Chief Minister H D Kumaraswamy interview in Bengaluru on Monday 27th August 2018. Photo by Janardhan BK
ಶಿವಮೊಗ್ಗ : ರಾಜ್ಯದಲ್ಲಿ ಕಾನೂನೇ ಇಲ್ಲ. ಕಾನೂನು ಪಾಲಿಸುವ ಪೊಲೀಸರೇ ದರೋಡೆಗೆ
ಇಳಿದಿದ್ದಾರೆಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಈ ಹಿಂದೆ
ಮುಖ್ಯಮಂತ್ರಿಯಾಗಿದ್ದಾಗ ಮೈಸೂರಿನಲ್ಲಿ ಪೊಲೀಸ್ ಅಧಿಕಾರಿಗಳೇ ದರೋಡೆ ಮಾಡಿದ್ದರು.
ಈಗಲೂ ಕೂಡ ಅದೇ ಸ್ಥಿತಿ ಮುಂದುವರಿದಿದೆ. ಬೆಂಗಳೂರಿನಲ್ಲಿ ಎಟಿಎಂ ಹಣ, ದಾವಣಗೆರೆ
ಸೇರಿದಂತೆ ಇತರೆ ಕಡೆಗಳಲ್ಲಿ ನಡೆದಿರುವ ಕೃತ್ಯ, ಪರಪ್ಪ ಅಗ್ರಹಾರ ಜೈಲಿನಲ್ಲಿ

ನಡೆಯುತ್ತಿರುವ ಕಾನೂನು ಚಟುವಟಿಕೆಗಳು ಇದಕ್ಕೆ ಸಾಕ್ಷಿಯಾಗಿವೆ ಎಂದರು.
ರಾಜ್ಯ ಸರ್ಕಾರ ಅಭಿವೃದ್ಧಿಗೆ ಒತ್ತು ನೀಡುತ್ತಿಲ್ಲ. ಬಜೆಟ್ನಲ್ಲಿ ಇಲಾಖಾವಾರು
ನೀಡಿದ ಅನುದಾನದ ಬಳಕೆ ನೋಡಿದರೆ ಸರ್ಕಾರ ದಯನೀಯ ಸ್ಥಿತಿಯಲ್ಲಿರುವುದು
ಕಂಡುಬರುತ್ತಿದೆ. ಕೆಲವು ಇಲಾಖೆಗಳು ಶೇ.೧೦ರಷ್ಟು ಅನುದಾನವನ್ನು ಬಳಕೆ
ಮಾಡಿಕೊಂಡಿಲ್ಲ. ವರ್ಷ ಕಳೆಯುತ್ತಿದ್ದರೂ ಶೇ.೪೫ರಷ್ಟು ಗುರಿ ಮುಟ್ಟಲು ಸಾಧ್ಯವಾಗಿಲ್ಲ
ಎಂದರು.
೧೫ ಸಾವಿರ ಕೋಟಿ ತೆರಿಗೆ ಸಂಗ್ರಹ ಗುರಿ ಹೊಂದಲಾಗಿತ್ತು. ಈ ಗುರಿ ಮುಟ್ಟಲು
ಸಾಧ್ಯವಾಗಿಲ್ಲ. ಕ್ಯಾಪಿಟಲ್ ಅಸೆಟ್ ಎಷ್ಟು ಮಾಡಿದ್ದೀರಿ ಎಂದು ಕೇಳಿದರೆ ಸರ್ಕಾರದ
ಬಳಿ ಉತ್ತರವಿಲ್ಲ. ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿಲ್ಲ. ಜಲಸಂಪನ್ಮೂಲ
ಸಚಿವರು ಬೆಂಗಳೂರು ಹೆಸರು ಬದಲಾಯಿಸಿ ಆ ಯೋಜನೆಗಳಿಂದ ದುಡ್ಡು ಹೊಡೆಯುವಲ್ಲಿ
ನಿರತರಾಗಿದ್ದಾರೆಂದು ದೂರಿದರು.

