ಶಿವಮೊಗ್ಗ : ಶಿವಮೊಗ್ಗ ತಾಲೂಕಿನ ಉಂಬ್ಲೇಬೈಲು ಸಮೀಪದ ಲಿಂಗಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಶೈಕ್ಷಣಿಕ ಪ್ರವಾಸದ ಭಾಗವಾಗಿ ಇತ್ತೀಚೆಗೆ ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನ ಪ್ರವಾಸ ಕೈಗೊಳ್ಳುವ ಮೂಲಕ ಅಲ್ಲಿ ಹಲವು ಸ್ಥಳಗಳನ್ನು ವೀಕ್ಷಿಸಿ, ಪ್ರವಾಸದ ವಿಶೇಷ ಅನುಭವದ ಬುತ್ತಿಯೊಂದನ್ನು ಹೊತ್ತು ಬಂದಿದ್ದಾರೆ.

ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ಮಕ್ಕಳ ಶೈಕ್ಷಣಿಕ ಪ್ರವಾಸವೆಂದರೆ ಟೆಂಪೋ ಟ್ರಾವೆಲ್ಸ್, ಬಸ್ಸು ಗಳ ಮೂಲಕವೇ ಹೋಗಿ ಬರುವುದೆ ದುಸ್ತರ ಎನಿಸುವಾಗ ಲಿಂಗಾಪುರ ಶಾಲೆಯ ಮಕ್ಕಳು ವಿಮಾನಯಾನದ ಮೂಲಕ ಶೈಕ್ಷಣಿಕ ಪ್ರವಾಸ ಮುಗಿಸಿಕೊಂಡು ಬಂದಿರುವುದು ನಿಜಕ್ಕೂ ವಿಶೇಷವೇ ಆಗಿದೆ. ಗ್ರಾಮೀಣ ಮಕ್ಕಳಿಗೆ ಹೊಸ ಜ್ಞಾನ ಮತ್ತು ಅನುಭವ ನೀಡಬೇಕೆನ್ನುವ ಉದ್ದೇಶದೊಂದಿಗೆ ಈ ಶಾಲೆಯ ಶಿಕ್ಷಕರು ನಡೆಸಿದ್ದ ಪ್ರಯತ್ನಕ್ಕೆ ಗ್ರಾಮಸ್ಥರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸಹಕಾರವೂ ಸಿಕ್ಕಿದ್ದು, ಪ್ರವಾಸ ಯಶಸ್ಸಿಗೆ ಕಾರಣವಾಗಿದೆ.
ಗ್ರಾಮೀಣ ಮಕ್ಕಳಿಗೂ ಒಂದು ವಿಶೇಷ ಅನುಭವ ಸಿಗಲಿ ಎನ್ನುವ ಉದ್ದೇಶದೊಂದಿಗೆ ಶಾಲೆಯ ಸಿಬ್ಬಂದಿಗಳೆಲ್ಲ ಸೇರಿ ಈ ಯೋಜನೆ ಹಾಕಿಕೊಂಡಿದ್ದೇವು. ೬ರಿಂದ ೭ ನೇ ತರಗತಿ ಮಕ್ಕಳಿಗೆ ಸೀಮಿತಗೊಳಿಸಿ, ಅದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನ ಮತ್ತು ಪೂರ್ವಾನುಮತಿಯನ್ನು ಪಡೆದುಕೊಂಡಿದ್ದೇವು. ನ.೧೭ ರಂದು ಶಿವಮೊಗ್ಗದಲ್ಲಿ ವಿಮಾನ ಏರಿದ ಮಕ್ಕಳು, ಅಂದೇ ಬೆಂಗಳೂರಿನ

