ಶಿವಮೊಗ್ಗ : ಸಂವಿಧಾನದ ಆಶಯಗಳನ್ನೇ ಆರ್ಎಸ್ಎಸ್ ಹೊಂದಿದ್ದರೂ ಕೂಡ ಕಾಂಗ್ರೆಸ್ಸಿನ ಕೆಲ ಮುಖಂಡರು ಇದನ್ನು ನಿಷೇದಿಸುವಂತೆ ಮುಖ್ಯಮಂತ್ರಗಳಿಗೆ ಪತ್ರ ಬರೆದಿರುವುದು ಖಂಡನೀಯ. ಅವರು ಸಂವಿಧಾನವನ್ನು ಮತ್ತೊಮ್ಮೆ ಓದಲಿ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಆರ್.ಕೆ. ಸಿದ್ಧರಾಮಣ್ಣ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ ಪ್ರಿಯಾಂಕ ಖರ್ಗೆಯವರು ಇತ್ತೀಚೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಂವಿಧಾನ ಬಾಹಿರ ಚಟುವಟಿಕೆಗಳಲ್ಲಿ ತೊಡಗಿದೆ. ಆದುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಇದರ ಚಟುವಟಿಕೆಗಳನ್ನು ನಿಷೇದಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ‘ನಡವಳಿ’ ಪತ್ರವೊಂದನ್ನು ಬರೆದಿದ್ದು, ಸಂಘದ ಬಗ್ಗೆ ದ್ವೇಷ ಭಾವನೆ ಬಿಟ್ಟರೆ ಈ ಪತ್ರದಲ್ಲಿ ಬೇರೇನೂ ಇಲ್ಲ ಎಂದು ಕುಟುಕಿದರು.

ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳು ಕರೆದ ಔತಣ ಕೂಟದಲ್ಲಿಯೂ ಆರ್ಎಸ್ಎಸ್ ನಿಷೇಧದ ಬಗ್ಗೆ ಚರ್ಚೆಯಾಯಿತು ಎಂದು ವಿಷಯ ಮಾಧ್ಯಮಗಳಿಂದ ತಿಳಿಯಿತು. ೧೯೨೫ರ ವಿಜಯದಶಮಿಯಂದು ಆರಂಭವಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳು ಮೊನ್ನೆ ವಿಜಯದಶಮಿ ಆಚರಣೆಯವರೆಗೂ ಮುಂದುವರಿದಿದ್ದಲ್ಲದೆ ಇನ್ನು ಮುಂದೆಯೂ ಇದರ ಚಟುವಟಿಕೆಗಳು ಮುಂದುವರಿಯುತ್ತವೆ. ಈ ದೇಶದ ಪ್ರಜಾಪ್ರಭುತ್ವ, ಜಾತ್ಯಾತೀತತೆ, ಭ್ರಾತೃತ್ವ ಉಳಿಸುವುದೇ ಆರ್ಎಸ್ಎಸ್ನ ಮೂಲ ಉದ್ದೇಶವಾಗಿದೆ. ಸಂಘ ಹೇಳುವ ವಿಚಾರ ಸಂವಿಧಾನದಲ್ಲಿ ಹೇಳುವ ವಿಚಾರವೇ ಆಗಿದೆ. ‘ಹಿಂದೂ’ ಯಾವುದೇ ಮತ, ಪಂಥ ಅಲ್ಲ, ಇದು ಭಾರತೀಯ, ಸನಾತನ, ಹಿಂದೂ ಎಂಬ ಅನೇಕ ಹೆಸರಿನಿಂದ ಕರೆಯಲ್ಪಡುತ್ತದೆ ಅಷ್ಟೇ ಎಂದರು.

