ಸಾಗರ : ವಿಪರೀತ ಸಾಲ ಮಾಡಿಕೊಂಡು ಜೀವನ ನಡೆಸಲು ಸಾಧ್ಯವೇ ಇಲ್ಲ ಎಂದು ಬೆಂಗಳೂರಿನ ವ್ಯಕ್ತಿಯೊಬ್ಬ ಜೋಗ ಜಲಪಾತದಿಂದ ಬಿದ್ದು ಸಾಯಲು ಬಂದಿದ್ದಾಗ ಪೊಲೀಸರು ಮಾಹಿತಿ ಪಡೆದು ಆತನನ್ನು ಸಾವಿನಿಂದ ಬಚಾವ್ ಮಾಡಿದ ಘಟನೆ ಬುಧವಾರ ನಡೆದಿದೆ.

ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಪ್ರದೀಪ್ ಎಂಬಾತ ಬುಧವಾರ ಜೋಗಕ್ಕೆ ಆಗಮಿಸಿದ್ದಾನೆ. ಜೋಗದ ಆಟೋ ಚಾಲಕ ಸಿಯಾಬ್ ಎಂಬುವವರ ಹತ್ತಿರ ಜೋಗ್ಫಾಲ್ಸ್ನ ಅತಿ ಅಪಾಯಕಾರಿ ಸ್ಥಳ ಯಾವುದು ಎಂದು ವಿಚಾರಿಸಿದ್ದಾನೆ. ಪ್ರದೀಪ್ ಚಲನವಲನದ ಬಗ್ಗೆ ಅನುಮಾನ ಬಂದ ಆಟೋ ಚಾಲಕ ಸಿಯಾಬ್ ವಿಷಯವನ್ನು ಜೋಗದಲ್ಲಿ ಬಂದೋಬಸ್ತು ನಿರ್ವಹಿಸುತ್ತಿದ್ದ ಪೊಲೀಸರಿಗೆ ತಿಳಿಸಿದ್ದಾನೆ.

ಪೊಲೀಸರು ಅಪಾಯಕಾರಿ ಸ್ಥಳಕ್ಕೆ ಹೋಗುತ್ತಿದ್ದ ಪ್ರದೀಪ್ನನ್ನು ಜೀಪಿನಲ್ಲಿ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಗೆ ಒಳಪಡಿಸಿದಾಗ ಪ್ರದೀಪ್ ಎಂಬಾತ ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದು, ೨೫ರಿಂದ ೩೦ ಲಕ್ಷ ರೂಪಾಯಿ ಸಾಲ

ಮಾಡಿಕೊಂಡಿದ್ದನು. ತಂದೆ ತಾಯಿ ಆರೋಗ್ಯ ಸರಿ ಇಲ್ಲದೆ ಇರುವುದರಿಂದ ಅವರ ಆರೋಗ್ಯಕ್ಕಾಗಿ ಸಾಲ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ.
ವ್ಯಾಪಾರದಲ್ಲಿ ನಷ್ಟ. ಮನೆಯಲ್ಲಿ ಸಂಕಷ್ಟ ಇದ್ದುದ್ದರಿಂದ ಪ್ರದೀಪ್ ಜೀವನದಲ್ಲಿ ಜಿಗುಪ್ಸೆಗೊಂಡು ೨೦ ದಿನಗಳ ಹಿಂದೆ ಮನೆ ಬಿಟ್ಟು ಬಂದಿದ್ದನು. ಬೇರೆಬೇರೆ ಕಡೆ ತಿರುಗಿ ಅಂತಿಮವಾಗಿ ಆತ್ಮಹತ್ಯೆ ನಿರ್ಧಾರ ಮಾಡಿ ಜೋಗಕ್ಕೆ ಬಂದಿದ್ದನು. ಜೋಗ್ಫಾಲ್ಸ್ನ ಅಪಾಯಕಾರಿ ಸ್ಥಳಕ್ಕೆ ಹೋಗುವಾಗ ಪೊಲೀಸರು ಮನವೊಲಿಸಿ ಕರೆದು ಕೊಂಡು ಬಂದಿದ್ದಾರೆ.

ನಂತರ ಪ್ರದೀಪ್ ತಂದೆತಾಯಿಗೆ ಫೋನ್ ಮಾಡಿ ಧೈರ್ಯ ತುಂಬಿ ಆತನನ್ನು ಪುನಃ ಬೆಂಗಳೂರಿಗೆ ಕಳಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದರೆ. ಸಾಯುವ ನಿರ್ಧಾರದಿಂದ ಬಂದಿದ್ದ ವ್ಯಕ್ತಿಯೊಬ್ಬನಿಗೆ ಮಾನಸಿಕ ಸ್ಥೈರ್ಯ ತುಂಬಿ ಮನವೊಲಿಸಿ ಆತನನ್ನು ಬದುಕಿಸಿದ ಸಬ್ ಇನ್ಸ್ಪೆಕ್ಟರ್ ನಾಗರಾಜ್ ಎಚ್.ಎನ್., ಸಿಬ್ಬಂದಿಗಳಾದ ಅಣ್ಣಪ್ಪ, ಜಯೇಂದ್ರ, ಮಲ್ಲಪ್ಪ ಅವರಿಗೆ ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದ್ದಾರೆ