ಶಿವಮೊಗ್ಗ : ಆಂಬುಲೆನ್ಸ್ನಲ್ಲಿ ಚುನಾವಣೆ ಹಣ ಸಾಗಿಸಲು ನಾನೇನು ರಾಘವೇಂದ್ರ ಅಲ್ಲ ಎಂದು ಸಚಿವ ಮಧುಬಂಗಾರಪ್ಪ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ತಿರುಗೇಟು ನೀಡಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಬಿಹಾರ್ ಚುನಾವಣೆಗೆ ರಾಜ್ಯದಿಂದ ಹಣ ಕಳುಹಿಸಲಾಗಿದೆ ಎಂದು ರಾಘವೇಂದ್ರ ಅವರು ಆರೋಪ ಮಾಡಿದ್ದಾರಲ್ಲಾ ಎಂಬ ಪತ್ರಕರ್ತರ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಅವರು, ನಾನು ರಾಘವೇಂದ್ರ ಅವರ ರೀತಿಯಲ್ಲ, ರಾಘವೇಂದ್ರ ಅವರು ಶಿಕಾರಿಪುರ ಪುರಸಭೆಯಲ್ಲಿದ್ದವರು. ಬಂಗಾರಪ್ಪನವರ ವಿರುದ್ಧ ಗೆಲ್ಲಲು ಅವರಿಗೆ ಯಾವ ಸಾಧನೆ ಇತ್ತು. ಅಲ್ಲದೆ ರಾಘವೇಂದ್ರ ಗೆಲ್ಲಲು ಅವರ ತಂದೆ ಯಡಿಯೂರಪ್ಪನವರು ಆಂಬುಲೆನ್ಸ್ನಲ್ಲಿ, ಪೊಲೀಸ್ ಜೀಪ್ನಲ್ಲಿ ಹಣ ತರಿಸಿದ್ದರು. ಅವರಿಗೆ ಮಾತ್ರ ಈ ಕಲೆಗಳೆಲ್ಲಾ ಗೊತ್ತಾಗಿದೆ. ನಾನು ಬಿಹಾರ ಚುನಾವಣೆಗೆ ಹೋಗಿ ಬಂದಿದ್ದೇನೆ. ಹಾಗಾದರೆ ನಾನು ಅಲ್ಲಿಗೆ ಹಣ ತೆಗೆದುಕೊಂಡು ಹೋಗಿದ್ದೇನೆಯೇ ಅಲ್ಲಿಗೆ ಹಣ ತೆಗೆದುಕೊಂಡು ಹೋಗಲು ನಾನೇನು ಲೂಸಾ… ಎಂದು ತಿರಗೇಟು ನೀಡಿದರು.

ಭಾಗ್ಯಗಳ ಯೋಜನೆಯನ್ನು ಟೀಕಿಸುವ ವಿಜಯೇಂದ್ರ, ರಾಘವೇಂದ್ರ ಅವರಿಗೆ ಗೊತ್ತಿರಲಿ ಅವರ ಮನೆಯ ಕೆಲಸಗಾರರು, ಡ್ರೈವರ್ಗಳು, ಗೃಹಲಕ್ಷ್ಮೀ ಮತ್ತು ಇತರೆ ಯೋಜನೆಗಳಿಗೆ ಅರ್ಜಿ ಹಾಕಿದ್ದಾರೆ. ಬೇಕಾದರೆ ಅವರ ನಂಬರನ್ನು ಕೂಡ ನಾನು ಕೊಡುತ್ತೇನೆ. ಅವರ ಕೆಲಸಗಾರರ ಕುಟುಂಬಗಳು ಸಹ ಗ್ಯಾರೆಂಟಿ ಯೋಜನೆಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಎಂದರು.
ಜಿಎಸ್ಟಿ ಕುರಿತಂತೆ ಮಾತನಾಡಿದ ಅವರು, ಮೋದಿಯವರು ಜಿಎಸ್ಟಿ ಕಡಿಮೆ ಮಾಡಲಾಗಿದೆ ಎಂದು ಘೋಷಿಸುವ ಮೂಲಕ ಮಾತಿನಲ್ಲಿ ಜನರನ್ನು ಮಂಗ ಮಾಡಿದ್ದಾರೆ. ಈಗ ಎಂಟು ವರ್ಷಗಳ ಕಾಲ ಜಿಎಸ್ಟಿಯ ಹೆಸರಲ್ಲಿ ಸುಲಿಗೆ ಆಯಿತಲ್ಲ ಇದನ್ನು ಕೇಳುವವರು ಯಾರು ? ಹೋಗಲಿ ಜಿಎಸ್ಟಿ ಹಣದಲ್ಲಿ ರಾಜ್ಯದ ಪಾಲಿನ ಹಣವನ್ನು ಕೊಟ್ಟರೆ ಹೀಗೆ ದಾರಿ ತಪ್ಪಿಸುವ ವ್ಯವಸ್ಥೆಯನ್ನು ಅವರು ಮಾಡುತ್ತಲೇ ಬಂದಿದ್ದಾರೆ ಎಂದರು.

