ಶಿವಮೊಗ್ಗ : ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಅಂತರ ಜಾತಿ ವಿವಾಹದ ಹಿನ್ನೆಲೆಯಿಂದ ೭ ತಿಂಗಳ ಗರ್ಭಿಣಿ ಮಗಳನ್ನೇ ಆಕೆಯ ತಂದೆಯೇ ಭೀಕರವಾಗಿ ಕೊಲೆ ಮಾಡಿದ ಘಟನೆಯನ್ನು ದಲಿತ ಸಂಘರ್ಷ ಸಮಿತಿ( ಪ್ರೊ.ಕೃಷ್ಣಪ್ಪ ಸ್ಥಾಪಿತ) ತೀವ್ರವಾಗಿ ಖಂಡಿಸಿದೆಯಲ್ಲದೆ, ಕೊಲೆಯಾದ ಯುವತಿಯ ಗಂಡನ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದೆ.
ಕೊಲೆ ಪ್ರಕರಣ ಖಂಡಿಸಿ ಇಂದು ದಸಂಸ ( ಪ್ರೊ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಸ್ವಾತಂತ್ರ್ಯ ಬಂದು ೭೦ ವರ್ಷಗಳಾದರೂ ಈ ದೇಶದಲ್ಲಿಜಾತಿ ವ್ಯವಸ್ಥೆ ಇನ್ನು ಹೋಗಿಲ್ಲ ಎನ್ನುವುದಕ್ಕೆ ಇನಾಂ ವೀರಾಪುರ ಮಾರ್ಯಾದೆ ಹತ್ಯೆ ಸಾಕ್ಷಿಯಾಗಿದೆ. ಇದು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ ಎಂದರು.
ದೇಶದಲ್ಲಿ ಜಾತಿ ವ್ಯವಸ್ಥೆಯೇ ಇಲ್ಲ ಎಂದು ಆರ್ ಎಸ್ ಎಸ್ ನ ಮೋಹನ್ ಭಾಗವತ್ ಹೇಳಿಕೆ ನೀಡುತ್ತಿರುವ ಸಂದರ್ಭದಲ್ಲಿ ಇನಾಂವೀರಾಪುರದಂತಹ ಘೋರ ಜಾತಿಯ ಕೊಲೆ ಘಟನೆಗಳು ನಡೆಯುತ್ತಲೆ ಇವೆ.ಈ ಬಗ್ಗೆ ಮೋಹನ್ ಭಾಗವತ್ ಸೇರಿ ಮಠ ಮಾನ್ಯದ ಸ್ವಾಮೀಜಿಗಳು ಮಾತನಾಡ ಬೇಕಿದೆ ಎಂದು ಆಗ್ರಹಿಸಿದರು.


ಇನಾಂ ವೀರಾಪುರ ಗ್ರಾಮದಲ್ಲಿ ಲಿಂಗಾಯತ ವೀರಶೈವ ಸಮಾಜಕ್ಕೆ ಸೇರಿದ ಯುವತಿ ಯು ಪರಿಶಿಷ್ಟ ಜಾತಿಯ ಹುಡುಗನನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಈ ಜೋಡಿ ಮಧುವೆಯಾಗಿ ಜೀವ ಭಯದಿಂದ ಒಂದಷ್ಟು ದಿನ ಕಾಲ ಊರಿಂದ ನಾಪತ್ತೆಯಾಗಿ, ಇತ್ತೀಚೆಗೆ ಮತ್ತೆ ಊರಿಗೆ ಬಂದಿದೆ. ಈ ವೇಳೆ ತನ್ನ ಮಗಳು ಪರಿಶಿಷ್ಟ ಜಾತಿಯ ಹುಡುಗನನ್ನು ಮದುವೆಯಾದಳು ಎನ್ನುವ ಸಿಟ್ಟಿಗೆ ೭ ತಿಂಗಳ ಗರ್ಭಿಣಿ ಮಗಳನ್ನೇ ಆಕೆಯ ತಂದೆ ಭೀಕರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ.ಈ ಘಟನೆ ನಾಡಿನಲ್ಲಿ ಜಾತಿ ವ್ಯವಸ್ಥೆ ಯ ಆಚರಣೆಯ ಕರಾಳ ಮುಖವನ್ನು ಬಯಲುಮಾಡಿದೆ ಎಂದರು.