ತಲುಪಿದರು.ನ.೧೯ ರವರೆಗೆ ಅಲ್ಲಿದ್ದು, ವಿವಿಧ ಸ್ಥಳಗಳನ್ನು ವೀಕ್ಷಿಸಿ ವಾಪಾಸ್ ಆದೆವು? ಎಂದು ತಮ್ಮ ಶಾಲೆಯ ಶೈಕ್ಷಣಿಕ ಪ್ರವಾಸದ ಬಗ್ಗೆ ಮಾಹಿತಿ ನೀಡುತ್ತಾರೆ ಪ್ರವಾಸ ಸಂಚಾಲಕರಾಗಿದ್ದ ಶಿಕ್ಷಕಿ ರೂಪಶ್ರೀ ನಾಗೇಂದ್ರ. ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ ಹಾಗೂ ಜವಹರಲಾಲ್ ನೆಹರೂ ತಾರಾಲಯಗಳನ್ನು ವೀಕ್ಷಿಸಿ ವಿಜ್ಞಾನ, ತಂತ್ರಜ್ಞಾನ ಮತ್ತು ಬಾಹ್ಯಾಕಾಶ ವಿಜ್ಞಾನಗಳ ಬಗ್ಗೆ ನೇರ ಅನುಭವ ಪಡೆಯುವ ಅವಕಾಶ ಪಡೆದರು.ಅದೇ ವೇಳೆ ಅವರು ರಾಜ್ಯದ ಪ್ರಮುಖ ಆಡಳಿತ ಕಟ್ಟಡವಾದ ವಿಧಾನಸೌಧ ವನ್ನೂ ಭೇಟಿ ನೀಡಿ, ಕಟ್ಟಡದ ವಾಸ್ತುಶಿಲ್ಪ ಮತ್ತು ಸಭಾಂಗಣಗಳಲ್ಲಿ ನಡೆಯುವ ಸಭೆಗಳ ಕಾರ್ಯವೈಖರಿಯನ್ನು ತಿಳಿದುಕೊಂಡು ಈ ಮಕ್ಕಳು ಊರಿಗೆ ವಾಪಸ್ ಆಗಿದ್ದಾರೆ.
ವಿವಿಧ ಸ್ಥಳಗಳಿಗೆ ಹೋದಾಗೆಲ್ಲ ಮಕ್ಕಳು ಆಸಕ್ತಿಯಿಂದ ಅಲ್ಲಿನ ವಿಶೇಷತೆಗಳನ್ನು ವೀಕ್ಷಿಸಿ ಮಾಹಿತಿ ತಿಳಿದುಕೊಳ್ಳುತ್ತಿದ್ದ ಪರಿಯ ಬಗ್ಗೆ ಮಾತನಾಡಿದ ಶಿಕ್ಷಕರು, ಪುಟ್ಟ ಗ್ರಾಮದ ಮಕ್ಕಳಲ್ಲಿ ಎತ್ತರದ ಕನಸುಗಳನ್ನು ಬೆಳೆಸುವ ಉದ್ದೇಶದಿಂದ ವಿಮಾನಯಾನದ ಅನುಭವ ನೀಡುವ ಈ ಮಹತ್ವಾಕಾಂಕ್ಷಿ ಯೋಜನೆ ಶಿಕ್ಷಕರ ವೃಂದದಿಂದ ರೂಪಿಸಲಾಯಿತು. ಮೊದಲ ಬಾರಿಗೆ ವಿಮಾನ ಹತ್ತಿದ ಮಕ್ಕಳ ಸಂತೋಷ ಅಮೋಘವಾಗಿತ್ತು. ಈ ಶೈಕ್ಷಣಿಕ ಪ್ರವಾಸವು ಮಕ್ಕಳಿಗೆ ಪುಸ್ತಕದಾಚೆಯ ಜ್ಞಾನ ನೀಡಿ, ಭವಿಷ್ಯದಲ್ಲಿ ದೊಡ್ಡ ಕನಸು ಕಾಣಲು ಪ್ರೇರಣೆ ನೀಡಿದೆ ಎಂದು ಶಿಕ್ಷಕಿ ರೂಪಶ್ರೀ ತಿಳಿಸಿದ್ದಾರೆ.