ತುಂಗಭದ್ರಾ ಜಲಾಶಯದ ಒಂದು ಗೇಟ್ ಅಳವಡಿಸಿದ ಗುತ್ತಿಗೆದಾರರನಿಗೆ ಇನ್ನೂ ಹಣ ನೀಡಿಲ್ಲ.
ಅಂತಹದರಲ್ಲಿ ಒಂದು ಬೆಳೆಗೆ ನೀರು ನಿಲ್ಲಿಸಿ ಎಲ್ಲಾ ಗೇಟುಗಳನ್ನು ಅಳವಡಿಸಲು ಸರ್ಕಾರ
ಮುಂದಾಗಿ, ರೈತರಿಗೆ ಅನ್ಯಾಯ ಮಾಡುತ್ತಿದೆ. ರಾಜಕೀಯ ಕಚ್ಚಾಟದಲ್ಲಿ ಅಧಿಕಾರಿಗಳು
ಖಜಾನೆ ಸೋರಿಕೆ ಹೇಗೆ ಮಾಡಬೇಕೆಂದು ಕಾಯುತ್ತಿದ್ದಾರೆ ಎಂದು ಹರಿಹಾಯ್ದರು.
ರಾಜ್ಯದಲ್ಲಿ ೬೫ ಸಾವಿರ ಶಿಕ್ಷಕರ ಕೊರತೆ ಇದ್ದು, ನೇಮಕಾತಿ ಆಗುತ್ತಿಲ್ಲ. ಹಲವು
ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿದ್ದಾರೆ. ಒಂದು ಸಾವಿರ ಪಬ್ಲಿಕ್ ಶಾಲೆ ಮಾಡುವುದಾಗಿ
ಹೇಳುತ್ತಿದ್ದಾರೆ. ಇವರ ಬಳಿ ಹಣ ಇದೆಯೇ ? ಎಂದು ಪ್ರಶ್ನಿಸಿದ ಅವರು, ಸಿಎಸ್ಆರ್
ಫಂಡ್ನಿಂದ ಹಣ ನೀಡುವುದಾಗಿ ಸಿಎಂ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಬೆಳೆಗಳಿಗೆ ಕೇಂದ್ರ ಬೆಂಬಲ ಬೆಲೆ ಘೋಷಣೆ ಮಾಡಿದ್ದಾಗ್ಯೂ ರಾಜ್ಯ ಸರ್ಕಾರ ಕೇಂದ್ರದ
ಕಡೆ ಬೆರಳು ಮಾಡುವುದು ಬಿಟ್ಟಿಲ್ಲ. ಖರೀದಿ ಕೇಂದ್ರ ತೆರೆದು ಮೆಕ್ಕೆಜೋಳ ಖರೀದಿ
ಮಾಡಬೇಕಾದ ಸರ್ಕಾರ ಇನ್ನೂ ಆ ಕೆಲಸ ಮಾಡಿಲ್ಲ. ಬೆಂಬಲ ಬೆಲೆಗಿಂತ ಕಡಿಮೆ ಧಾರಣೆ ಇರುವ
ಮೆಕ್ಕೆಜೋಳವನ್ನು ಸರ್ಕಾರ ಖರೀದಿ ಮಾಡಿ ಮ್ಯಾಚಿಂಗ್ ಗ್ರ್ಯಾಂಟ್ಗೆ ಮನವಿ ಸಲ್ಲಿಸಲು
ಅವಕಾಶವಿದ್ದರೂ ಆ ರೀತಿ ಮಾಡುತ್ತಿಲ್ಲ ಎಂದರು.
ಅರಸು ಸಮೀಪಕ್ಕೂ ಸಾಧ್ಯವಿಲ್ಲ
ದೇವರಾಜ ಅರಸು ದಾಖಲೆ ಮುರಿಯುವುದಾಗಿ ಹೇಳುತ್ತಿರುವ ಸಿಎಂ ಸಿದ್ದರಾಮಯ್ಯನವರಿಗೆ
ಇನ್ನೂ ೫ ವರ್ಷ ಸಿಎಂ ಸ್ಥಾನ ಕೊಟ್ಟರೂ ಅರಸು ಸಮೀಪಕ್ಕೆ ಬರಲು ಸಾಧ್ಯವಿಲ್ಲ. ದೇವರಾಜ
ಅರಸು ಮಾಡಿದಷ್ಟು ಸುಧಾರಣೆ ಇವರು ಮಾಡಿದ್ದಾರೆಯೇ ? ಎಂದು ಪ್ರಶ್ನಿಸಿದರು.
