ಶಿವಮೊಗ್ಗ,ನ.೨೮:
ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಅತ್ಯವಶ್ಯಕ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಅವರು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಗುರುಪುರದ ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ,ಗುರುಪುರ, ಶಿವಮೊಗ್ಗ ಹಾಗೂ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಪ್ರತಿಭೆ ಎಲ್ಲಾ ಮಕ್ಕಳಲ್ಲಿ ಅಡಗಿರುತ್ತದೆ. ಅದನ್ನು ಹೊರ ತೆಗೆಯುವುದಕ್ಕಾಗಿಯೇ ಪ್ರತಿಭಾ ಕಾರಂಜಿ ಯಂತಹ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಮಕ್ಕಳು ಪಠ್ಯೇತರ ಚಟುವಟಿಗಳ ಜೊತೆಗೆ ಸಹಪಠ್ಯ ಚಟುವಟಿಕೆಗಳು ಶಿಕ್ಷಣದ ಒಂದು ಭಾಗವಾಗಿವೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಶ್ರೀ ಆದಿಚುಂಚನಗಿರಿ ಶಾಖಾ ಮಠ, ಶಿವಮೊಗ್ಗ ಶಾಖೆಯ, ಶ್ರೀ ನಾದಮಯಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ದೀಪದ ಲೋಹ ಯಾವುದೇ ಆಗಿರಲಿ ಉರಿಯುತ್ತಿರುವ ದೀಪ ಬೆಳಕನ್ನು ನೀಡುತ್ತದೆ. ಸತತ ಪರಿಶ್ರಮದಿಂದ ಜ್ಞಾನ ವೃದ್ಧಿಯಾಗಲು ಸಾಧ್ಯ. ನಮ್ಮ ಭಾರತೀಯ ಸಂಸ್ಕೃತಿ, ಕಲೆಗೆ ಹೆಚ್ಚು ಮಹತ್ವ ನೀಡಿದೆ, ನಮ್ಮ ಗ್ರಾಮೀಣ ಜನಪದ ಕಲೆಗಳ ಸೊಗಡು ತುಂಬಾ ಅಭೂತ ಪೂರ್ವವಾದದು. ಪ್ರತಿಯೊಂದು ಮಗುವಿನಲ್ಲಿಯೂ ಪ್ರತಿಭೆ ಎನ್ನುವುದು ಬೂದಿ ಮುಚ್ಚಿದ ಕೆಂಡದಂತಿರುತ್ತದೆ ಎಂದರು.

ಪ್ರತಿಯೊಬ್ಬ ವಿದ್ಯಾರ್ಥಿಯು ಆತ್ಮ ಸಾಕ್ಷಿಯಾಗಿ ತಮ್ಮಲ್ಲಿರುವ ಕಲೆಯನ್ನು ಪ್ರದರ್ಶಿಸಬೇಕು ಎಂದ ಅವರು, ನಿಮ್ಮ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಶಿಕ್ಷಕರ ಹಾಗೂ ಪೋಷಕರ ಆದ್ಯ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಕೌಶಲ್ಯವನ್ನು ಹೊರ ತೆಗೆಯುವುದಕ್ಕಾಗಿ ಶಿಕ್ಷಣ ಇಲಾಖೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ ಎಂದ ಅವರು, ಹಿಂಜರಿಕೆ ನಿಮ್ಮ ಶತ್ರು, ಅದನ್ನು ತೊಡೆದು ಹಾಕಿ ಧೈರ್ಯದಿಂದ ಹಾಗೂ ಆತ್ಮವಿಶ್ವಾಸದಿಂದ ನಿಮ್ಮಲ್ಲಿರುವ ಪ್ರತಿಭೆ ಹಾಗೂ ಕೌಶಲ್ಯವನ್ನು ಪ್ರದರ್ಶಿಸಿ ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನಪರಿಷತ್ ಸದಸ್ಯ ಡಾ. ಧನಂಜಯ್ ಸರ್ಜಿ ಮಾತನಾಡುತ್ತಾ, ನಮ್ಮ ಮಕ್ಕಳಿಗೆ ಹಾಗೂ ಸಮಾಜಕ್ಕೆ ಬೇಕಾಗುವ ಒಂದು ಒಳ್ಳೆಯ ಸಂಸ್ಕೃತಿ, ಸಂಸ್ಕಾರ, ಆತ್ಮವಿಶ್ವಾಸ ಅದನ್ನು ನಿರಂತರವಾಗಿ ಸಮಾಜಕ್ಕೆ ಕೊಡುಗೆಯಾಗಿ ಕೊಡುತ್ತಾ ಬಂದಿದೆ. ಓದು ವಕ್ಕಾಲು, ಬುದ್ಧಿ ಮುಕ್ಕಾಲು ಅಂದರೆ ಓದು ಏನು ಮಾಡುತ್ತದೆ ಅಂದರೆ ಕೆಲಸ ಮಾಡುತ್ತದೆ. ಬುದ್ದಿ ಏನನ್ನು ಮಾಡುತ್ತದೆ ಅಂದರೆ ದೇಶ ಆಳುತ್ತದೆ. ಅಂದರೆ ಓದಿನ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಬೇಕು.

ಮಕ್ಕಳ ಮನಸ್ಸು ಮೊಗ್ಗಿನಂತೆ, ಅವರ ಅಂತರಾಳವನ್ನು ಅರಿತು ಶಿಕ್ಷಕರು ಮತ್ತು ಪೋಷಕರು ಮಕ್ಕಳಲ್ಲಿರುವ ನಕಾರಾತ್ಮಕ ವಿಚಾರಗಳನ್ನು ತೊಡೆದು ಹಾಕಿ ಒಳ್ಳೆಯ ಸಂಸ್ಕಾರಯುತ ಶಿಕ್ಷಣವನ್ನು ಕೊಟ್ಟಾಗ ಮಾತ್ರ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕಿಸ್ ಬಾನು, ಶಿವಮೊಗ್ಗ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಅಧ್ಯಕ್ಷ, ಮಧು ಎಚ್. ಎಂ., ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ಸಂಸ್ಥೆಯ ನಿರ್ದೇಶಕ ರವೀಶ್ ಎಚ್. ಎನ್., ಗುರುಕುಲ ಶಾಲಾ ಕಾಲೇಜಿನ ಪ್ರಾಂಶುಪಾಲ ಸುರೇಶ್ ಎಸ್.ಎಚ್., ಶಿವಮೊಗ್ಗ ತಾಲೂಕಿನ ವಿವಿಧ ಶಿಕ್ಷಕರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಇನ್ನು ಮುಂತಾದವರು ಉಪಸ್ಥಿತರಿದ್ದರು.
| ReplyReply to allForwardYou can’t react with an emoji to a large group |