ಶಿವಮೊಗ್ಗ: ರಾಜ್ಯದ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವುದಾಗಿ ಕಳೆದ ಬಜೆಟ್ ನಲ್ಲಿ ಘೋಷಣೆ ಮಾಡಿದ್ದ ಸಿಎಂ ಸಿದ್ಧರಾಮಯ್ಯ ಅವರು ಇದುವರೆಗೆ ಕೊಟ್ಟ ಮಾತನ್ನು ಈಡೇರಿಸದೇ ಇದ್ದುದರಿಂದ ಅವರು ತಕ್ಷಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಆಗ್ರಹಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಜೆಟ್ ನಲ್ಲಿ ಸಿದ್ಧರಾಮಯ್ಯನವರು ಕೆಸಿಸಿಎನ್(ಅಲ್ಪಾವಧಿ ರೈತರ ಸಾಲ) ಯೋಜನೆಯಡಿಯಲ್ಲಿ ಶೂನ್ಯ ಬಡ್ಡಿದರದಲ್ಲಿ ೫ ಲಕ್ಷ ರೂ.ವರೆಗೆ ರೈತರಿಗೆ ಸಾಲ ಸೌಲಭ್ಯವನ್ನು ಒದಗಿಸುವುದಾಗಿ ಘೋಷಣೆ ಮಾಡಿದ್ದರು. ಆದರೆ, ಈ ತನಕ ಯಾವುದೇ ರೈತರಿಗೆ ಅಲ್ಪಾವಧಿ ಸಾಲ ನೀಡದೇ ರೈತರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಾಲ ವಿತರಣೆ ಮತ್ತು ಬೆಳೆ ಖರೀದಿ ಪ್ರಕ್ರಿಯೆಗಳಲ್ಲಿನ ಲೋಪ ದೋಷಗಳಿಂದ ರೈತರ ಆತ್ಮಹತ್ಯೆ ವಿಷಯದಲ್ಲಿ ಕರ್ನಾಟಕವು ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ ಎಂದು ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ವರದಿ ಮಾಡಿದೆ. ಇದು ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ. ಅಲ್ಲದೇ, ಕರ್ನಾಟಕದಲ್ಲಿ ರೈತರಿಗೆ ಸಹಕಾರ ಸಂಘಗಳು, ಡಿಸಿಸಿ ಬ್ಯಾಂಕ್ ಮತ್ತು ಅಪೆಕ್ಸ್ ಬ್ಯಾಂಕ್ಗಳಿಂದ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಕಾಲದಲ್ಲಿ ಶೂನ್ಯ ಬಡ್ಡಿದರದ ಸಾಲ ಸೌಲಭ್ಯ ಸಿಗದೇ ಕೃಷಿ ಚಟುವಟಿಕೆಗಳು ಅರ್ಧಕ್ಕೆ ನಿಂತು ಹೋಗಿವೆ ಎಂದು ಆರೋಪಿಸಿದರು.

ಕಬ್ಬು ಬೆಳೆಗಾರರಿಗೆ ಪೂರ್ಣ ಪ್ರಮಾಣದಲ್ಲಿ ಬೆಂಬಲ ಬೆಲೆ ಸಕಾಲದಲ್ಲಿ ದೊರೆಯುತ್ತಿಲ್ಲ. ಮೆಕ್ಕೆಜೋಳ ಬೆಳೆದ ರೈತರಿಗೆ ಕ್ವಿಂಟಾಲ್ಗೆ ೨೪೦೦ ರೂ. ಕನಿಷ್ಟ ಬೆಲೆ ನಿಗದಿಯಾದರೂ ರಾಜ್ಯ ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆಯದೇ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ದೂರಿದರು.
ನಬಾರ್ಡ್ ಪುನರ್ಧನ ಸಾಲದ ಹಣವನ್ನು ಶೇ. ೫೮ರಷ್ಟು ಕಡಿಮೆ ಮಾಡಿರುವುದು ರೈತರು ಸಂಕಷ್ಟಕ್ಕೊಳಗಾಗಲು ಕಾರಣವಾಗಿದೆ. ಉಳಿದ ಪುನರ್ಧನ ಸಾಲದ ಮೊತ್ತವನ್ನು ಕೂಡಲೇ ನಬಾರ್ಡ್ನಿಂದ ಬಿಡುಗಡೆ ಮಾಡಿಸಲು ಕೇಂದ್ರದ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಶಾ ಅವರಿಗೆ ಪತ್ರ ಬರೆಯಲಾಗಿದೆ ಎಂದ ಅವರು, ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಸಹಕಾರಿ ಬ್ಯಾಂಕಿಂಗ್ ವಲಯಕ್ಕೆ

ಅನ್ವಯವಾಗುವಂತೆ ಹೊರಡಿಸಿದ ಸುತ್ತೋಲೆಯಲ್ಲಿ ಸಹಕಾರ ಬ್ಯಾಂಕ್ಗಳ ನಿರ್ದೇಶಕರ ಆಡಳಿತ ಮಂಡಳಿಗೆ ಓರ್ವ ಅಭ್ಯರ್ಥಿ ಕೇವಲ ೧೦ ವರ್ಷಗಳಿಗೆ ಮಾತ್ರ ನಿರ್ದೇಶಕರಾಗಲು ಅರ್ಹರಾಗುತ್ತಾರೆ ಎಂಬುದನ್ನು ತಾವು ಸ್ವಾಗತಿಸುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜನಮೇಜಿರಾವ್, ಹೊಳೆಮಡಿಲು ವೆಂಕಟೇಶ್, ವೇದಾಂತ್ ಗೌಡ, ಕೂಡ್ಲು ಶ್ರೀಧರ್, ಶಂಕ್ರಾನಾಯ್ಕ್, ಬಸವರಾಜ್ ಇದ್ದರು.