ಸಾಂದರ್ಬಿಕ ಚಿತ್ರಗಳು- ಸಾಮಾಜಿಕ ಜಾಲತಾಣದ್ದು

ಹುಡುಕಾಟದ ವರದಿ
ಶಿವಮೊಗ್ಗ, ಅ.06:
ಮಿತಿಮೀರಿದ ಗಾಂಜಾ ಸೇವನೆ ಹಾಗೂ ಮಾರಾಟದಿಂದ ಶಿವಮೊಗ್ಗ ನಗರದಲ್ಲಿ ಅಶಾಂತಿಯ ವಾತಾವರಣ ಮೂಡಿದ್ದು, ಇಡೀ ಶಿವಮೊಗ್ಗ ಭಯದ ವಾತಾವರಣದಲ್ಲಿ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಸಾಗರ ರಸ್ತೆ, ಓಟಿ ರಸ್ತೆ, ಊರಗಡೂರು, ಗಾಂಧಿಬಜಾರ್ ಸೇರಿದಂತೆ ವಿವಿಧ ಭಾಗಗಳ ಜನರ ನೇರ ಆರೋಪ.

ಗಾಂಜಾ ಸೇವಿಸಿ ಎದುರಿಗೆ ಬಂದವರ ವಿರುದ್ಧ ಅಕ್ರಮವಾಗಿ ಬೆದರಿಕೆ ಹಾಕುವ ಹಾಗೂ ಹಲ್ಲೆ ನಡೆಸುವ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿದ್ದು, ನಿನ್ನೆ ರಾತ್ರಿ 11:00 ಗಂಟೆಗೆ ಸಾಗರ ರಸ್ತೆಯ ಭಾರ್ಗವಿ ಪೆಟ್ರೋಲ್ ಬಂಕ್ ಎದುರು ಇಬ್ಬರು ತಳವಾರ್ ಜೊತೆ ಕೇಕೆ ಹೊಡೆಯುತ್ತಾ, ಅಲ್ಲಿ ನಿಂತಿದ್ದ ವಾಹನಗಳನ್ನು ಜಖಂಗೊಳಿಸುತ್ತಾ, ಜನರನ್ನು ಬೆದರಿಸುತ್ತಿದ್ದ ಘಟನೆಗೆ ಅಲ್ಲಿದ್ದ ಜನ ನಿಜಕ್ಕೂ ಬೆದರಿದ್ದಾರೆ. ಜೀವಭಯದಿಂದ ಓಡಿ ಹೋಗಿದ್ದಾರೆ.

ಶಿವಮೊಗ್ಗ ಓಟಿ ರಸ್ತೆಯಲ್ಲಿ ಸಂಜೆ ಐದು ಗಂಟೆಯಿಂದ ನಿತ್ಯ ಆರಂಭಗೊಳ್ಳುವ ಈ ತಲವಾರುಗಳ ನರ್ತನ ಹಾಗೂ ಬೆದರಿಕೆ ಹಾಕುವವರ ವರ್ತನೆ ಇಡೀ ಆ ಭಾಗದ ಜನರ ಮನಸ್ಥಿತಿಯನ್ನು ಪ್ರಶ್ನಿಸುವಂತೆ ಮಾಡಿದೆ ಹಾಗೂ ಮರ್ಯಾದೆಯಿಂದ ಮನೆಯಲ್ಲಿ ಇರೋಣ ನಮಗೆ ಯಾಕೆ ಈ ಉಸಾಬಾರೀ ಎನ್ನುತ್ತಾ ಒಂದಿಷ್ಟು ಭಯದ ವಾತಾವರಣದಲ್ಲಿ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಆ ಭಾಗದ ಜನರ ನೋವಿನ ನುಡಿ.

ಇತ್ತೀಚಿನ ಕೆಲದಿನಗಳಿಂದ ನಡೆಯುತ್ತಿರುವ ಘಟನೆಗಳು ನೂರಾರು ಅನುಮಾನಗಳನ್ನು ಹುಟ್ಟು ಹಾಕಿದ್ದು, ಗಾಂಜಾ ಅತ್ಯಂತ ಸುಲಭವಾಗಿ ಈ ಪುಡಾರಿಗಳ ಕೈಗೆ ಸಿಗುತ್ತಿದೆ ಎಂಬುದು ಮತ್ತೊಂದು ಆರೋಪ. ನಗರದ ಎನ್ ಟಿ ರಸ್ತೆಯಲ್ಲಿ ಕಳೆದ ಗುರುವಾರ ಹಲ್ಲೆಗೆ ಒಳಗಾಗಿದ್ದ ಓರ್ವ ಸಾವು ಕಂಡ ನಂತರ ನಿನ್ನೆ ಭಾನುವಾರ ವೈಯಕ್ತಿಕ ಕಾರಣದಿಂದ ಇಬ್ಬರು ಮಾರಕಾಸ್ತ್ರಗಳಿಂದ ಹಲ್ಲೇ ನಡೆಸಿದ ಘಟನೆ ಊರಗಡೂರಿನಲ್ಲಿ ನಡೆದಿದೆ. ಅವರ ಪರ್ಸನಲ್ ಏನೇ ಇರಲಿ, ಆದರೆ ಪಕ್ಕದಲ್ಲಿರುವವರ ಪರಿಸ್ಥಿತಿ ಏನು?

