ಶಿಕಾರಿಪುರ: ಸಂಘ ಸಂಸ್ಥೆಗಳನ್ನು ಕಟ್ಟುವುದು ಸುಲಭ. ಆದರೆ ಅವುಗಳನ್ನು ಮುನ್ನಡೆಸಿಕೊಂಡು ಹೋಗುವುದು ಬಹಳ ಮುಖ್ಯವಾಗುತ್ತದೆ. ಪದಗ್ರಹಣ ಶೋಭೆ ತರುವಂತಹ ಕೆಲಸ. ಪ್ರಕೃತಿಯಲ್ಲಿ ಸೂರ್ಯನಿಗೆ ಚಂದ್ರನಿಗೆ ಗ್ರಹಣ ಸಂಭವಿಸಿದರೆ ತಾತ್ಕಾಲಿಕ. ಅದು ಬಹಳ ಬೇಗ ಬಿಟ್ಟು ಹೋಗುತ್ತದೆ. ಆದರೆ ಹುದ್ದೆಗಳಿಗೆ ಗ್ರಹಣ ಹಿಡಿಯದೆ ಕ್ರಿಯಾಶೀಲವಾಗಿ ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಇರಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಡಿ ಮಂಜುನಾಥ ಹೇಳಿದರು.
ಪಟ್ಟಣದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ಸಭಾಂಗಣದಲ್ಲಿ ತಾಲೂಕ್ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ(ರಿ.), ಶಿಕಾರಿಪುರ. ಇವರು ಆಯೋಜಿಸಿದ 2025 ನೇ ಸಾಲಿನ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಕನ್ನಡ ಸಾಹಿತ್ಯ ಮತ್ತು ಜಾನಪದ ಕ್ಷೇತ್ರವನ್ನು ಶ್ರೀಮಂತ ಗೊಳಿಸಿದ ಕನ್ನಡ ಸಾರಸ್ವತ ಲೋಕದ ಹಿರಿಯರಲ್ಲಿ ಒಬ್ಬರಾದ ಹೆಚ್.ಎಲ್. ನಾಗೇಗೌಡರ ಕಲ್ಪನೆಯ ಕೂಸು ಜನಪದ ಲೋಕ. ಇದರಲ್ಲಿ ಇಡೀ ಗ್ರಾಮೀಣ ಸಂಸ್ಕೃತಿಯ ಹೂರಣವೇ ಅಡಗಿದೆ ಎಂದರು.
ಮಕ್ಕಳಲ್ಲಿ ಅಡಗಿರುವ ಕಥೆ, ಕವನ, ಹಾಡು, ಚಿತ್ರಕಲೆ, ಭಾಷಣ, ಪ್ರಬಂಧ ಮತ್ತಿತರ ಚಟುವಟಿಕೆಗಳನ್ನು ಹೊರತೆಗೆಯುವ ಕೆಲಸವನ್ನು, ಅವರ ಪ್ರತಿಭೆಗೆ ಪ್ರೋತ್ಸಾಹ, ಉತ್ತೇಜನ ನೀಡುವ ಕೆಲಸವನ್ನು ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಮೂಲಕ ಮಾಡಬೇಕೆಂದರು.
ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ನೂತನ ಅಧ್ಯಕ್ಷರಾಗಿ ಎಸ್. ಎನ್. ನರಸಿಂಹಸ್ವಾಮಿ ನಿಕಟ ಪೂರ್ವ ಅಧ್ಯಕ್ಷ ಕೆ.ಎಸ್. ಹುಚ್ರಾಯಪ್ಪ ಅವರಿಂದ ಪದವಿ ಸ್ವೀಕಾರ ಮಾಡಿದರು.
ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷ, ಈಗಿನ ಗೌರವಾಧ್ಯಕ್ಷ ಕೆ.ಎಸ್. ಹುಚ್ರಾಯಪ್ಪ ಮಾತನಾಡಿ ಸಂಘಟನೆಯಲ್ಲಿ ಸಮರ್ಥ ಪದಾಧಿಕಾರಿಗಳ ತಂಡವಿದ್ದು, ಉತ್ತಮವಾಗಿ ನಡೆಸಿಕೊಂಡು ಹೋಗುವ ಕೆಲಸವನ್ನು ನೂತನ ಅಧ್ಯಕ್ಷರು ಮಾಡಬೇಕೆಂದರು.