ಆರ್ಎಸ್ಎಸ್ನ್ನು ಟೀಕಿಸಿದ ಅವರು, ಈ ಆರ್ಎಸ್ಎಸ್ನವರು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದವರೇ ರಾಷ್ಟ್ರಧ್ವಜ, ರಾಷ್ಟ್ರಗೀತೆಯನ್ನು ಪ್ರೀತಿಸುತ್ತಾರಾ, ಮಹಾತ್ಮಗಾಂಧಿಯನ್ನೇ ಹೀಯಾಳಿಸುವ ಇವರಿಗೆ ಭಾರತದ ಸಂವಿಧಾನದ ಅರಿವಿದೆಯಾ ಹೋಗಲಿ ಆರ್.ಎಸ್.ಎಸ್.ನ್ನು ನಿಯಮಬಾಹಿರವಾಗಿ ನೋಂದಣಿ ಮಾಡಿಸಿದ್ದಾರಾ ? ಇದಕ್ಕೆಲ್ಲಾ ಉತ್ತರ ಕೊಡಬೇಕಲ್ಲ. ಜನಗಣಮನವನ್ನೇ ಒಪ್ಪದ ಇವರು ಯಾವ ದೇಶಪ್ರೇಮವನ್ನು ಮೆರೆಯುತ್ತಾರೆ ಎಂದು ಪ್ರಶ್ನೆ ಮಾಡಿದರು.
ನಾವು ಪ್ರಾರಂಭಿಸಲಿರುವ ೮೦೦ ಕೆಪಿಎಸ್ ಶಾಲೆಗಳೇ ಆರ್ಎಸ್ಎಸ್ಗೆ ಉತ್ತರವಾಗುತ್ತವೆ. ಆ ಶಾಲೆಗಳಲ್ಲಿ ಮಕ್ಕಳು ಸಂವಿಧಾನವನ್ನು ಓದುತ್ತಾರೆ. ಶಿಕ್ಷಣವನ್ನು ಕಲಿಯುತ್ತಾರೆ. ಶಾಖೆಗಳಲ್ಲಿ ಹೇಳಿಕೊಟ್ಟಿದ್ದನ್ನು ಮರೆಯುತ್ತಾರೆ. ದೇಶಪ್ರೇಮವೆಂದರೆ ರಾಷ್ಟ್ರಗೀತೆ, ರಾಷ್ಟ್ರಧ್ವಜ ಇವುಗಳನ್ನು ಪ್ರೀತಿಸುವುದು. ವಿರೋಧಿಸುವುದಲ್ಲ ಎಂದರು.
ಹಾಗೆಯೇ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯನ್ನು ಕೂಡ ರಾಘವೇಂದ್ರ, ವಿಜಯೇಂದ್ರ ಇಬ್ಬರೂ ಟೀಕಿಸಿದ್ದರು. ಆದರೆ ಅವರದೇ ಕ್ಷೇತ್ರವಾದ ಶಿಕಾರಿಪುರದಲ್ಲಿ ೯೧.೨೯ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಅವರಿಗೆ ವಿರೋಧ ಮಾಡುವುದಷ್ಟೇ ಗೊತ್ತು. ಅಲ್ಲದೆ ಟೋಲ್ ಹಾಕಲು ಅವರೇ ಪರ್ಮಿಷನ್ ಕೊಟ್ಟಿದ್ದರು. ಆದರೆ ಈಗ ಅವರೇ ಅದನ್ನು ವಿರೋಧಿಸುತ್ತಿದ್ದಾರೆ. ಈ ವಿರೋಧಾಬಾಸಗಳು ಏಕೆಂದೇ ಅರ್ಥವಾಗುತ್ತಿಲ್ಲ.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಪ್ರಮುಖರಾದ ಎಸ್.ಟಿ. ಹಾಲಪ್ಪ, ರಮೇಶ್ ಶಂಕರಘಟ್ಟ, ವೈ.ಹೆಚ್. ನಾಗರಾಜ್, ಜಿ.ಡಿ. ಮಂಜುನಾಥ್, ಕಲಗೋಡು ರತ್ನಾಕರ್ ಸೇರಿದಂತೆ ಹಲವರಿದ್ದರು.