ಕಳೆದ ವರ್ಷ ನಾವು ಮಕ್ಕಳನ್ನು ಶಿವಮೊಗ್ಗ ವಿಮಾನ ನಿಲ್ದಾಣ ವೀಕ್ಷಣೆಗೆ ಕರೆದುಕೊಂಡು ಹೋದಾಗ, ಅಲ್ಲಿ ಬೋರ್ಡಿಂಗ್ ಪಾಸ್ ಇಲ್ಲದ ಕಾರಣ ಒಳಗಡೆ ಬಿಡಲಿಲ್ಲ. ಹಾಗಾಗಿ ಮಕ್ಕಳಿಗೆ ವಿಮಾನಗಳ ಹಾರಾಟವನ್ನು ಹತ್ತಿರದಿಂದ ನೋಡುವುದಕ್ಕೆ ಆಗಿರಲಿಲ್ಲ. ಅದೇ ಒಂದ್ರೀತಿ ಪ್ರೇರಣೆ ಆದಂತಾಗಿತ್ತು. ಮುಂದಿನ ವರ್ಷಕ್ಕೆ ಮಕ್ಕಳನ್ನು ವಿಮಾನದಲ್ಲಿಯೇ ಪ್ರವಾಸಕ್ಕೆ ಕರೆದುಕೊಂಡು ಹೋಗಬೇಕು, ಅವರಿಗೂ ಒಂದು ಅನುಭವ ಆಗಬೇಕೆನ್ನುವ ನಮ್ಮ ಕನಸು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲೆಯ ಎಸ್ ಡಿಎಂಸಿ ಸಮಿತಿ ಹಾಗೂ ಶಿಕ್ಷಕ ವೃಂದವರು ಮೂಲಕ ಈಡೇರಿದೆ.
ಲತಾ , ಮುಖ್ಯ ಶಿಕ್ಷಕಿ……………
ಸರ್ಕಾರಿ ಶಾಲೆಗಳು, ಅಲ್ಲಿನ ಮಕ್ಕಳು ಅಂದ್ರೆ ಒಂದ್ರೀತಿ ಅಸಡ್ಡೆಯಿಂದ ನೋಡುವ ಮನೋಭಾವ ಇದೆ. ಆದ್ರೆ ಸರ್ಕಾರಿ ಶಾಲೆಯ ಮಕ್ಕಳು ಯಾವುದಕ್ಕೂ ಕಡಿಮೆ ಇಲ್ಲ ಎಂದು ತೋರಿಸುವ ಒಂದು ಪ್ರಯತ್ನವಾಗಿ ಈ ಪ್ರವಾಸ ಕಾಣಿಸಿದೆ. ಶಿಕ್ಷಕರ ಈ ಪ್ರಯತ್ನಕ್ಕೆ ಪೋಷಕರ ಬೆಂಬಲವೂ ದೊಡ್ಡ ಮಟ್ಟದಲ್ಲಿ ಸಿಕ್ಕಿದ್ದು ನಿಜಕ್ಕೂ ವಿಶೇಷವೇ ಆಗಿದೆ. ನಮ್ಮ ಮಕ್ಕಳು ವಿಮಾನ ಪ್ರವಾಸ ಮುಗಿಸಿಕೊಂಡು ಊರಿಗೆ ವಾಪಸ್ ಆದಾಗ ನಿಜಕ್ಕೂ ನಮಗೆ ಹೆಮ್ಮೆ ಎನಿಸಿತು.
-ಸ್ಮಿತಾ ಉಲ್ಲಾಸ್, ಎಸ್ ಡಿಎಂಸಿ ಅಧ್ಯಕ್ಷರು-
ಶಿವಮೊಗ್ಗ ತಾಲೂಕಿನ ಉಂಬ್ಲೇಬೈಲು ಸಮೀಪದಲ್ಲಿರುವ ಲಿಂಗಾಪುರ ವು ಒಂದು ಪುಟ್ಟ ಗ್ರಾಮ. ಇಲ್ಲಿನ ಸರ್ಕಾರಿ ಶಾಲೆಯಲ್ಲಿ ೧ ರಿಂದ ೭ನೇ ತರಗತಿವರೆಗೆ ಶಿಕ್ಷಣವಿದೆ. ಇಲ್ಲಿ ಈಗ ಒಟ್ಟು ೩೬ ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿದ್ದು, ಲತಾ, ರೂಪಶ್ರೀ ಹಾಗೂ ಮೀನಾಕ್ಷಿ ಸೇರಿ ಮೂವರು ಕಾಯಂ ಶಿಕ್ಷಕರಿದ್ದಾರೆ. ಅವರೊಂದಿಗೆ ಅತಿಥಿ ಶಿಕ್ಷಕರಾಗಿ ಸಂದೀಪ್ ಎನ್ನುವವರು ಕೆಲಸ ಮಾಡುತ್ತಿದ್ದಾರೆ. ಶಾಲೆಯ ಕಾರ್ಯವೈಖರಿ ಬಗ್ಗೆ ಗ್ರಾಮದಲ್ಲಿ ಒಳ್ಳೆಯ ಅಭಿಪ್ರಾಯವಿದೆ.