ಶಿವಮೊಗ್ಗ: ಜಿಲ್ಲಾದ್ಯಂತ ನಿನ್ನೆ ಬೆಳಿಗ್ಗೆಯಿಂದ ಭಾರೀ ಮಳೆಯಾಗುತ್ತಿದ್ದು, ಇಂದೂ ಕೂಡ ಮಳೆಯ ಅಬ್ಬರ ಮುಂದುವರಿದಿದೆ. ಇದರಿಂದ ನದಿಗಳು ಉಕ್ಕಿ ಹರಿಯಲಾರಂಭಿಸಿವೆ. ಪ್ರಮುಖ ಜಲಾಶಯಗಳಾದ ತುಂಗಾ, ಭದ್ರಾ ಹಾಗೂ ಲಿಂಗನಮಕ್ಕಿ ಒಳಹರಿವಿನಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಇದರ ಪರಿಣಾಮ ಲಿಂಗನಮಕ್ಕಿ ಆಣೆಕಟ್ಟೆಯ ಎಲ್ಲ ಕ್ರಸ್ಟ್ ಗೇಟುಗಳನ್ನೂ ತೆರೆದು ೧೫ ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಲಿಂಗನಮಕ್ಕಿ ಜಲಾಶಯದ ಭರ್ತಿಗೆ ಇನ್ನು ಕೇವಲ ೪ ಅಡಿ ಮಾತ್ರ ಬಾಕಿಯಿದೆ. ಇಂದು ಬೆಳಿಗ್ಗೆಯ ಮಾಹಿತಿಯಂತೆ ಡ್ಯಾಂನ ನೀರಿನ ಮಟ್ಟ ೧೮೧೬.೨೦ (ಗರಿಷ್ಠ ಮಟ್ಟ : ೧೮೧೯) ಅಡಿಗೆ ತಲುಪಿದೆ. ನೀರಿನ ಒಳಹರಿವು ೪೮೩೯೩ ಕ್ಯೂಸೆಕ್ ಇದ್ದು, ೪೫೨೦ ಕ್ಯೂಸೆಕ್ ಹೊರ ಹರಿವಿದೆ.

ಗಾಜನೂರಿನ ತುಂಗಾ ಜಲಾಶಯದ ಒಳಹರಿವು ೭೫೭೯೬ ಕ್ಯೂಸೆಕ್ ಇದ್ದು, ೭೬೭೫೭ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಡ್ಯಾಂನಿಂದ ನೀರಿನ ಹೊರ ಹರಿವಿನ ಪ್ರಮಾಣ ಹೆಚ್ಚಾಗಿರುವುದರಿಂದ, ಶಿವಮೊಗ್ಗದಲ್ಲಿ ತುಂಗಾ ನದಿಯು ಮೈದುಂಬಿ ಹರಿಯುತ್ತಿದೆ. ಹೊರ ಹರಿವು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದ್ದು, ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ..

ಭದ್ರಾ ಡ್ಯಾಂ ಒಳಹರಿವು ೩೪,೭೪೨ ಕ್ಯೂಸೆಕ್ ಇದ್ದು ಡ್ಯಾಂನ ನೀರಿನ ಮಟ್ಟವನ್ನು ೧೮೪. ೬ ಅಡಿಗೆ ಕಾಯ್ದುಕೊಳ್ಳಲಾಗಿದೆ. ೩೮೩೪೨ ಕ್ಯೂಸೆಕ್ ನೀರನ್ನು ಹೊರ ಬಿಡುತ್ತಿರುವುದರಿಂದ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಹೊಸ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ವಾಹನ ಸಂಚಾರ ನಿಬಂಧಿಸಲಾಗಿದೆ.

ನದಿ ಪಾತ್ರದ ಕವಲುಗುಂದಿ ಏರಿಯಾದಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ಆಡಳಿತ ತಿರುವಳ್ಳುವರ್ ಸಮುದಾಯ ಭವನದಲ್ಲಿ ತಾತ್ಕಾಲಿಕ ಪುನರ್ವಸತಿ ಕೇಂದ್ರ ತೆರೆದು, ನಿವಾಸಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿದೆ.