಚಕ್ರ ಸಹಿತ ದುರ್ಗಾ ದೀಪ ಪೂಜೆ, ರಂಗಪೂಜೆ ಬಳಿಕ ಸಂಜೆ 6 ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. 7 ಗಂಟೆಯಿಂದ ಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಅವರ ಭಾಗವತಿಕೆಯಲ್ಲಿ ಪಾವಂಜಿ ಮೇಳದಿಂದ ಶ್ರೀ ದೇವಿಲಲಿತೋಪಖ್ಯಾನ ಎಂಬ ಯಕ್ಷಗಾನ ಪ್ರದರ್ಶನವಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ದೇವಿಯ ಭಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ದೇವಾಲಯ ಆಡಳಿತ ಮಂಡಳಿ ಕೋರಿದೆ.