ಶಿವಮೊಗ್ಗ : ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ, ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಡಿ.೨೫ರಂದು ಸಂಜೆ ೬ ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ಗೌ.ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿಂದ ಪ್ರಾಚೀನ ಭಾರತದ ನ್ಯಾಯಾಂಗ ವ್ಯವಸ್ಥೆ ಕುರಿತು ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ಕರ್ನಾಟಕ ಉಚ್ಛ ನ್ಯಾಯಾಲಯ ಸೇರಿದಂತೆ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಸುಮಾರು ೧೫ವರ್ಷ ಸಮರ್ಥವಾಗಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ೨೦೦೮ರಲ್ಲಿಯೇ ಜಿಲ್ಲಾ ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಇವರು ನಂತರ ಜಿಲ್ಲಾ ನ್ಯಾಯಾಧೀಶರಾಗಿ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿ ರಾಜ್ಯ ಸಾರಿಗೆ ಮೇಲ್ಮನವಿ ಪ್ರಾಧಿಕಾರದ ಅಧ್ಯಕ್ಷರಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ೨೦೨೦ರ ಮೇ೪ರಂದು ಇವರು ಉಚ್ಛ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕಗೊಂಡು ೨೦೨೧ರಿಂದ ಖಾಯಂ ನ್ಯಾಯಮೂರ್ತಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಶ್ರೀಯುತರು ತಮ್ಮ ಸರಳ, ಆಪ್ತ ಮತ್ತು ಸಹಾನುಭೂತಿ ನಡವಳಿಕೆಯಿಂದ ಜನಸಾಮಾನ್ಯರಲ್ಲಿ ನ್ಯಾಯವಿತರಣೆಯ ಒಂದು ಹೊಸ ಪರಿಕಲ್ಪನೆಯನ್ನೇ ಹುಟ್ಟುಹಾಕಿದ್ದಾರೆ. ವಿವಿಧ ವಿಷಯಗಳಲ್ಲಿ ಪರಿಣತಿ ಹೊಂದಿರುವ ಇವರು ಉಪನ್ಯಾಸ ಹಾಗೂ ಭಾಷಣಗಳಿಗೆ ಹೆಸರುವಾಸಿಯಾಗಿದ್ದಾರೆ. ದೇಶ-ವಿದೇಶಗಳಲ್ಲೂ ಪ್ರಖ್ಯಾತರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಎಲ್ಲಾ ವರ್ಗಗಳ ವೀಕ್ಷಕರನ್ನು ಹೊಂದಿದ್ದಾರೆ. ಅಪಾರವಾದ ಕಾನೂನಿನ ಜ್ಞಾನ ಇರುವ ಇವರು ಪ್ರಾಚೀನ ಭಾರತದ ನ್ಯಾಯಾಂಗ ವ್ಯವಸ್ಥೆ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಜಿ.ಆರ್. ರಾಘವೇಂದ್ರ ಸ್ವಾಮಿ ಮಾತನಾಡಿ, ಶ್ರೀಗಂಧ ಸಂಸ್ಥೆಯ ವಿಭಿನ್ನ ಕಾರ್ಯಕ್ರಮಗಳಲ್ಲಿ ಉಪನ್ಯಾಸ ಕಾರ್ಯಕ್ರಮವು ವಿಶೇಷವಾಗಿದೆ. ಈ ಕಾರ್ಯಕ್ರಮದಲ್ಲಿ ಖ್ಯಾತವೈದ್ಯ ಡಾ.ಪಿ. ನಾರಾಯಣ್, ಖ್ಯಾತ ಯೋಗಾಚಾರ್ಯ ಡಾ.ಸಿ.ಬಿ. ರುದ್ರಾರಾಧ್ಯ ಅವರುಗಳನ್ನು ಸನ್ಮಾನಿಸಲಾಗುವುದು. ಅಧ್ಯಕ್ಷತೆಯನ್ನು ಶ್ರೀಗಂಧ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ವಹಿಸಲಿದ್ದು, ಸಂಸ್ಥೆಯ ಖಜಾಂಚಿ ಹಾಗೂ ಮಾಜಿ ಜಿ.ಪಂ. ಸದಸ್ಯ ಕೆ.ಈ. ಕಾಂತೇಶ್, ಸಂಸ್ಥೆಯ ಸಂಚಾಲಕ ಉಮೇಶ್ ಆರಾಧ್ಯ ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಸಂಚಾಲಕ ಉಮೇಶ್ ಆರಾಧ್ಯ, ಖಜಾಂಚಿ ಕೆ.ಈ. ಕಾಂತೇಶ್, ಅಶ್ವತ್ಥ್ನಾರಾಯಣ ಶೆಟ್ಟಿ, ಶ್ರೀಕಾಂತ್, ಸುಮತೀಂದ್ರ ಮತ್ತಿತರರಿದ್ದರು.