ನೂತನ ಅಧ್ಯಕ್ಷ ಎಸ್.ಎನ್. ನರಸಿಂಹಸ್ವಾಮಿ ಮಾತನಾಡಿ ನನ್ನ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿ ನೀಡಿದ ಪದಾಧಿಕಾರಿಗಳ ಸಲಹೆ, ಸಹಕಾರ ಪಡೆಯುತ್ತೇನೆಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್. ರಘು ಮಾತನಾಡಿದರು.
ತಾಲೂಕು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಪಾಪಯ್ಯ ಬಿ. ಪ್ರಾಸ್ತಾವಿಕ ನುಡಿಗೈದರು. ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಖಜಾಂಚಿ ಬಿ.ಕೆ. ಮಂಜಪ್ಪ, ಸತ್ಯನಾರಾಯಣ ಎಂ.ಹೆಚ್. ಉಪಾಧ್ಯಕ್ಷ ಬನ್ನೂರು ಮಂಜಪ್ಪ, ಪ್ರಧಾನ ಕಾರ್ಯದರ್ಶಿಗಳಾದ, ಉಪನ್ಯಾಸಕ ಕೆ.ಎಚ್. ಪುಟ್ಟಪ್ಪ ಬಿಳವಾಣಿ, ಶಿಕ್ಷಕ ನಾಗರಾಜಾಚಾರ್, ಜಿ.ಕ.ಸಾ.ಪ. ಕಾರ್ಯದರ್ಶಿ ಎಂ.ಎಂ.ಸ್ವಾಮಿ,ಕ.ಜಾ.ಪ. ಜಿಲ್ಲಾ ಶಾಖೆಯ ಕಾರ್ಯದರ್ಶಿ ಬಾಲ್ ರಾಜ್, ತಾ.ಕ.ಸಾ.ಸಾಂ ವೇದಿಕೆಯ ಪದಾಧಿಕಾರಿಗಳಾದ ಸಹಕಾರ್ಯದರ್ಶಿ, ಉಪನ್ಯಾಸಕ ಬಂಗಾರಪ್ಪ ಬಿ. ಸಂಚಾಲಕರಾದ ಉಪನ್ಯಾಸಕ ಮಂಜುನಾಥ, ಡಾ. ವಸಂತ್ ನಾಯ್ಕ್, ಗೌರವ ಸಲಹೆಗಾರರಾದ ಉಪನ್ಯಾಸಕ ಡಾ. ಸೋಮಶೇಖರ್ ಶಿವಮೊಗ್ಗಿ, ಮಾಜಿ ಪುರಸಭಾ ಸದಸ್ಯ ಯಲ್ಲಪ್ಪ ಬಿ., ಉದ್ಯಮಿ ಕೆ.ಎಚ್. ಲಕ್ಷ್ಮಣ, ಶಿಕ್ಷಕ ಬಸವರಾಜ ಕೆ.ಎಸ್. ಸವಿತಾ ಸಮಾಜದ ಸಂಘಟನಾ ಕಾರ್ಯದರ್ಶಿ ರಘು ವಿ. ಮಧು ಪತ್ರಕರ್ತರಾದ ಬಿ.ಎಲ್.ರಾಜು, ಕೆ.ಆರ್. ಕಾಳಿಂಗರಾವ್, ಶಿಕ್ಷಕ ನಾಗರಾಜ್ ನಾಯ್ಕ್ ಎಚ್. ಸಂಘಟನಾ ಕಾರ್ಯದರ್ಶಿ ಹೇಮಲತ ಎಂ. ನರಸಿಂಹಸ್ವಾಮಿ, ಮಹಿಳಾ ಪ್ರತಿನಿಧಿ ಶಿಕ್ಷಕಿ ವಿಜಯಲಕ್ಷ್ಮಿ ಕುಲಕರ್ಣಿ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಮತ್ತು ಕಟ್ಟಡ ಕಾರ್ಮಿಕ ಸದಸ್ಯರು ಭಾಗವಹಿಸಿದ್ದರು.