ಶಿವಮೊಗ್ಗ : ನಗರದ ಮೆಗ್ಗಾನ್ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದ್ದು, ಇದನ್ನು ತಕ್ಷಣವೇ ಸರಿಪಡಿಸಬೇಕೆಂದು ಒತ್ತಾಯಿಸಿ ಇಂದಿನಿಂದ ನಾಳೆ ಸಂಜೆ ೪ಗಂಟೆಯವರೆಗೆ ಮೆಗ್ಗಾನ್ ಬೋದನಾ ವೈದ್ಯಕೀಯ ಕಾಲೇಜು ಮುಂಭಾಗ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣ ಗೌಡ ಬಣ) ಜಿಲ್ಲಾ ಘಟಕದ ವತಿಯಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಯಿತು.
ಶಿವಮೊಗ್ಗ ಸೇರಿ ನೆರೆ ಹೊರೆಯ ಜಿಲ್ಲೆಗಳ ಬಡ ಜನರಿಗೆ ಮೆಗ್ಗಾನ್ ಆಸ್ಪತ್ರೆ ಸಂಜಿವೀನಿಯಾಗಿದೆ. ಆದರೆ ಆಸ್ಪತ್ರೆ ಆಡಳಿತ ವ್ಯವಸ್ಥೆಯಿಂದ ಈಗ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಬಡ ರೋಗಿಗಳಿಗೆ ಸರಿಯಾದ ಚಿಕಿತ್ಸಾ ಸೌಲಭ್ಯ ಸಿಗುತ್ತಿಲ್ಲ. ವೈದ್ಯರು ಕೂಡ ಸರಿ ಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಓಪಿಡಿಯಲ್ಲಿ ನೂರಾರು ರೋಗಿಗಳು ಪ್ರತಿನಿತ್ಯ ಔಷಧಿಗಾಗಿ ಕಾಯಬೇಕಾಗಿದೆ. ಸಿಬ್ಬಂದಿಗಳನ್ನು ಮತ್ತು ತಜ್ಞವೈದ್ಯರನ್ನು ಹೆಚ್ಚಿಸಬೇಕು. ಮೆಗ್ಗಾನ್ ಅನ್ನು ನಂಬಿಕೊಂಡು ಬಂದ ಬಡ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ಸಂಘಟನೆ ಆಗ್ರಹಿಸಿದೆ.

ಬಡ ರೋಗಿಗಳ ಹಿತದೃಷ್ಟಿಯಿಂದ ಆಸ್ಪತ್ರೆ ವ್ಯವಸ್ಥೆ ಸರಿಯಾಗಬೇಕು. ಅದರೊಂದಿಗೆ ಪ್ರತ್ಯೇಕವಾಗಿ ಜಿಲ್ಲಾ ಆಸ್ಪತ್ರೆ ಮಾಡಬೇಕೆಂದು ಕೂಡ ನಮ್ಮ ಪ್ರಮುಖ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಶಾಸಕರು, ಸಚಿವರು ಮತ್ತು ಮುಖ್ಯ ಮಂತ್ರಿಗಳನ್ನು ಒತ್ತಾಯಿಸಿ ಎರಡು ದಿನ ಧರಣಿ ಹಮ್ಮಿಕೊಂಡಿದ್ದೇವೆ. ಕರವೇ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡರ ಕರೆಯ ಹಿನ್ನೆಲೆಯಲ್ಲಿ ಧರಣಿ ಹಮ್ಮಿ ಕೊಳ್ಳಲಾಗಿದೆ ಕೂಡಲೇ ಸಿಮ್ಸ್ ಆಡಳಿತ ಮಂಡಳಿ ಮತ್ತು ಸರ್ಕಾರ ತುರ್ತುಕ್ರಮವಹಿಸಿ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್, ಮಧು ಎಸ್., ಮಂಜು, ಶೈಲೇಶ್, ಲೋಕೇಶ್, ಗೀತಾ, ರವಿಕುಮಾರ್, ಪ್ರಶಾಂತ್, ಗೀತಾ ಸೇರಿ ದಂತೆ ಮತ್ತಿತರರು ಇದ್ದರು.