ಬೆಳಗಾವಿ,ಡಿ.18:
ವಿಧಾನಪರಿಷತ್ ಅಧಿವೇಶನದ ಶೂನ್ಯವೇಳೆಯಲ್ಲಿ ಮಾನ್ಯ ವಿಧಾನಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್. ಅರುಣ್ ಅವರು ರಾಜ್ಯದಲ್ಲಿ ದಿನೇದಿನೇ ಹೆಚ್ಚುತ್ತಿರುವ ಸೈಬರ್ ವಂಚನೆ ಪ್ರಕರಣಗಳ ಕುರಿತು ಗಂಭೀರವಾಗಿ ಗಮನ ಸೆಳೆದರು. ಹಲವು ದಿನಪತ್ರಿಕೆಯಲ್ಲಿ ವರದಿಯಾದ ಕೋಟ್ಯಾಂತರ ರೂ. ವಂಚನೆ ಪ್ರಕರಣಗಳನ್ನು ಉಲ್ಲೇಖಿಸಿದ ಅವರು, ಆನ್ಲೈನ್ ಹೂಡಿಕೆ, ಟಾಸ್ಕ್ ಕೆಲಸ, ನಕಲಿ ಲಿಂಕ್ಗಳ ಮೂಲಕ ಅಮಾಯಕ ನಾಗರಿಕರು ಭಾರೀ ನಷ್ಟ ಅನುಭವಿಸುತ್ತಿರುವುದು ಅತ್ಯಂತ ಆತಂಕಕಾರಿ ಎಂದು ಹೇಳಿದರು.

ಸೈಬರ್ ವಂಚನೆ ವಿರುದ್ಧ ಕಳೆದ ಹಲವು ಅಧಿವೇಶನಗಳಿಂದ ನಿರಂತರವಾಗಿ ಧ್ವನಿ ಎತ್ತುತ್ತಿರುವ ಡಿ.ಎಸ್. ಅರುಣ್ ಅವರು, ಸರ್ಕಾರ ಕೇವಲ ಕ್ರಮಗಳಿಗೆ ಸೀಮಿತವಾಗದೇ, ವಂಚನೆಗಳನ್ನು ಬೇಧಿಸುವ ವಿಶೇಷ ನೈಪುಣ್ಯತೆಯ ತಂಡಗಳನ್ನು ರಚಿಸಿ, ತ್ವರಿತ ಹಾಗೂ ಕಠಿಣ ಕ್ರಮ

ಕೈಗೊಳ್ಳಬೇಕು ಎಂದು ಗೃಹ ಸಚಿವರನ್ನು ಒತ್ತಾಯಿಸಿದರು. ನಾಗರಿಕರ ಆರ್ಥಿಕ ಸುರಕ್ಷತೆ ಮತ್ತು ಮಕ್ಕಳ ಭವಿಷ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕುವುದು ಸರ್ಕಾರದ ತುರ್ತು ಜವಾಬ್ದಾರಿ ಎಂದು ಸ್ಪಷ್ಟಪಡಿಸಿದರು.