ಶಿವಮೊಗ್ಗ : ಮಾದಕ ವಸ್ತು, ಗಾಂಜಾ ಮಾರಾಟ, ಸಾಗಾಣಿಕೆ, ಸೇವನೆ, ಬೆಳೆಯುವುದು, ಸಂಗ್ರಹಣೆ ಇವೆಲ್ಲಾ ಕೃತ್ಯಗಳು ಶಿಕ್ಷಾರ್ಹ ಅಪರಾಧವಾಗಿದ್ದು, ಶಿವಮೊಗ್ಗ ಜಿಲ್ಲಾ ಪೊಲೀಸ್ ಮಾದಕ ವಸ್ತು ಗಾಂಜಾ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದು, ತಳಮಟ್ಟದಿಂದ ಇದರ ನಿಯಂತ್ರಣಕ್ಕೆ ಜಿಲ್ಲಾದ್ಯಂತ ಶಿವಮೊಗ್ಗ ನಗರ ಮತ್ತು ಜಿಲ್ಲೆಯಲ್ಲಿ ವಿಶೇಷ ಕ್ರಮ ಕೈಗೊಂಡಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ನಗರದಲ್ಲಿ ೨೦೨೫ರಲ್ಲಿ ಗಾಂಜಾ ಸೇವನೆ ಪ್ರಕರಣ, ೫೬೩ ದಾಖಲಾಗಿತ್ತು. ಒಟ್ಟು ೬೭೧ ಆರೋಪಿತರನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳಲಾಗಿದೆ ಎಂದರು.
ಶಿವಮೊಗ್ಗ ನಗರವೊಂದರಲ್ಲೇ ಅಕ್ರಮ ಗಾಂಜಾ ಮಾರಾಟ, ಸಾಗಾಣಿಕೆ ಮತ್ತು ಬೆಳೆದ ಆರೋಪಿತರ ವಿರುದ್ಧ ಒಟ್ಟು ೮೫ ಸೇವನೆ ಪ್ರಕರಣಗಳು ದಾಖಲಾಗಿದ್ದು, ೬೫ ಆರೋಪಿತರ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಮಾದಕ ವಸ್ತು ಮತ್ತು ಗಾಂಜಾ ನಿಯಂತ್ರಣ ಸಂಬಂಧ ಏರಿಯಾ ಡಾಮಿನೇಷನ್, ವಿಶೇಷ ಗಸ್ತು ಕಾರ್ಯಾಚರಣೆ ತಂಡ ರಚಿಸಿ, ಪೊಲೀಸ್ ಠಾಣೆಗಳ ವ್ಯಾಪ್ತಿಯ ಸೂಕ್ಷ್ಮ ಪ್ರದೇಶಗಳಲ್ಲಿ ಹಾಗೂ ಹೊರ ವಲಯಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ಮಟ್ಟಹಾಕುವ ಸಂಬಂಧ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಮತ್ತು ನಗರ ವ್ಯಾಪ್ತಿಯಲ್ಲಿ ಡಿಎಆರ್ ಹಾಗೂ ಕ್ಯೂಆರ್ಟಿ ತಂಡದೊಂದಿಗೆ ಸಂಜೆ ೬ ರಿಂದ ೧೦ರ ವರೆಗೆ ವಿಶೇಷ ಗಸ್ತು ಕಾರ್ಯಾಚರಣೆ ನಡೆಸಿ, ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದವರನ್ನು ಠಾಣೆಗೆ ಕರೆತಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಸೇವನೆ ದೃಢಪಟ್ಟವರ ವಿರುದ್ಧ ಎನ್ಡಿಪಿಎಸ್ ಕಾಯ್ದೆ ರೀತಿಯ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದರು.
