ಶಿವಮೊಗ್ಗ: ರೈತ ಸಂಘದ ಹರಿಕಾರ ಎನ್.ಡಿ. ಸುಂದರೇಶ್ ಒಂದು ನೆನಪು ಕಾರ್ಯಕ್ರಮವನ್ನು ಡಿ. ೨೧ರಂದು ಬೆಳಗ್ಗೆ ೧೧.೩೦ಕ್ಕೆ ಬಿ.ಹೆಚ್. ರಸ್ತೆಯಲ್ಲಿರುವ ಕರ್ನಾಟಕ ಸಂಘದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ(ಕೋಡಿಹಳ್ಳಿ ಚಂದ್ರಶೇಖರ್ ಬಣ) ಜಿಲ್ಲಾಧ್ಯಕ್ಷ ಮಂಜುನಾಥ ಗೌಡ್ರು ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್.ಡಿ. ಸುಂದರೇಶ್ ಅವರು ರೈತರ ಕಣ್ಮಣಿಯಾಗಿದ್ದವರು. ರೈತರ ಹೃದಯದಲ್ಲಿ ಯಾವಾಗಲೂ ಸ್ಥಾನ ಪಡೆದಿದ್ದಾರೆ. ಅವರ ನೆನಪಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವುದು ನಮ್ಮ ಹೆಮ್ಮೆ. ಈ ಕಾರ್ಯಕ್ರಮಕ್ಕೆ ರೈತ ಮುಖಂಡರು, ಗಣ್ಯರು, ರೈತರು, ಸಾರ್ವಜನಿಕರು ಆಗಮಿಸುತ್ತಾರೆ ಎಂದರು.

ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ನಮ್ಮ ರೈತ ಸಂಘವು ಸದಾ ರೈತರ ಸಮಸ್ಯೆಗಳಿಗೆ ಧ್ವನಿಯಾಗಿದೆ. ಕಾಲಕಾಲಕ್ಕೆ ರೈತರಿಗೆ ಕಾರ್ಯಾಗಾರಗಳು, ರೈತರ ಸಮಸ್ಯೆಗಳ ವಿರುದ್ಧ ಹೋರಾಟ, ರೈತರನ್ನು ಕಡೆಗಾಣಿಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ತರಾಟೆ, ಮುಂತಾದ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದೇವೆ ಎಂದರು.

ಎನ್.ಡಿ. ಸುಂದರೇಶ್ ನೆನಪು ಕಾರ್ಯಕ್ರಮದಲ್ಲೂ ಕೂಡ ರೈತರ ಪ್ರಚಲಿತ ಸಮಸ್ಯೆಗಳು, ಬೆಳೆ ವಿಮೆ, ಬೆಂಬಲ ಬೆಲೆ, ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಹೆಚ್.ಪಿ. ಸತೀಶ್, ಬಿ.ಪಿ. ಅಮೃತ್, ಈಶ್ವರಪ್ಪ, ಶಫೀವುಲ್ಲಾ, ಮೊಹಮ್ಮದ್ ಅಯೂಬ್ ಮುಂತಾದವರಿದ್ದರು.