ಶಿವಮೊಗ್ಗ : ನಗರದ ಪ್ರತಿಷ್ಠಿತ ದುರ್ಗಿಗುಡಿ ಸರ್ಕಾರಿ ಪ್ರಾಥಮಿಕ ಶಾಲೆಗೆ ದೈಹಿಕ ಶಿಕ್ಷಕರನ್ನು ನೇಮಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳ ಪಾಲಕರು, ಪೋಷಕರು ಇಂದು ಶಾಲೆಯ ಎದುರು ಪ್ರತಿಭಟನೆ ನಡೆಸಿದರು.
ಈ ಶಾಲೆಯಲ್ಲಿ ಸುಮಾರು ೯೭೦ ವಿದ್ಯಾರ್ಥಿಗಳಿದ್ದು ಕಳೆದ ಒಂದೂವರೆ ವರ್ಷಗಳಿಂದ ಈ ಶಾಲೆಯಲ್ಲಿ ದೈಹಿಕ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳು ಕ್ರೀಡಾ, ದೈಹಿಕ ಚಟುವಟಿಕೆಗಳು ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆಯಿಂದ ವಂಚಿತರಾಗಿದ್ದಾರೆ. ಸ್ಥಳೀಯ ಬಿಇಓ, ಡಿಡಿಪಿಐ ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧುಬಂಗಾರಪ್ಪ ಅವರ ಗಮನಕ್ಕೆ ತಂದರೂ ಇಲ್ಲಿಯವರೆಗೂ ದೈಹಿಕ ಶಿಕ್ಷಕರ ನೇಮಕಾತಿಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

ಇತ್ತೀಚೆಗೆ ನೆರೆಯ ಗ್ರಾಮದ ಶಾಲೆಯೊಂದರಿಂದ ದುರ್ಗಿಗುಡಿ ಶಾಲೆಗೆ ದೈಹಿಕ ಶಿಕ್ಷಕರ ನಿಯೋಜನೆಯಾಗಿದೆ ಎಂಬ ಸುದ್ದಿ ಬಂದಿದ್ದು ಅವರೂ ಕೂಡ ಇಂದಿನವರೆಗೂ ಕರ್ತವ್ಯಕ್ಕೆ ಹಾಜರಾಗಲಿಲ್ಲ. ಮೇಲಾಗಿ ಆ ಶಾಲೆಯ ದೈಹಿಕ ಶಿಕ್ಷಕರ ವರ್ಗಾವಣೆಯ ವಿರುದ್ಧ ಅಲ್ಲಿಯ ಪೋಷಕರು ಕೂಡ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾಹಿತಿ ಇದ್ದು, ಬಿಇಓ ಸ್ಥಳಕ್ಕೆ ಆಗಮಿಸಿ ಪೋಷಕರೊಂದಿಗೆ ದುರ್ಗಿಗುಡಿ ಶಾಲೆ ರಾಜ್ಯದಲ್ಲೇ ಹೆಸರುವಾಸಿಯಾಗಿದ್ದು, ಇದು ಮುಂದಿನ ದಿನಗಳಲ್ಲಿ ಕೆಪಿಎಸ್ ಶಾಲೆಯಾಗಿ ಉನ್ನತ ದರ್ಜೆಗೆ ಮಾರ್ಪಾಡಾಗಲಿದ್ದು, ಆಗ ಈ ಎಲ್ಲಾ ಸಮಸ್ಯೆ ಬಗೆಹರಿಯುತ್ತದೆ ಅಲ್ಲಿಯವರೆಗೆ ತಾಳ್ಮೆಯಿಂದಿರಲು ಪೋಷಕರಿಗೆ ಮನವಿ ಮಾಡಿದರು.
ಆದರೆ ಕಳೆದ ಒಂದೂವರೆ ವರ್ಷಗಳಿಂದ ಇದೇ ರೀತಿಯ ನೆಪ ಹೇಳಿ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿದ್ದು, ಕೂಡಲೇ ದೈಹಿಕ ಶಿಕ್ಷಕರನ್ನು ನೇಮಕಾತಿ ಮಾಡುವವರೆಗೆ ನಾವು ಜಾಗಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಎಸ್ಡಿಎಂಸಿ ಸದಸ್ಯರೂ ಕೂಡ ಅವರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ೨೦೦೦ಕ್ಕೂ ಹೆಚ್ಚು ಶಾಲೆಗಳಿದ್ದು ಕೇವಲ ೧೬೦ ದೈಹಿಕ ಶಿಕ್ಷಕರಿರುವುದು ಶಿಕ್ಷಣ ಇಲಾಖೆಯ ದೊಡ್ಡ ದುರಂತವಾಗಿದೆ. ಕೆಪಿಎಸ್ ಶಾಲೆಗಳನ್ನು ಮಾಡುವ ಮೊದಲು ದೈಹಿಕ ಶಿಕ್ಷಕರ ಕೊರತೆಯನ್ನು ಮೊದಲು ನೀಗಿಸಲಿ ಎನ್ನುವುದು ಪೋಷಕರ ಒತ್ತಾಯವಾಗಿದೆ.
ಪ್ರತಿಭಟನೆಯಲ್ಲಿ ಎಸ್ಡಿಎಂಸಿಯ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷೆ ವನಿತಾ, ಪ್ರಮುಖರಾದ ಸುಚಿತಾ, ಸಂಗೀತ, ರಮ್ಯ, ಕಮಲಾ, ಉಮೇಶ, ಅನ್ನಪೂರ್ಣ, ಚೈತ್ರ ಮೊದಲಾದವರಿದ್ದರು.
ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಣದಿಂದ ಸಾವಿರಾರು ಮಕ್ಕಳನ್ನು ವಂಚಿತರನ್ನಾಗಿ ಮಾಡಿದ್ದು ಸರ್ಕಾರದಿಂದ ಆದ ದೊಡ್ಡ ಲೋಪವಾಗಿದೆ. ಇದು ಮಾನವಹಕ್ಕು ಮತ್ತು ಮಕ್ಕಳ ಹಕ್ಕಿನಿಂದ ಮಕ್ಕಳಿಗಾದ ವಂಚನೆಯಾಗಿದ್ದು ಕೂಡಲೇ ಮಹಿಳಾ ಮತ್ತು ಮಕ್ಕಳ ಆಯೋಗ ಮಧ್ಯ ಪ್ರವೇಶಿಸಿ ಶಿಕ್ಷಣ ಇಲಾಖೆಗೆ ಚಾಟಿ ಬೀಸಲೇಬೇಕು. ಹೊಟ್ಟೆಗೆ ಹಿಟ್ಟಿಲ್ಲ. ಜುಟ್ಟಿಗೆ ಮಲ್ಲಿಗೆ ಹೂವು ಅನ್ನುವ ಸ್ಥಿತಿ ಇದಾಗಿದ್ದು ಶಿಕ್ಷಣ ಸಚಿವರ ತವರಿನಲ್ಲೇ ಈ ರೀತಿಯ ದುಸ್ಥಿತಿ ಸರಿಯಲ್ಲ ಎನ್ನುವುದು ಪೋಷಕರ ವಾದ.