ನಾವು ಯಾರನ್ನು ಮಾತನಾಡಿಸಬೇಕು? ಯಾರ ಜೊತೆ ಹೇಗಿರಬೇಕು ಎಂಬುದೇ ಅನುಮಾನ ಬರುವಂತಹ ವಾತಾವರಣ ಬಹಳಷ್ಟು ಜನರನ್ನು ಕಾಡುತ್ತಿದ್ದು, ಇದಕ್ಕೆ ಪೂರಕವಾಗಿ ಗಾಂಜಾ ಸೇವಿಸಿದವರ ವರ್ತನೆಯನ್ನು ಗಮನಿಸಬಹುದಾಗಿದೆ. ಅವರ ಹತ್ತಿರ ಹೋಗಲು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ ಎಂಬುದು ಈ ರಸ್ತೆಯ ಅಂಗಡಿ ಮುಂಗಟ್ಟುಗಳ ಪುಟ್ಟ ಪುಟ್ಟ ಮಾಲೀಕರ ಅಳಲು. ನಾವು ದೂರು ನೀಡಿದರೆ ಮಾರನೇ ದಿನ ನಾವು ಇಲ್ಲಿ ಉಳಿಯುವುದಿಲ್ಲ, ಹಾಗೆ ಬೆದರಿಸುತ್ತಾರೆ ಇಲ್ಲವೇ ನಮ್ಮ ಅಂಗಡಿಯನ್ನು ದ್ವಂಸ ಮಾಡಿಬಿಡುತ್ತಾರೆ ಎಂಬುದು ಇವರ ಆರೋಪ.
ತುಂಗಾ ನಗರ ಹಾಗೂ ದೊಡ್ಡಪೇಟೆ, ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆಗಳು ಹೆಚ್ಚಾಗಿ ನಡೆಯುತ್ತಿದ್ದು, ಇದು ವಿನೋಬನಗರ ವ್ಯಾಪ್ತಿಯಲ್ಲೂ ಸಹ ಕಂಡುಬರುತ್ತದೆ ಎಂಬುದು ಮತ್ತೊಂದು ಆರೋಪ.

ಇಲ್ಲಿ ದುರುದ್ದೇಶದಿಂದ ಅಥವಾ ಅನಗತ್ಯವಾಗಿ ಪೊಲೀಸರನ್ನು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವವರನ್ನು ಪ್ರಶ್ನಿಸುತ್ತಿಲ್ಲ. ಸಾರ್ವಜನಿಕರ ನಿರಂತರ ದೂರುಗಳನ್ನು ಆಲಿಸಿದಾಗ ಪತ್ರಿಕೆ ಒಂದು ಚಿಕ್ಕ ಚೌಕಟ್ಟನ್ನು ನೀಡುವ ಪ್ರಯತ್ನವನ್ನು ಮಾಡಿದೆ.
ಎಲ್ಲೆಂದರಲ್ಲಿ ಮರಿ ಪುಡಾರಿ ರೌಡಿಗಳ ಹಾವಳಿ ಹೆಚ್ಚಾಗುತ್ತಿದ್ದು, ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಹೊಸ ಹೊಸ ಬಡಾವಣೆಗಳ ಸ್ಥಳದಲ್ಲಿ ಅಕ್ರಮ ಅಡ್ಡೆಗಳನ್ನು ಮಾಡಿಕೊಂಡಿದ್ದವರನ್ನು ಪತ್ತೆ ಹಚ್ಚಿ ಬಡಿದು ಬಾರಿಸುವ ಕೆಲಸವನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ್ದರು. ಈಗ ಅಂತಹ ಅಕ್ರಮ ಚಟುವಟಿಕೆಗಳು ಖಾಲಿ ನಿವೇಶನಗಳ ಬಳಿ ನಡೆಯುತ್ತಿಲ್ಲ ಎನ್ನಲು ಸಾಧ್ಯವಿಲ್ಲ. ಆದರೆ ಆ ಪ್ರಮಾಣ ಸ್ವಲ್ಪ ಕುಗ್ಗಿದೆ ಅಷ್ಟೇ. ಆದರೆ ಈ ಅಕ್ರಮ ದಂದೆಗಳು ಹಾಗೂ ಗಾಂಜಾ ಸೇವಿಸಿ ಮಾಡುವಂತಹ ರ್ದುವರ್ತನೆಗಳು ಜನರು ಇರುವ ಸ್ಥಳದಲ್ಲಿಯೇ ನಡೆಯುತ್ತಿರುವುದು ನಿಜಕ್ಕೂ ಜನರಲ್ಲಿ ಆತಂಕ ಹಾಗೂ ಭಯರ ವಾತಾವರಣವನ್ನು ನಿರ್ಮಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಈ ಕೂಡಲೇ ಜಿಲ್ಲಾ ರಕ್ಷಣಾಧಿಕಾರಿಗಳು ಪೊಲೀಸರ ತುರ್ತು ಸಭೆ ಕರೆದು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಕ್ರಮ ಚಟುವಟಿಕೆಗಳಲ್ಲಿರುವವರನ್ನು ಹಾಗೂ ಗಾಂಜಾ ಸೇವಿಸುವವರನ್ನು ಹಾಗೂ ಗಾಂಜಾ ಮಾರುವವರನ್ನು ಮತ್ತು ಮಾರಕಾಸ್ತ್ರಗಳನ್ನು ಪ್ರದರ್ಶಿಸುವವರನ್ನು ಬಡಿದು ಬಾರಿಸಬೇಕು. ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಪಬ್ಲಿಕ್ ಅಗ್ರಹ. ಇತ್ತ ಪೊಲೀಸ್ ಇಲಾಖೆ ಗಮನಹರಿಸಲಿ ಎಂಬುದು ಪ್ರೀತಿಯ ಮನವಿ.