ಶಿವಮೊಗ್ಗ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಡಿ.೨೦ರ ಶನಿವಾರ ಬೆಳಿಗ್ಗೆ ಪತ್ರಿಕಾ ಭವನದಲ್ಲಿ ಬೆಳಿಗ್ಗೆ ೧೦ಕ್ಕೆ ನಡೆಯಲಿದೆ ಎಂದು ನಿಕಟಪೂರ್ವ ಅಧ್ಯಕ್ಷ ಕೆ.ವಿ. ಶಿವಕುಮಾರ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಶಾಖೆಯ ನಿರ್ಗಮಿತ ಅಧ್ಯಕ್ಷರಾದ ಕೆ.ವಿ. ಶಿವಕುಮಾರ್ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಸಂಘದ ರಾಜ್ಯ ಅಧ್ಯಕ್ಷ ಟಿ.ವಿ. ಶಿವಾನಂದ ತಗಡೂರುರವರು ಉದ್ಘಾಟಿಸಿ ಆಶಯ ನುಡಿಗಳನ್ನಾಡಲಿದ್ದಾರೆ. ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿಗಳಾದ ಹೆಚ್.ಬಿ. ಮದನಗೌಡ, ದಿಕ್ಸೂಚಿ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ರವರು ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಆರ್.ಮಾರುತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹಾಸನ ಜಿಲ್ಲಾಧ್ಯಕ್ಷ ಜೆ.ಆರ್. ಕೆಂಚೆಗೌಡ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಚುನಾವಣಾಧಿಕಾರಿ ಎನ್. ರವಿಕುಮಾರ್ (ಟೆಲೆಕ್ಸ್), ಜಿಲ್ಲಾ ಚುನಾವಣಾಧಿಕಾರಿಗಳು, ಸಹಕಾರ ಇಲಾಖೆಯ ಸಹಾಯಕ ನಿಬಂಧಕರಾದ ಟಿ.ವಿ. ಶ್ರೀನಿವಾಸ್ರನ್ನು ಆತ್ಮೀಯವಾಗಿ ಸನ್ಮಾನಿಸಲಾಗುತ್ತಿದೆ. ನಿರ್ಗಮಿತ ಅಧ್ಯಕ್ಷರಾದ ಕೆ.ವಿ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್ರವರನ್ನು ಪುರಸ್ಕರಿಸಲಾಗುವುದು.

ನಿರ್ಗಮಿತ ಪ್ರಧಾನ ಕಾರ್ಯದರ್ಶಿ ವಿ.ಟಿ.ಅರುಣ್ ಮಾತನಾಡಿ, ೨೦೨೫-೨೮ರ ಸಾಲಿನ ನಿಯೋಜಿತ ಅಧ್ಯಕ್ಷ ಹೆಚ್.ಯು. ವೈದ್ಯನಾಥ್ (ವೈದ್ಯ), ಪ್ರಧಾನ ಕಾರ್ಯದರ್ಶಿ ಆರ್.ಎಸ್. ಹಾಲಸ್ವಾಮಿ ಹಾಗೂ ನೂತನ ಕಾರ್ಯಕಾರಿ ಸಮಿತಿ ಸದಸ್ಯರು ಅಧಿಕಾರ ಸ್ವೀಕರಿಸಲಿದ್ದಾರೆ. ಈ ಪದಗ್ರಹಣ ಸಮಾರಂಭದಲ್ಲಿ ಪತ್ರಕರ್ತರು, ವಿವಿಧ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳ ನೇತಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ನಿಯೋಜಿತ ಅಧ್ಯಕ್ಷ ಹೆಚ್.ಯು.ವೈದ್ಯನಾಥ್, ಪ್ರಧಾನ ಕಾರ್ಯದರ್ಶಿ ಆರ್.ಎಸ್. ಹಾಲಸ್ವಾಮಿ, ಉಪಾಧ್ಯಕ್ಷ ಕೆ.ಎಸ್. ಹುಚ್ರಾಯಪ್ಪ ಇದ್ದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಈಗ ೯೩ರ ಸಂಭ್ರಮ. ಹಲವು ಗಣ್ಯರು ಕಾಲಾನುಕಾಲಕ್ಕೆ ಈ ಸಂಘವನ್ನು ಕಟ್ಟಿ ಹೆಮ್ಮರವಾಗಿ ಬೆಳೆಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲೂ ಕೂಡ ಸಂಘವು ಪತ್ರಕರ್ತರ ಆಶಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದೆ. ೧೯೫೩ರಿಂದಲೇ ಇದು ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದೆ. ಆಗ ಸಿ.ಎಸ್. ಮಣಿ ಅಧ್ಯಕ್ಷರಾಗಿದ್ದರು. ನಂತರ ರಾಮಕೃಷ್ಣ, ಎಂ. ಕೃಷ್ಣರಾವ್, ಗೋಪಿನಾಥರಾವ್, ಸೀತಾರಾಮ ಅಯ್ಯಂಗಾರ್, ಮಲ್ಲಾರಾಧ್ಯರು, ಮುನಿಸ್ವಾಮಿಪ್ಪ, ಮಂಜುನಾಥ್ ಐತಾಳ್, ಎಂ. ನಾಗೇಂದ್ರರಾವ್, ಹೆಚ್.ಎಸ್. ರಂಗಸ್ವಾಮಿ, ಎನ್. ಮಂಜುನಾಥ್, ಶೃಂಗೇಶ್, ಎನ್. ರವಿಕುಮಾರ್ (ಟೆಲೆಕ್ಸ್), ಕೆ.ವಿ. ಶಿವಕುಮಾರ್ ಸಂಘವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ಇದೀಗ ಹೆಚ್.ಯು. ವೈದ್ಯನಾಥ್ ಸಂಘದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇವರ ಜೊತೆಗೆ ಪದಾಧಿಕಾರಿಗಳು, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು, ತಾಲ್ಲೂಕು ಪ್ರತಿನಿಧಿಗಳು ಜೊತೆಗೂಡಿದ್ದಾರೆ. ಸುಮಾರು ೩೦೦ಕ್ಕೂ ಹೆಚ್ಚು ಪತ್ರಕರ್ತ ಸದಸ್ಯರನ್ನು ಜಿಲ್ಲಾ ಶಾಖೆ ಹೊಂದಿದೆ. ಪತ್ರಕರ್ತರ ಹಿತಕಾಯುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಮತ್ತಷ್ಟು ಸಜ್ಜಾಗಿದೆ.