ಪ್ರಿಯಾಂಕ ಖರ್ಗೆ ಬರೆದಿರುವ ಪತ್ರ ರಾಜಕೀಯವಾಗಿ ಯೋಚನೆ ಮಾಡುವುದೇ ಹೊರತು, ಬೇರೇನೂ ಇಲ್ಲ. ಸಂಘದ ಚಟುವಟಿಕೆ ವಿಭಜಕ ಚಟುವಟಿಕೆ ಅಲ್ಲ, ಇದು ಜನರನ್ನು, ಸಮಾಜವನ್ನು ಜೋಡಿಸುವ ಚಟುವಟಿಕೆಯಾಗಿದೆ. ಖರ್ಗೆ ಅವರು ಪತ್ರದಲ್ಲಿ ಉಲ್ಲೇಖಿಸಿರುವ ‘ದೊಣ್ಣೆ’ ಆರ್ಮ್ಡ್ ಕಾಯ್ದೆಯಲ್ಲಿ ಬರುವುದಿಲ್ಲ. ದೊಣ್ಣೆ, ಕತ್ತಿ, ಚಾಕು ಮೊದಲಾದವುಗಳನ್ನು ಗರಡಿಮನೆಯಲ್ಲಿ ವ್ಯಾಯಾಮಕ್ಕೋಸ್ಕರ, ರೈತರು ತಮ್ಮ ಹೊಲಗಳ ಕೆಲಸಕ್ಕೋಸ್ಕರ, ಮಹಿಳೆಯರು ತಮ್ಮ ಅಡುಗೆಮನೆ ಕೆಲಸಕ್ಕೋಸ್ಕರ ಉಪಯೋಗಿಸುತ್ತಾರೆಯೇ ಹೊರತು ಸಮಾಜದಲ್ಲಿ ವಿದ್ವಂಸಕ ಕೃತ್ಯಕ್ಕೆ ಇವುಗಳನ್ನು ಉಪಯೋಗಿಸುವುದಿಲ್ಲ ಎಂಬ ತಿಳುವಳಿಕೆ ಪ್ರಿಯಾಂಕ ಅವರಿಗೆ ಇಲ್ಲದೆ ಇರುವುದು ದುರದೃಷ್ಟಕರ ಎಂದರು.
ಅಲ್ಲಾಹು ಅಕ್ಬರ್ ಪಾಕಿಸ್ತಾನ್ ಜಿಂದಾಬಾದ್ ಮುಂತಾದ ರಾಷ್ಟ್ರವಿರೋಧಿ ಘೋಷಣೆಗಳು ಇವರಿಗೆ ಏನೂ ಆಗುವುದಿಲ್ಲ. ಓಟ್ಬ್ಯಾಂಕ್ ಭಾವನೆ ಇವರಲ್ಲಿ ತುಂಬಿಕೊಂಡಿದೆ ಎಂದ ಅವರು, ರಾಷ್ಟ್ರೀಯ ವಿಚಾರಕ್ಕೆ ಧಕ್ಕೆತರುವ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಧಕ್ಕೆತರುವ ಯಾವ ಕೆಲಸವನ್ನು ಆರ್ಎಸ್ಎಸ್ ಮಾಡಿಲ್ಲ ಇದನ್ನು ಆರ್ಎಸ್ಎಸ್ ವಿರೋಧಿಸುವವರ ಗಮನಿಸಬೇಕು ಎಂದರು.
ಆರ್ಎಸ್ಎಸ್ ವಿರೋಧಿಸುವವರು ದೇಶದ ಯಾವುದೇ ಸ್ಥಳಕ್ಕೆ ಹೋದರೂ ಅಲ್ಲಿ ಒಂದು ಆರ್ಎಸ್ಎಸ್ ನಿತ್ಯಶಾಖೆ ನಡೆಯುತ್ತಿರುತ್ತದೆ. ಆ ಶಾಖೆಗಳಿಗೆ ಭೇಟಿನೀಡಿ ಆರ್ಎಸ್ಎಸ್ನ ಕಾರ್ಯಚಟುವಟಿಕೆಗಳನ್ನು ಗಮನಿಸಲಿ ಎಂದು ಸಲಹೆ ನೀಡಿದರು.
ಪ್ರಿಯಾಂಕ್ಖರ್ಗೆ ಅವರು ತಮ್ಮ ಪತ್ರದಲ್ಲಿ ‘ನಡವಳಿ’ ಎಂಬ ಪದವನ್ನು ಅದರ ಶಿರೋನಾಮೆಯಲ್ಲಿ ಉಲ್ಲೇಖಿಸಿದ್ದು, ಆ ನಡವಳಿ ಏನು ಎಂಬುದನ್ನು ಅವರೇ ಹೇಳಬೇಕು. ಯಾವ ವಿಷಯ ಯಾರ ಮುಂದೆ ಚರ್ಚೆಯಾಯಿತು ಎಂಬುದನ್ನು ಅವರೇ ಉತ್ತರಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ|| ಧನಂಜಯ ಸರ್ಜಿ, ಪ್ರಮುಖರಾದ ಎಸ್. ದತ್ತಾತ್ರಿ, ಮೋಹನ್ರೆಡ್ಡಿ, ಮಂಜುನಾಥ್ ನವಿಲೆ, ಹರಿಕೃಷ್ಣ, ಶ್ರೀನಾಥ್, ಕೆ.ವಿ. ಅಣ್ಣಪ್ಪ, ಚಂದ್ರಶೇಖರ್, ಮುರಳಿ, ಹರೀಶ್ ಇದ್ದರು.