ಶಿವಮೊಗ್ಗ: ಯಾವುದೇ ಸರ್ಕಾರಗಳು ಬಂದರೂ ಕೂಡ ರೈತರಿಗೆ ಕನಿಷ್ಟ ಬೆಂಬಲ ಬೆಲೆ ನೀಡುವಲ್ಲಿ ವಿಫಲವಾಗಿದ್ದು, ಇಡೀ ದೇಶದಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ರೈತರು ಸಿದ್ಧರಾಗಬೇಕು ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಅವರು ಇಂದು ನಗರದ ಅಂಬೇಡ್ಕರ್ ಭವನದಲ್ಲಿ ರೈತ ಸಂಘ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ರೈತಸಂಘದ ಸಂಸ್ಥಾಪಕ ಹೆಚ್.ಎಸ್. ರುದ್ರಪ್ಪನವರ ಸವಿನೆನಪಿನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಸಿರು ವಸ್ತ್ರ ಧರಿಸಿ ರೈತರನ್ನು ಸಂಘಟಿಸಿ ರೈತರ ಜವಾಬ್ದಾರಿ ಏನು ಎಂದು ಹೆಚ್.ಎಸ್.ರುದ್ರಪ್ಪನವರಂತಹ ನಾಯಕರು ನಮಗೆ ತಿಳಿಸಿದ್ದಾರೆ. ಅವರು ಸ್ವಾತಂತ್ರ್ಯ ಚಳವಳಿಯಿಂದ ಬಂದವರು. ಈ ಮಲೆನಾಡು ಪ್ರಾಂತ್ಯದಲ್ಲಿ ಸ್ವಾತಂತ್ರ್ಯದ ಸೊಗಡಿನ ಕಿಚ್ಚು ಹಚ್ಚಿದವರು. ರೈತರನ್ನು ಸಂಘಟಿಸಿ ಸರಿಯಾದ ವಿಚಾರಗಳನ್ನು ಬಿತ್ತಲು ಅಂತಹ ಮಹನೀಯರ ವಿಚಾರಧಾರೆಗಳನ್ನು ಅನುಕರಣೆ ಮಾಡುವುದು ಅನಿವಾರ್ಯವಿದೆ ಎಂದರು.

೧೯೪೨ರಲ್ಲಿ ಬರಗಾಲದಲ್ಲಿ ದೇಶದ ೧೦ ಸಾವಿರಕ್ಕೂ ಹೆಚ್ಚು ರೈತರು ಸಾವನ್ನಪ್ಪಿದಾಗ ಅಮೆರಿಕ, ವಿಯೆಟ್ನಾಂ ಮೇಲೆ ಯುದ್ಧ ಸಾರಿ ನಾಶ ಮಾಡಿತ್ತು. ಅದೇ ಸಂದರ್ಭದಲ್ಲಿ ಭಾರತಕ್ಕೆ ಕೆಂಪು ಜೋಳ ಮತ್ತು ಗೋಧಿಯನ್ನು ಸಹಾಯದ ರೂಪದಲ್ಲಿ ನೀಡುತ್ತಿತ್ತು. ಆಗ ಪತ್ರಕರ್ತರೊಬ್ಬರು ನಮ್ಮ ದೇಶದ ಪ್ರಧಾನಿಗೆ ಪ್ರಶ್ನೆ ಕೇಳಿ ಅಮೆರಿಕದ ನಡೆಯ ಬಗ್ಗೆ ಕೇಳಿದಾಗ ನಮ್ಮ ಪ್ರಧಾನಿ ಅಮೆರಿಕದ ವಿರುದ್ಧ ಒಂದೇ ಒಂದು ಹೇಳಿಕೆ ನೀಡಿದ್ದಕ್ಕೆ ಅಂತಹ ಬರಗಾಲದ ಸಂದರ್ಭದಲ್ಲೂ ದೇಶಕ್ಕೆ ಬಂದ ಸಾವಿರಾರು ಟನ್ ಆಹಾರವನ್ನು ಅಮೆರಿಕ ವಾಪಸ್ ಪಡೆಯಿತು. ಇದು ನಮ್ಮ ದೇಶಕ್ಕೆ ಸ್ವಾವಲಂಬನೆಗೆ ದಾರಿ ಮಾಡಿಕೊಟ್ಟಿತು ಎಂದರು

ಹಲವು ಸರ್ಕಾರಗಳು ಬಂದು ಹೋದರೂ ಹಲವಾರು ರೈತರ ಆತ್ಮಹತ್ಯೆಗಳಾಯಿತು. ಇದಕ್ಕೆ ಪರಿಹಾರ ಏನು ಎಂದು ಕಂಡು ಹಿಡಿಯಲು ಕೃಷಿ ವಿಜ್ಞಾನಿ ಸ್ವಾಮಿನಾಥನ್ ಅಧ್ಯಕ್ಷತೆಯ ಆಯೋಗ ರಚನೆಯಾಯಿತು. ಅವರು ರೈತರ ಸಮಸ್ಯೆ ಬಗೆಹರಿಯಬೇಕಾದರೆ ರೈತ ಬೆಳೆದ ಬೆಳೆಗೆ ಉತ್ಪಾದನಾ ವೆಚ್ಚಕ್ಕಿಂತ ಒಂದೂವರೆ ಪಟ್ಟಿನಷ್ಟು ಹೆಚ್ಚಿನ ಬೆಲೆ ನೀಡಬೇಕು. ಸಿ೨ ಪ್ಲಸ್ ೫೦ ನೀಡಬೇಕು ಎಂದರು.
ರೈತರ ಆರ್ಥಿಕ ಸ್ಥಿತಿ ಸುಧಾರಣೆ ಆಗಬೇಕಾದರೆ ಬೆಂಬಲಬೆಲೆಗೆ ಸ್ವಾಮಿನಾಥನ್ ಶಿಫಾರಸು ಮಾಡಿದರು. ಆದರೆ, ೨೫ ವರ್ಷಗಳಾದರೂ ಅದು ಜಾರಿಗೆ ಬಂದಿಲ್ಲ. ಕಾರ್ಪೋರೇಟ್ ಕಂಪನಿಗಳ ೧೪ ಲಕ್ಷ ಕೋಟಿ ರೂ. ಸಾಲಮನ್ನಾ ಮಾಡಿದ ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ವರದಿ ಜಾರಿ ಮಾಡುತ್ತೇವೆ. ಎಂ.ಎಸ್.ಪಿ. ಜಾರಿ ಮಾಡುತ್ತೇವೆ ಎಂದಿತ್ತು. ಆದರೆ, ವರ್ಷಕ್ಕೆ ೬ ಸಾವಿರ ರೂ. ರೈತರಿಗೆ ನೀಡಿ ಮೋಸ ಮಾಡುತ್ತಿದೆ ಎಂದು ದೂರಿದರು.