೧೩೬ ಸ್ಥಾನ ಕೊಟ್ಟರೂ ಈಗ ಸಿಎಂ ಸ್ಥಾನಕ್ಕೆ ಕಚ್ಚಾಡುತ್ತಿದ್ದಾರೆ. ಆದರೂ ೨೦೨೮ಕ್ಕೆ
ತಮ್ಮ ಪಕ್ಷವೇ ಬರುವುದಾಗಿ ಹಗಲುಗನಸು ಕಾಣುತ್ತಿದ್ದಾರೆ. ಇವರನ್ನೇ ಪುನಃ ಗೆಲ್ಲಿಸಲು
ಜನ ಕಾಯುತ್ತಿರುವಂತೆ ಮಾತನಾಡುತ್ತಿದ್ದಾರೆ. ಬಿಹಾರದಲ್ಲಿ ತೇಜಸ್ವಿ ಯಾದವ್ ಆದ ಗತಿಯೇ
ಇಲ್ಲಿ ಕಾಂಗ್ರೆಸ್ಗೆ ಆಗಲಿದೆ ಎಂದರು.
ವಿಐಎಸ್ಎಸ್ ಅಭಿವೃದ್ಧಿಗೆ ಡಿಪಿಆರ್
ಭದ್ರಾವತಿ ವಿಐಎಸ್ಎಲ್ ಬಂಡವಾಳ ಹಿಂತೆಗೆತಕ್ಕೆ ಸರ್ಕಾರ ನಿರ್ಧರಿಸಿತ್ತು. ಆದರೆ
ಪ್ರಧಾನಿ ಮೋದಿಯವರಿಗೆ ಪರಿಸ್ಥಿತಿ ಮನವರಿಕೆ ಮಾಡಿದ ಪರಿಣಾಮ ಅದರ ಪುನಶ್ಚೇತನಕ್ಕೆ
ಒಪ್ಪಿಗೆ ನೀಡಿದ್ದಾರೆ. ಡಿಪಿಆರ್ ಮಾಡಲು ಎರಡು ಕಂಪನಿಗಳಿಗೆ ನೀಡಲಾಗಿದೆ ಎಂದರು.
ಸುಮಾರು ೪ ಸಾವಿರ ಕೋಟಿ ರೂ. ಹೂಡಿಕೆ ಮಾಡಲು ನಿರ್ಧರಿಸಲಾಗಿದೆ. ಮುಂದಿನ ೪೦-೪೫
ವರ್ಷಗಳ ಕಾಲ ಯಾವುದೇ ಸಮಸ್ಯೆ ಇಲ್ಲದಂತೆ ನಡೆದುಕೊಂಡು ಹೋಗಲು ಕ್ರಮ ವಹಿಸಲಾಗುತ್ತದೆ.
ಮುಖ್ಯವಾಗಿ ಸೇನೆ ಮತ್ತು ರೈಲ್ವೆ ಇಲಾಖೆಗೆ ಸಂಬಂಧಿಸಿದ ವಸ್ತುಗಳನ್ನು ಉತ್ಪಾದನೆ
ಮಾಡಲು ಆದ್ಯತೆ ನೀಡಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳು ಗೋಪಾಲ್, ಜಿಲ್ಲಾ
ಕಾರ್ಯಾಧ್ಯಕ್ಷ ರಾಮಕೃಷ್ಣ, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ನಗರಾಧ್ಯಕ್ಷ
ದೀಪಕ್ ಸಿಂಗ್, ಪ್ರಮುಖರಾದ ಶಾರದಾ ಅಪ್ಪಾಜಿ, ಮಧುಕುಮಾರ್, ಎಸ್.ವಿ. ರಾಜಮ್ಮ
ಮೊದಲಾದವರು ಇದ್ದರು.