ಶಿವಮೊಗ್ಗ: ನಗರದ ಸಾಗರ ರಸ್ತೆಯ ಆಯನೂರು ಗೇಟ್ನಿಂದ ಆಟೋ ಕಾಂಪ್ಲೆಕ್ಸ್ಗೆ ಹೋಗುವ ಭಾರಿ ಮತ್ತು ಇತರೆ ನಾಲ್ಕು ಚಕ್ರ ವಾಹನಗಳು ಆಟೋ ಕಾಂಪ್ಲೆಕ್ಸ್ನ ಮುಖ್ಯ ರಸ್ತೆಯಲ್ಲಿ ಹೋಗಬೇಕಾಗಿದ್ದು, ಪಟೇಲ್ ಸಾಮಿಲ್ ಹಿಂಭಾಗದ ಕಿರಿದಾದ ರಸ್ತೆಯಲ್ಲಿ ಚಲಿಸುತ್ತಿದ್ದು, ಇದರಿಂದ ಅಲ್ಲಿಯ ನಿವಾಸಿಗಳಿಗೆ ತುಂಬಾ ತೊಂದರೆ ಮತ್ತು ಕಿರಿಕಿರಿ ಉಂಟಾಗುತ್ತಿದ್ದು, ಪದೇ ಪದೇ ವಾಹನಗಳು ಜಾಮ್ ಆಗಿ ಓಡಾಡಲು ಕೂಡ ತುಂಬಾ ತೊಂದರೆಯಾಗಿದ್ದು, ಅನೇಕ ಸಾರಿ ವಾಹನಗಳ ಮಧ್ಯೆ ಅಪಘಾತ ಉಂಟಾಗಿರುತ್ತದೆ. ಅಲ್ಲದೆ, ಆ ಪ್ರದೇಶದಲ್ಲಿ ಸಣ್ಣ ಪುಟ್ಟ ಮಕ್ಕಳು ಹಾಗೂ ಶಾಲಾ ಮಕ್ಕಳು ಓಡಾಡುವುದು ದುಸ್ತರವಾಗಿದ್ದು, ಈ ಬಗ್ಗೆ ವಾಹನದ ಮಾಲೀಕರಿಗೆ ಅನೇಕ ಬಾರಿ ಮನವಿ ಮಾಡಿದರೂ

ಅವರ ಮಾರ್ಗವನ್ನು ಬದಲಿಸಿರುವುದಿಲ್ಲ. ಈ ಬಗ್ಗೆ ಅಲ್ಲಿಯ ನಿವಾಸಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ರವರಿಗೆ ಮನವಿ ಸಲ್ಲಿಸಿದ್ದು, ಅವರು ಅಲ್ಲಿನ ಟ್ರಾಫೀಕ್ ವೃತ್ತ ನಿರೀಕ್ಷಕರಾದ ದೇವರಾಜ್ ಇವರಿಗೆ ಸಮಸ್ಯೆಯನ್ನು ಬಗೆಹರಿಸುವಂತೆ ನಿರ್ದೇಶನ ನೀಡಿದ್ದು, ಬುಧವಾರ ವೃತ್ತ ನಿರೀಕ್ಷಕರಾದ ದೇವರಾಜ್ ಇವರು ಮನವಿಗೆ ಕೂಡಲೇ ಸ್ಪಂದಿಸಿ ಅವರ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಪಟೇಲ್ ಸಾಮಿಲ್ ಹಿಂಭಾಗದ ಕಿರು ರಸ್ತೆಯ ಎರಡೂ ಕಡೆಗಳಲ್ಲಿ ಬ್ಯಾರಿಕೇಡ್ ನ್ನು ಹಾಕಿ ನಾಲ್ಕು ಚಕ್ರ ವಾಹನಗಳ ಓಡಾಟವನ್ನು ನಿರ್ಬಂಧಿಸಿರುತ್ತಾರೆ.

ಆದ್ದರಿಂದ ಪಟೇಲ್ ಸಾಮಿಲ್ ಹಿಂಭಾಗದ ಶರಾವತಿ ನಗರ ನಿವಾಸಿಗಳು ತಮ್ಮ ಮನವಿಗೆ ಕೂಡಲೇ ಸ್ಪಂದಿಸಿದ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಇವರಿಗೆ ಹಾಗೂ ಟ್ರಾಫಿಕ್ ವೃತ್ತ ನಿರೀಕ್ಷಕರಾದ ದೇವರಾಜ್ ಮತ್ತು ಅವರ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ ಎಂದು ನಿವಾಸಿಗಳ ಪರವಾಗಿ ಟಿ.ರಮೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.