ರೈತರ ಹೆಸರಲ್ಲಿ ಅಧಿಕಾರಕ್ಕೆ ಬಂದ ಬಿ.ಎಸ್. ಯಡಿಯೂರಪ್ಪ ಕೃಷಿ ಜಮೀನು ರೈತರನ್ನು ಹೊರತುಪಡಿಸಿ ಬೇರೆ ಯಾರಿಗೂ ಮಾರಾಟ ಮಾಡಬಾರದೆಂಬ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಿ ಸಾವಿರಾರು ಎಕರೆ ಜಮೀನನ್ನು ಉದ್ಯಮಿಗಳ ಪಾಲು ಮಾಡಿದರು. ಈಗ ರೈತರಿಗೆ ಜಮೀನಿಲ್ಲ. ಭೂಮಿ ಇದ್ದ ರೈತರಿಗೆ ಬೆಳೆಗೆ ಬೆಲೆ ಇಲ್ಲದ ಪರಿಸ್ಥಿತಿ ಇದ್ದು, ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ರೈತ ಚಳವಳಿಯಲ್ಲಿ ಭಾಗವಹಿಸಿದ ಸಿದ್ಧರಾಮಯ್ಯ ಕೂಡ ವಿಪಕ್ಷದಲ್ಲಿದ್ದಾಗ ನಮಗೆ ಮತ ನೀಡಿ ಅಧಿಕಾರಕ್ಕೆ ಬಂದ ೨೪ ಗಂಟೆಯೊಳಗೆ ಭುಸುಧಾರಣಾ ಕಾಯ್ದೆ ತಿದ್ದುಪಡಿ ಮಾಡುತ್ತೇವೆ. ರೈತರಿಗೆ ಕನಿಷ್ಟ ಬೆಂಬಲ ಬೆಲೆ ನೀಡುತ್ತೇವೆ ಎಂದಿದ್ದರು. ಈಗ ಎರಡೂವರೆ ವರ್ಷವಾಗಿದೆ. ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಅಭಿವೃದ್ಧಿ ಎಂದರೆ ದುಡಿಯುವವರ ಆರ್ಥಿಕ ಸುಸ್ಥಿತಿ. ಮತ್ತು ಸರ್ಕಾರದ ಯೋಜನೆ ಜನರ ಆದಾಯ ರೂಪಿಸುವಂತಿರಬೇಕು ಎಂದರು.
ಇದು ಜಾರಿಗೆ ಬರಬೇಕಾದರೆ ಕರ್ನಾಟಕದಾದ್ಯಂತ ಒಗ್ಗಟ್ಟಾಗಿ ಲಕ್ಷಾಂತರ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ದೊಡ್ಡಮಟ್ಟದಲ್ಲಿ ಪ್ರತಿಭಟನೆ ಮಾಡಿ ಸರ್ಕಾರವನ್ನು ದಾರಿಗೆ ತರಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಾಣೆಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ ಮಾತನಾಡಿ, ರೈತರ ದೇಶವಾಗಬೇಕು ಎಂದು ರೈತರು ಮುಖ್ಯವಾಗಿ ಸಂಘಟಿತರಾಗಬೇಕು. ವಿವೇಕದ ಹೋರಾಟ ನಡೆಸಬೇಕು. ರಾಜಕೀಯ ಹೊಣೆಗಾರಿಕೆಯೂ ಇರಬೇಕು. ತಮ್ಮ ಮತ ಮಾರಿಕೊಳ್ಳಬೇಕು. ಒಳ್ಳೆಯವರಿಗೆ ಮತ ನೀಡಬೇಕು. ಜಾತೀಯತೆ ಹೆಸರಿನಲ್ಲಿ ಚುನಾವಣೆಗಳನ್ನು ನಡೆಸಬಾರದು ಎಂದರು.
ಕಾರ್ಯಕ್ರಮದಲ್ಲಿ ರೈತಸಂಘದ ಗೌರವಾಧ್ಯಕ್ಷ ಎನ್.ಕೆ. ಮಂಜುನಾಥಗೌಡ, ಪ್ರಮುಖರಾದ ಭಕ್ತರಹಳ್ಳಿ ಬೈರೇಗೌಡ, ಹನುಮಂತಪ್ಪ, ಎನ್. ಉಮೇಶ್ ಪಾಟೀಲ್, ಮಲ್ಲನಗೌಡ ಪಾಟೀಲ್, ವೀರಣ್ಣ, ಅರುಣ್ ಕುಮಾರ್, ಶಿವಪ್ಪ, ವೈ.ಹೆಚ್. ನಾಗರಾಜ್, ಶಿವಣ್ಣ, ಮಂಜುನಾಥ್, ರವಿ, ಸಉರೇಶ್ ನಾಯ್ಕ್, ಇದ್ದರು.