ನವದೆಹಲಿ, ಡಿ.12: ಸಂಸತ್ತಿನ ಚಳಿಗಾಲದ ಅಧಿವೇಶನದ ನಡುವೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ.ರಾಘವೇಂದ್ರ ಅವರ ಆಹ್ವಾನದ ಮೇರೆಗೆ, ಕಾಗಿನೆಲೆ ಮಹಾಸಂಸ್ಥಾನ, ಕನಕ ಗುರುಪೀಠದ ಜಗದ್ಗುರುಗಳಾದ ಪರಮಪೂಜ್ಯ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ನಿನ್ನೆ ನವದೆಹಲಿಯ ಸಂಸದರ ಗೃಹ ಕಚೇರಿಗೆ ಭೇಟಿ ನೀಡಿದರು. ಈ ವೇಳೆ ಸಂಸದ ಬಿ.ವೈ.ರಾಘವೇಂದ್ರ ಅವರು ಪೂಜ್ಯ ಸ್ವಾಮೀಜಿಗಳನ್ನು ಆದರಪೂರ್ವಕವಾಗಿ ಸ್ವಾಗತಿಸಿ, ಸತ್ಕರಿಸಿ, ಆಶೀರ್ವಾದ ಕೋರಿದರು.

ಈ ಸಂದರ್ಭದಲ್ಲಿ ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್, ಮಾಜಿ ಸಂಸದ ವಿರುಪಾಕ್ಷಪ್ಪ, ಮಾಜಿ ಸಭಾಪತಿಗಳಾದ ರಘುನಾಥ್ ರಾವ್ ಮಲ್ಕಾಪುರೆ, ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ರಾಜ್ಯ ಉಪಾಧ್ಯಕ್ಷ ಡಾ. ಪ್ರಶಾಂತ್ ಡಿಟಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಮರಿಗೌಡ ಮೊದಲಾದವರು ಕೂಡ ಉಪಸ್ಥಿತರಿದ್ದರು. “ಶ್ರೀಗಳವರನ್ನು ಸ್ವಾಗತಿಸಿ, ಗೌರವಿಸಿ, ಕುಶಲೋಪರಿ ವಿಚಾರಿಸಿ, ಆಶೀರ್ವಾದ ಪಡೆಯುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಅವರೊಂದಿಗೆ ಹಲವಾರು ವಿಷಯಗಳ ಕುರಿತು ಚರ್ಚಿಸಿ,
ಮಾರ್ಗದರ್ಶನ ಪಡೆಯಲಾಯಿತು,” ಎಂದು ಸಂಸದ ರಾಘವೇಂದ್ರ ಹೇಳಿದ್ದಾರೆ. ಹಾಲುಮತ ಸಮುದಾಯದ ಶ್ರೇಯೋಭಿವೃದ್ಧಿ, ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಸ್ತಾಪಿಸುವಂತಹ ಬೇಡಿಕೆಗಳು ಹಾಗೂ ಸಮಾಜದ ಬಲವರ್ಧನೆ ನಿಟ್ಟಿನಲ್ಲಿ ಸಮಾಲೋಚನೆಗಳು ನಡೆದಿರುವುದಾಗಿ ತಿಳಿದು ಬಂದಿದೆ.