ನಗರದಲ್ಲಿ ೨೦೨೫ರಲ್ಲಿ ೫೧೯ ಕಾರ್ಯಾಚರಣೆಯಾಗಿದೆ. ೨೭೯೬ ವ್ಯಕ್ತಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಅದರಲ್ಲಿ ೨೭೯ ಸೇವನೆ ದೃಢಪಟ್ಟ ಅಸಾಮಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಮತ್ತು ಇತರೆಡೆ ಗಾಂಜಾ ಬೆಳೆದಿರುವ ಮಾಹಿತಿ ಸಂಗ್ರಹಿಸಿ, ಡ್ರೋಣ್ ಬಳಕೆಮಾಡಿ ಹಸಿಗಾಂಜಾ ಬೆಳೆದಿರುವುದು ಪಟ್ಟಿಮಾಡಿ ೩ ಪ್ರಕರಣಗಳನ್ನು ದಾಖಲಿಸಿ ೬ ಆರೋಪಿಗಳನ್ನು ಬಂಧಿಸಲಾಗಿದೆ. ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ನಶೆಮುಕ್ತ ಕರ್ನಾಟಕ ಅಭಿಯಾನದಡಿ ಆಯಾಯ ತಾಣಾ ವ್ಯಾಪ್ತಿಯ ಅಧಿಕಾರಿ ಮತ್ತು ಸಿಬ್ಬಂದಿಗಳು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಈ ಕಾರ್ಯಕ್ರಮದಲ್ಲಿ ಡ್ರಗ್ಫ್ರೀ ಕರ್ನಾಟಕ ಅಪ್ಲಿಕೇಷನ್, ಟೋಲ್ ಫ್ರೀ ನಂ.೧೦೯೮ ಮಾನಸ ಪೋರ್ಟಲ್ ನಂ.೧೯೩೩ ಬಗ್ಗೆ ಮಾಹಿತಿ ನೀಡಲಾಗಿದೆ. ವಿಶೇಷ ಅರಿವು ಕಾರ್ಯಕ್ರಮಗಳನ್ನು ಜೋಡಿಸಿಕೊಳ್ಳಲಾಗಿದೆ. ಗಾಂಜಾ ಬಗ್ಗೆ ಮಾಹಿತಿ ನೀಡಲು ಮತ್ತು ಮಾಹಿತಿದಾರರ ಗೌಪ್ಯತೆ ಕಾಪಾಡುವ ಬಗ್ಗೆ ತಿಳಿಸಲಾಗಿದೆ.
ಶಾಲಾ-ಕಾಲೇಜುಗಳ ಸುತ್ತಮುತ್ತ ಪ್ರತೀ ಎರಡು ತಿಂಗಳಿಗೊಮ್ಮೆ ವಿಶೇಷ ಕಾರ್ಯಾಚರಣೆ ಮಾಡಲಾಗಿದ್ದು, ಕೋಟ್ಪಾ ಪ್ರಕರಣದ ಅಡಿಯಲ್ಲಿ ೨೦೨೫ರಲ್ಲಿ ಒಟ್ಟು ೯೨೧ ಪ್ರಕರಣಗಳನ್ನು ದಾಖಲಿಸಲಾಗಿದೆ. ೨೦೨೫ರಲ್ಲಿ ೬೧೩ ಅರಿವು ಕಾರ್ಯಕ್ರಮಗಳನ್ನು ಮಾಡಿ, ೫೨,೦೦೦ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ ಎಂದರು.
ಪ್ರತಿ ತಿಂಗಳು ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳ ಮಟ್ಟದ ಸಭೆಯನ್ನು ನಡೆಸಿ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗಿದೆ ಎಂದರು.
ಕುಂಸಿ ಠಾಣಾ ವ್ಯಾಪ್ತಿಯಲ್ಲಿ ಅಕ್ಟೋಬರ್ ೨ರಂದು ಬಸಮ್ಮ ಕೋಂ ಲೇಟ್ ಡಿ. ಶಾಂತಪ್ಪ (೭೦) ಕೊಲೆಯಾಗಿದ್ದರು ಈ ಸಂಬಂಧ ಮೃತರ ತಮ್ಮ ಈಶ್ವರಪ್ಪ ನೀಡಿದ ದೂರಿನಲ್ಲಿ ಮೃತೆಯ ಮಗನಾದ ರಮೇಶ್ ಆರೋಪಿ ಎಂದು ತಿಳಿಸಿದ್ದರು. ಆದರೆ ತಾಂತ್ರಿಕ ಮತ್ತು ಇತರ ಸಾಕ್ಷಿಗಳಿಂದ ರಮೇಶ್ ನಿರಪರಾಧಿ ಎಂದು ಗೊತ್ತಾದ ಹಿನ್ನಲೆಯಲ್ಲಿ ವಿಶೇಷ ತಂಡ ರಚನೆ ಮಾಡಿ, ತನಿಖಾಧಿಕಾರಿ ಕುಂಸಿ ಠಾಣಾ ಇನ್ಸ್ಪೆಕ್ಟರ್ ದೀಪಕ್ ಹೆಗಡೆಯವರ ನೇತೃತ್ವದಲ್ಲಿ ತಾಂತ್ರಿಕ ಸಾಕ್ಷಿ ಮತ್ತು ಇತರ ಸಾಕ್ಷಿಗಳನ್ನು ಆಧಾರವಾಗಿಟ್ಟುಕೊಂಡು ಪ್ರಕರಣದ ಆರೋಪಿತರಾದ ಅಮನ್ಸಿಂಗ್(೨೧), ವಿಕಾಸ್ (೨೧)ಇವರನ್ನು ವಶಕ್ಕೆ ಪಡೆದು ಸದರಿಯವರಿಂದ ಕೃತ್ಯದಲ್ಲಿ ಸಮಯದಲ್ಲಿ ಬಳಕೆಯಾದ ಬೈಟ್ ಮತ್ತು ೨ ಫೋನ್ಗಳನ್ನು ವಶಪಡಿಸಿಕೊಂಡಿದ್ದು ಮೃತೆ ಬಸಮ್ಮನ ಮೈಮೇಲಿದ್ದ ಆರೋಪಿತರು ತೆಗೆದುಕೊಂಡು ೧ ಕಿವಿಯೋಲೆಯ ತಿರುಪು ಮತ್ತು ಕಿವಿಚೈನ್ ಹಾಗೂ ಉಂಗುರ ಕರಗಿಸಿ ಮಾಡಿದ ಬಂಗಾರದ ಗಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣದಲ್ಲಿ ಕೊಲೆ ಆರೋಪಿಗಳ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ವಿಶೇಷ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಒಂಟಿ ಮನೆಯಲ್ಲಿ ವಾಸ ಇದ್ದರೆ ವಯಸ್ಸಾದ ವ್ಯಕ್ತಿಗಳಿಗೆ ಯಾವುದೇ ಭದ್ರತಾ ನೆರವು ಬೇಕಾದ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಗಮನಕ್ಕೆ ತನ್ನಿ ಮತ್ತು ಮನೆಯ ಸುತ್ತಮುತ್ತಲೂ ಅಲರಾಮ್ ಹಾಗೂ ಸಿಸಿ ಕ್ಯಾಮೇರಾದ ವ್ಯವಸ್ಥೆಯನ್ನು ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಶಿವಮೊಗ್ಗ ಟ್ರಾಫಿಕ್ ಅವ್ಯವಸ್ಥೆ ಸಂಬಂಧಿಸಿದಂತೆ ವ್ಯಾಪಕ ಕಾರ್ಯಕ್ರಮಗಳನ್ನು ಇನ್ಸ್ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ಕೈಗೊಳ್ಳಲಾಗಿದ್ದು, ನೆಹರೂ ರಸ್ತೆ, ದುರ್ಗಿಗುಡಿ ಮತ್ತು ಆಸ್ಪತ್ರೆಯ ಸುತ್ತಲಿನ ಒಟ್ಟು ೨೪ ಕನ್ಸರ್ವೆನ್ಸಿಗಳನ್ನು ಗುರುತಿಸಿ ಅಭಿವೃದ್ಧಿಪಡಿಸಿ ಅಲ್ಲಿ ಸಿಸಿ ಕ್ಯಾಮೇರಾ ಮತ್ತು ಲೈಟಿಂಗ್ ವ್ಯವಸ್ಥೆ ಹಾಗೂ ಭದ್ರತಾ ಸಿಬ್ಬಂದಿಯ ನಿಯೋಜನೆ ಮಾಡಲು ಪಾಲಿಕೆ ಹಾಗೂ ಸ್ಥಳೀಯ ವರ್ತಕರ ಮತ್ತು ಆಸ್ಪತ್ರೆ ಮಾಲೀಕರ ನೆರವು ಪಡೆದಿದ್ದು ಶೀಘ್ರದಲ್ಲೇ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಮೇಶ್, ಎ.ಜಿ. ಕಾರ್ಯಪ್ಪ, ಪೊಲೀಸ್ ಉಪಾಧೀಕ್ಷಕರಾದ ಸಂಜೀವ್ ಕುಮಾರ್, ಬಾಬು ಅಂಜನಪ್ಪ, ಇನ್ಸ್ಪೆಕ್ಟರ್ ದೀಪಕ್ ಮೊದಲಾದವರಿದ್ದರು.