ಜಾತಿ ರಹಿತ ಸಮ ಸಮಾಜಕ್ಕಾಗಿ ಹೋರಾಡಿದ ಬಸವಣ್ಣನ ಅನುಯಾಯಿ ಗಳಾದ ಲಿಂಗಾಯತ ಸಮಾಜದ ಒಬ್ಬ ವ್ಯಕ್ತಿ ಅಂತರ ಜಾತಿ ವಿವಾಹದ ಕಾರಣಕ್ಕೆ ಸ್ವಂತ ತನ್ನ ಮಗಳನ್ನೇ ಭೀಕರವಾಗಿ ಕೊಲೆ ಮಾಡುವ ಹಂತಕ್ಕೆ ಹೋಗಿರುವುದು ವಿಪರ್ಯಾಸವೇ ಆಗಿದೆ. ಸಮಾಜದಲ್ಲಿ ಬಸವಣ್ಣನ ಸಂದೇಶವನ್ನು ಸಾರುವ ಮಠ ಮಾನ್ಯದ ಸ್ವಾಮೀಜಿಗಳು ಈ ಘಟನೆಯನ್ನು ಖಂಡಿಸಿ ಮಾತನಾಡಬೇಕಿದೆ ಎಂದರು.
ವಕೀಲ ಹಾಗೂ ಸಮಾಜಿಕ ಹೋರಾಟಗಾರ ಕೆ.ಪಿ.ಶ್ರೀಪಾಲ್ ಮಾತನಾಡಿ, ಜಾತಿ ಕಾರಣಕ್ಕೆ ಮಾರ್ಯಾದೆ ಹತ್ಯೆಗಳು ನಡೆಯುತ್ತಿವೆ. ಶಿಕ್ಷಿತ ಸಮಾಜದಲ್ಲಿ ಅರಿವು ಮೂಡಬೇಕಾಗಿ ತ್ತಾದರೂ, ಅದೇ ಶಿಕ್ಷಣದ ನೆರಳಲ್ಲಿ ಜಾತಿ ವ್ಯವಸ್ಥೆ ಮತ್ತಷ್ಟು ಬಲಗೊಳ್ಳುತ್ತಿದೆ. ಮೂಡ ನಂಬಿಕೆಗಳು ಹೆಚ್ಚಾಗಿತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದರು.
ಈ ಹತ್ಯೆ ನಡೆದು ೪೮ ತಾಸುಗಳಾಗುತ್ತಾ ಬಂದರೂ ಯಾವೊಬ್ಬ ಬಸವಾದಿ ಶರಣರು, ಮಠಗಳು, ಮಠಾಧಿಪತಿಗಳು, ಬಸವಣ್ಣ ಹೆಸರಿನ ಸಂಘಟನೆಗಳು ಖಂಡಿಸಿಲ್ಲ, ಆಸ್ಪತ್ರೆಯಲ್ಲಿ ಗಾಯಗೊಂಡು ನರಳುತ್ತಿರುವ ಹುಡುಗ ಮತ್ತವನ ಕುಟುಂಬವನ್ನು ಸಂತೈಸಿದ್ದು ಕಾಣಲಿಲ್ಲ. ಕೊಲೆಗಡುಕ ಜಾತಿವಾದಿಗಳಿಗೆ ಕಠಿಣ ಶಿಕ್ಷ ಕೊಡುವಂತೆ ಆಗ್ರಹಿಸಿಲ್ಲ ಎಂದು ದೂರಿದರು.
ಪತ್ರಿಕಾಗೋಷ್ಟಿಯಲ್ಲಿ ದಂಸಸ ಮುಖಂಡರಾದ ಏಳುಮಲೈ, ಶಿವಬಸಪ್ಪ, ಹರಿಗೆ ರವಿ, ಕೃಷ್ಣಪ್ಪ, ಶ್ರೀನಿವಾಸ್, ಮಹಾದೇವ್, ರಾಜಶೇಖರ್ ಇದ್ದರು.