ಸಾಗರ : ಪದವಿ ಸಂದರ್ಭದಲ್ಲಿ ನಿಮ್ಮ ಆಸಕ್ತಿ ಓದಿನ ಮೇಲಿರಲಿ. ನಿಮ್ಮ ಸಣ್ಣ ತಪ್ಪು ಭವಿಷ್ಯವನ್ನು ಬಲಿ ತೆಗೆದುಕೊಳ್ಳಲೂ ಬಹುದು. ಎಂತಹ ಸಂದರ್ಭದಲ್ಲಿಯೂ ಶಿಕ್ಷಣದ ಮೇಲಿನ ಆಸಕ್ತಿ ಕಳೆದುಕೊಳ್ಳಬೇಡಿ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಸಲಹೆ ನೀಡಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ೨೦೨೫-೨೬ನೇ ಸಾಲಿನ ಕ್ರೀಡೆ ಸಾಂಸ್ಕೃತಿಕ ಎನ್.ಎಸ್.ಎಸ್. ಸೇರಿ ವಿವಿಧ ಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಬಾಹ್ಯಾಕರ್ಷಣೆ ನಿಮ್ಮನ್ನು ದಾರಿ ತಪ್ಪಿಸಬಹುದು. ಮೊಬೈಲ್, ಇಂಟರ್ನೆಟ್ನಂತಹ ಎಲೆಕ್ಟ್ರಾನಿಕ್ ವಸ್ತುಗಳನ್ನು ನಿಮ್ಮ ಏಳಿಗೆಗೆ ಬಳಸಿಕೊಳ್ಳಬೇಕೆ ವಿನಃ, ಅದಕ್ಕೆ ದಾಸರಾಗಿ ತಪ್ಪುದಾರಿಯತ್ತ ಹೋಗಬಾರದು. ನನಗೂ ಪದವಿ ಓದುವ ಅವಕಾಶ ಸಿಕ್ಕಿದ್ದರೆ ಇನ್ಯಾವುದೋ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯವಿತ್ತು. ಆದರೆ ಬಡತನ ನನ್ನಂತ ಅನೇಕ ಜನರ ಶಿಕ್ಷಣ ಮುಂದುವರೆಸಲು ತೊಡಕಾಗಿತ್ತು. ಈಗಿನ ಮಕ್ಕಳಿಗೆ ಶಿಕ್ಷಣ ಮುಂದುವರೆಸಲು ಆರ್ಥಿಕ ಸಮಸ್ಯೆ ಇಲ್ಲ. ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸಿದೆ. ನಿಮಗೆ ವಿದ್ಯಾಭ್ಯಾಸ ಮಾಡಲು ಆರ್ಥಿಕ ಸಮಸ್ಯೆ ಇದ್ದರೆ ನನ್ನನ್ನು ಭೇಟಿಯಾಗಿ, ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.

ಜಗತ್ತಿಗೆ ನಾಯಕತ್ವ ನೀಡುವ ಹಂತಕ್ಕೆ ಭಾರತ ಬೆಳೆದಿದೆ ಎಂದರೆ ನಮ್ಮಲ್ಲಿನ ಶೈಕ್ಷಣಿಕ ಗುಣಮಟ್ಟವೂ ಪ್ರಮುಖ ಕಾರಣವಾಗಿದೆ. ದೊಡ್ಡದೊಡ್ಡ ರಾಷ್ಟ್ರಗಳು ನಮ್ಮ ದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕೆಂಪುಹಾಸು ಹಾಸಿ ಸ್ವಾಗತಿಸುತ್ತಿದೆ. ನಮ್ಮಲ್ಲಿ ಬೌದ್ಧಿಕ ಗುಣಮಟ್ಟ ಉತ್ಕೃಷ್ಟವಾಗಿದೆ. ಬದುಕಿನ ಬಗ್ಗೆ ಭರವಸೆ ಇರಿಸಿಕೊಳ್ಳುವ ಜೊತೆಗೆ ಪೋಷಕರು ಕಂಡ ಕನಸು ನನಸು ಮಾಡಿ. ಪೋಷಕರು ಮಕ್ಕಳ ಶಿಕ್ಷಣದ ಬಗ್ಗೆ ಗಮನ ಹರಿಸಬೇಕು. ಮಕ್ಕಳು ಒಂದು ಹಂತಕ್ಕೆ ಹೋಗಿ ಸೂಕ್ತ ಹೊಣೆಗಾರಿಕೆ ಅರಿಯುವವರೆಗೂ ಅವರ ಬೆನ್ನಿಗೆ ಪೋಷಕರು ಇರಬೇಕು ಎಂದರು.
ರಾಯಚೂರು ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಶಿವಾನಂದ ಕೆಳಗಿನಮನಿ ಮಾತನಾಡಿ, ಪದವಿ ಹಂತದಲ್ಲಿ ಮಕ್ಕಳು ತಪ್ಪಸ್ಸಿನಂತೆ ಶಿಕ್ಷಣದಲ್ಲಿ ತೊಡಗಿಕೊಳ್ಳಬೇಕು. ಮೊಬೈಲ್ಗೆ ದಾಸರಾಗುವ ಬದಲು ಮೊಬೈಲ್ ಮಾದರಿ ಪರಿಕರ ಕಂಡು ಹಿಡಿಯುವ ವಿಜ್ಞಾನಿಗಳಾಗಬೇಕು. ನಿಮ್ಮೊಳಗಿನ ಶಕ್ತಿಯ ಅರಿವು ನಿಮಗೆ ಇರಬೇಕು. ಎಂತಹ ಸಂದರ್ಭದಲ್ಲಿಯೂ ದೃತಿಗೆಡದೆ ಗುರಿ ತಲುಪುವತ್ತ ಗಮನ ಹರಿಸಿ ಎಂದರು.

ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಚೇತನರಾಜ್ ಕಣ್ಣೂರು ಮಾತನಾಡಿದರು. ಪ್ರಾಚಾರ್ಯ ಡಾ. ಸಣ್ಣಹನುಮಪ್ಪ ಜಿ. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಡಾ. ಸುರೇಶ್ ಗೌಡ, ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಸದಸ್ಯರಾದ ಮಧುಮಾಲತಿ, ಗಣಪತಿ ಮಂಡಗಳಲೆ, ಎಲ್.ಚಂದ್ರಪ್ಪ, ಪ್ರಮುಖರಾದ ಐ.ಜಿ.ಪ್ರಕಾಶ್, ಈಳಿ ಶ್ರೀಧರ್, ಯಶೋದಮ್ಮ, ಸಂತೋಷ್ ಸದ್ಗುರು, ಡಾ. ಮಮತಾ ಹೆಗಡೆ, ಡಾ. ಕುಂಸಿ ಉಮೇಶ್ ಇನ್ನಿತರರು ಹಾಜರಿದ್ದರು. ಅಮೃತ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಆಶ್ರಿತಾ ಸ್ವಾಗತಿಸಿದರು. ಪ್ರೊ. ಮೇಘಾ ಪ್ರಾಸ್ತಾವಿಕ ಮಾತನಾಡಿದರು. ಸುಷ್ಮಾ ಮತ್ತು ಅಶ್ವಥ್ ನಿರೂಪಿಸಿದರು. ಚಂದನಾ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.